Akhil Karnataka Cultural Council ಶಿಕ್ಷಕರ ತಂಡ ಕಟ್ಟಿಕೊಂಡು ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿಯೋಜಿತರಾಗಿರುವುದು ಬಹಳ ಸಂತೋಷ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಂಸ್ಥಾಪಕ ರಾಜ್ಯಾಧ್ಯಕ್ಷ ಮನೋಹರ್ ನಾಯಕ್ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಪರಿಷತ್ ರಚನೆಯಾಗಿದೆ. ಶ್ರೀ ಸಿದ್ದೇಶ್ಚರ ಸ್ವಾಮಿಗಳ ಕೃಪಾಶೀರ್ವಾದಿಂದ ಕನ್ನಡ ನಾಡು ನುಡಿ ಕಟ್ಟುವ, ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ, ಸಮಾಜಮುಖಿ ಕೆಲಸ ಮಾಡಿ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವ ಗುರಿ ಪರಿಷತ್ ಮಾಡಲಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷೆ ಶಾಹಿನ್ ಬಾನು ಮಾತನಾಡಿ, ನಾಡು ನುಡಿಗಾಗಿ ಅಳಿಲು ಸೇವೆ ಮಾಡಲು ಜವಾಬ್ದಾರಿ ಪಡೆದಿದ್ದೇನೆ. ನನ್ನ ಕುಟುಂಬದ ಸಹಕಾರವಿದೆ. ನಾನು ಕನ್ನಡ ಮಣ್ಣಿಗೆ ಚಿರಋಣಿ ಎಂದರು.
ಸಾಂಸ್ಕೃತಿಕ ಪರಿಷತ್ ನುಡಿಸಿರಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಮೇರಿ ಡಿಸೋಜಾ ಅವರು ವಿವಿಧ ದೇಶಗಳ ನಾಣ್ಯಗಳು, ನೋಟುಗಳು, ಸ್ಟಾö್ಯಂಪ್‌ಗಳ ಸಂಗ್ರಹಣೆಯನ್ನು ಪ್ರದರ್ಶಿಸಿದರು. ಆಶಾರಾಣಿ ಅವರು ಕನ್ನಡ ನಾಡು ನುಡಿಯನ್ನು ಪ್ರತಿಬಿಂಬಿಸುವ ಸಾಹಿತ್ಯ ಕ್ಯಾಲೆಂಡರ್ ಪ್ರದರ್ಶಿಸಿದರು.
ಹಸನ್ ಸಾಬ್ ಬೆಳ್ಳಿಗನೂಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಗಳಲ್ಲಿ ಮಕ್ಕಳಿಗೆ ಸ್ಪಷ್ಟವಾಗಿ ಕನ್ನಡ ಭಾಷೆ ಓದುವುದು, ಬರೆಯುವುದನ್ನು ಕಲಿಸಬೇಕು. ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ತಿಳಿಸಬೇಕು. ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಮಥುರಾ ನಾಗರಾಜ್, ಡಾ. ಪಂಚಯ್ಯ ಆರ್.ಹಿರೇಮಠ, ಸಾಜಿದ್ ಅಹಮದ್, ನಾಗಭೂಷಣ್, ನಾರಾಯಣ ನಾಯ್ಕ, ಗಿರೀಶ್ ವರ್ಮ, ವಿನ್ನಿ ಮ್ಯಾಥ್ಯೂ, ಶಶಿರೇಖಾ, ಮೇರಿ ಡಿಸೋಜ, ಸತೀಶ್, ಪ್ರಕಾಶ್ ಮರವಂಜಿ, ಬಸವನಗೌಡ, ವಾಗೀಶ್ ಆರಾಧ್ಯ, ಜರಿನಾ, ಪೂರ್ಣಿಮಾ ದಾದಾವಲ್ಲಿ, ಪ್ರಭಾಕರ್, ತ್ರಿವೇಣಿ, ಶಿಕ್ಷಕರ ತಂಡ ಉಪಸ್ಥಿತರಿದ್ದರು. ಜಿಲ್ಲಾ ಪದಾಧಿಕಾರಿಗಳಿಗೆ ಸೇವಾದೀಕ್ಷೆ ನೀಡಲಾಯಿತು. ಶೋಭಾ ಸತೀಶ್ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಸೂರ್ಯ ನಿರೂಪಿಸಿದರು. ಪೂರ್ಣಿಮಾ ಎಲ್ಲರನ್ನು ವಂದಿಸಿದರು.