ವರದಿ : ಪ್ರಭಾಕರ ಕಾರಂತ
Sri Vidhushekhara Bharati Mahaswamiji ಕಾಶೀ ವಿಶ್ವನಾಥ ಸನ್ನಧಿಗೆ ಶೃಂಗೇರಿಯ ಜಗದ್ಗುರುಗಳ ಪ್ರವೇಶ ಎಂದಿನಂತೆ ಭವ್ಯವಾಗಿ ಆಗಿದೆ.ಮೂರು ದಶಕ ಆಗಿತ್ತು ಇಲ್ಲಿಗೆ ಶೃಂಗೇರಿಯ ಜಗದ್ಗುರುಗಳು ಬಂದು.ಜಗದ್ಗುರು ಶ್ರೀ ಭಾರತೀತೀರ್ಥರು ಆಗ ಕಾಶಿಗೆ ಆಗಮಿಸಿ ವಿಶ್ವನಾಥನನ್ನು ಪೂಜಿಸಿದ್ದರು. ಅದಕ್ಕೂ ಮೊದಲು 48 ವರ್ಷದ ಹಿಂದೆ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ತಮ್ಮ ಕರಕಮಲ ಸಂಜಾತ ಶ್ರೀ ಭಾರತೀತೀರ್ಥರೊಂದಿಗೆ ಪ್ರಯಾಗರಾಜ್ ಕುಂಬಮೇಳ ಮುಗಿಸಿ ಕಾಶಿಗೆ ಆಗಮಿಸಿದ್ದರು. ಆಗ ಅವರು ಕಾಶೀ ಶ್ರೀ ಅನ್ನಪೂರ್ಣೇಶ್ವರಿಯ ಮಂದಿರದ ಮೂರ್ತಿ ಪ್ರತಿಷ್ಠೆ ಕುಂಬಾಬಿಶೇಕ ನೆರವೇರಿಸಿದ್ದರು. ಈಗ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳು ಆಗಮಿಸಿ ಶ್ರೀ ಅನ್ನಪೂರ್ಣೇಶ್ವರಿಯ ನೂತನ ಮೂರ್ತಿ ಪ್ರತಿಷ್ಠೆ,ಸ್ವರ್ಣಕಲಸ ಸಮರ್ಪಣೆ ಕುಂಬಾಬಿಶೇಕ ನೆರವೇರಿಸಲಿದ್ದಾರೆ. ಜಗದ್ಗುರುಗಳನ್ನು ಕಾಶೀ ಮಹಾಪೌರ,ಕಾಶೀ ಮಹಾರಾಜ,ಕಾಶೀ ಅನ್ನಪೂರ್ಣ ದೇವಸ್ಥಾನದ ಶ್ರೀ ಶಂಕರ್ ಗುರೂಜಿ ಮಹಂತ್, ಕಾಶೀ ವಿದ್ವನ್ಮಂಡಲಿ,ಕಾಶೀ ವಿದ್ವತ್ ಪರಿಷತ್ ಮಂತಾದ ಪ್ರಮುಖರು ಸ್ವಾಗತಿಸಿದರು.ಕಾಶಿಯ ಜನ ಸ್ವಾಗತ ಸಭೆಯನ್ನು ನಡೆಸಿಕೊಟ್ಟರು. ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆಗೆ ಶುಭ ಮುಹೂರ್ತ ಇಟ್ಟುಕೊಟ್ಟ ಶ್ರೀ ಗಣೇಶ್ವರ ದ್ರಾವಿಡ್ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ದರ್ಶನ ಪಡೆದರು. ಅಯೋಧ್ಯೆಯ ಮುಹೂರ್ತ ಸಮರ್ಪಕವಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದು,ಮಂದಿರ ನಿರ್ಮಾಣ ಮುಗಿಯದೇ ಪ್ರಾಣ ಪ್ರತಿಷ್ಠೆ ಸಲ್ಲದು ಎಂದೂ ವಿವಾದ ಸೃಷ್ಟಿಯಾದಾಗ ಶೃಂಗೇರಿಯ ಜಗದ್ಗುರುಗಳಿಂದ ಪ್ರಾಣ ಪ್ರತಿಷ್ಠೆಯ ಮುಹೂರ್ತ ಮತ್ತು ಗರ್ಭಗುಡಿಯು ಪೂರ್ಣವಾದಾಗ ಪ್ರತಿಷ್ಠೆ ಮಾಡಬುದೆಂಬ ಅಭಿಪ್ರಾಯ ವ್ಯಕ್ತವಾಗಿದ್ದು ಉಲ್ಲೇಖಾರ್ಹ.
ಇಂದು ಕಾಶೀ ವಿಶ್ವನಾಥ ಸ್ವಾಮಿಗೆ ಶ್ರೀಗಳು ವಿಶೇಷ ಪೂಜೆ ಸಮರ್ಪಿಸಿದರು. ನಂತರ ಆಯುತ ಮೋದಕ ಮಹಾಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.ಭಗವತಿ ಅನ್ನಪೂರ್ಣೇಶ್ವರಿಯ ಮಂದಿರದಲ್ಲಿ ಕೋಟಿ ಕುಂಕುಮಾರ್ಚನೆಯು ಗುರುಗಳ ಉಪಸ್ಥಿತಿಯಲ್ಲಿ ಶುಭಾರಂಬಗೊಂಡಿತು. ಕಾಶೀ ವಿಶಾಲಕ್ಷಿ ದರ್ಶನ, ಬಿಂದು ಮಾಧವನಲ್ಲಿ ಲಕ್ಷ ತುಳಸಿ ಅರ್ಚನೆ ಮತ್ತು ಮಂಗಳಾರತಿ ನಡೆಸಿ ಜಗದ್ಗುರುಗಳಿಂದ ಕಾಶೀ ಪಂಚಗಂಗಾ ಘಾಟ್ ನ ಶೃಂಗೇರಿಯ ಶಾಖಾ ಮಠದ ಬೇಟಿ ನಡೆಯಿತು. ನಾಳೆ ಸಹಸ್ರ ಚಂಡೀಯಾಗದ ಶುಭಾರಂಬ ಗುರುಗಳ ಉಪಸ್ಥಿತಿಯಲ್ಲಿ ಜರುಗಲಿದೆ. ಸಂಜೆ ಶ್ರೀಗಳ ಅನುಗ್ರಹ ಭಾಷಣವಿದೆ. ವಿವಿದ ದೇವಸ್ಥಾನಗಳ ಬೇಟಿ,ವೇದ ಪುರಾಣ ಪಾರಾಯಣ,ಶಾಸ್ತ್ರ ಸಭೆ,ಧಾರ್ಮಿಕ ಕಾರ್ಯಕ್ರಮ, ಅನುಗ್ರಹ ಭಾಷಣ,ಚಂದ್ರಮೌಳೇಶ್ವರ ಪೂಜೆ, ಭಕ್ತರಿಗೆ ದರ್ಶನ ಎಂದು ಜಗದ್ಗುರುಗಳ ಪ್ರತಿ ಕ್ಷಣವೂ ಸದ್ಬಳಕೆ ಆಗುತ್ತಿದೆ.
ಎಲ್ಲಿಯ ಧಕ್ಷಿಣದ ಶೃಂಗೇರಿ,ಎಲ್ಲಿಯ ಉತ್ತರದ ಪ್ರಪಂಚದ ಪ್ರಾಚೀನ ನಗರಿ ಕಾಶಿ.ಈ ಬೆಸುಗೆ ಬೆಸೆದಿದ್ದು ಶಂಕರ ಭಗವತ್ಪಾದರು.ಅವರು ಮೂರ್ತಿಯೊಂದು ಕಾಶಿ ವಿಶ್ವನಾಥ ಕಾರಿಡಾರ್ ನಲ್ಲೇ ಸ್ಥಾಪಿಸಲಾಗಿದೆ. ಕಾಶಿಯ ಪುನರುತ್ಥಾನ ಮಾಡಿದ ಅಹಲ್ಯಾಬಾಯ್ ಹೋಳ್ಕರ್ ಪ್ರತಿಮೆಯೂ ಅಲ್ಲಿದೆ. ಸನಾತನ ಧರ್ಮದ ಪುನರುತ್ಥಾನಕ್ಕೆ ಆದಿ ಶಂಕರಾಚಾರ್ಯರು ಅವತರಿಸದಿದ್ದರೆ ಇಂದು ಭಾರತ ಬೇರೆಯೇ ದೇಶವಾಗಿ ಬೇರೆಯೇ ಧರ್ಮ ಆಚರಿಸುವಂತಾಗುತ್ತಿತ್ತು. ಶೃಂಗೇರಿಯ ಜಗದ್ಗುರುಗಳನ್ನೇ ಶಂಕರ ಭಗವತ್ಪಾದರ ಪ್ರತಿ ರೂಪ ಎಂದು ಈ ಪುಣ್ಯ ಕ್ಷೇತ್ರ ಸೇರಿದಂತೆ ಉತ್ತರದ ಭಕ್ತರು ನಂಬುತ್ತಾರಾಗಿ ಜಗದ್ಗುರುಗಳ ಬೇಟಿಗೆ ಅಷ್ಟೊಂದು ಮಹತ್ವ ದೊರಕುತ್ತದೆ. ದಿನವೂ ಸಾವಿರ ಸಂತರು ಬಂದು ಹೋಗುವ ಪುಣ್ಯಭೂಮಿ ಅದು. ಹೀಗಿದ್ದೂ ಶೃಂಗೇರಿಯ ಜಗದ್ಗುರುಗಳ ಪಾದಸ್ಪರ್ಶಕ್ಕೆ ಈ ಪವಿತ್ರ ಕ್ಷೇತ್ರ ಎದುರುನೋಡುತ್ತದೆ. ಮೂವತ್ತು ವರ್ಷದ ನಂತರ ಇಲ್ಲಿಗೆ ಬಂದೆವು ಅಂದರೆ ಮತ್ತೆ ಬರಲು ಮೂವತ್ತು ವರ್ಷ ಆದೀತು ಎಂದಲ್ಲ. ನಾವು ಪುನಃ ಪುನಃ ಕಾಶಿ ದರ್ಶನ ಮಾಡುತ್ತೇವೆ ಎಂದು ಜಗದ್ಗುರುಗಳು ಹೇಳಿದಾಗ ಕಾಶೀ ಮಹಾಜನತೆ ಹರ್ಷೋಲ್ಲಾಸದಿಂದ ಸ್ವಾಗತಿಸಿದರು. 48 ವರ್ಷದ ಹಿಂದೆ ಕುಂಬಮೇಳದ ನಂತರ ನಮ್ಮ ಪರಮಗುರುಗಳು ನಮ್ಮ ಗುರುಗಳ ಜೊತೆ ಆಗಮಿಸಿ ಅನ್ನಪೂರ್ಣೇಶ್ವರಿಯ ಪುನರ್ ಪ್ರತಿಷ್ಠೆ ಕುಂಬಾಬಿಶೇಕ ನೆರವೇರಿಸಿದ್ದರು. ಈಗ ನಾವೊಬ್ಬರೇ ಬಂದಿಲ್ಲ. ನಮ್ಮ ಗುರುಗಳ ತಪಸ್ಸಿನ ಶಕ್ತಿ,ಅನುಗ್ರಹ ನಮ್ಮ ಜೊತೆಗೇ ಇದೆ.ನಮ್ಮ ಯಾತ್ರೆ ನಡೆಸುವವರು ಅವರು ಎಂದು ಕಾಶೀ ಪುರಪ್ರವೇಶ ಸಮಾರಂಭದಲ್ಲೇ ಸನ್ನಿಧಾನ ತಿಳಿಸುವ ಮೂಲಕ ಅಚಲ ಗುರುಭಕ್ತಿಯನ್ನು ಪ್ರಕಟಿಸಿದರು. ಇನ್ನು ಫೆಬ್ರುವರಿಯ ಒಂಬತ್ತರ ವರೆಗೆ ಕಾಶಿಯಲ್ಲಿ ಶೃಂಗೇರಿಯ ಜಗದ್ಗುರುಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನಂತರ ಅವರು ಅಯೋಧ್ಯೆಯ ಪ್ರಭು ರಾಮನ ದರ್ಶನ ಪಡೆಯಲಿದ್ದಾರೆ.ಅಯೋಧ್ಯೆಯ ಶ್ರೀ ರಾಮಮಂದಿರ ಟ್ರಸ್ಟ್ ಜಗದ್ಗುರುಗಳ ಬೇಟಿಗೆ ವಿಶೇಷ ಏರ್ಪಾಟು ಮಾಡಿದೆ. ಪ್ರಯಾಗ್ ರಾಜ್ ಸೇರಿದಂತೆ ಜಗದ್ಗುರುಗಳ ಬೇಟಿಯ
ಸಂಧರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದವರು ವಿಶೇಷ ಏರ್ಪಾಟಿನಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾಶಿಯ ಸ್ವಾಗತ ಸಮಾರಂಭದಲ್ಲೂ ಅವರಿದ್ದರು.ವಿಶ್ವ ಹಿಂದೂ ಪರಿಷತ್ತಿನ ಮುಖ್ಯಸ್ಥರೇ ಪ್ರಯಾಗ್ ರಾಜ್ ನಲ್ಲಿ ಗುರುದರ್ಶನ ಮಾಡಿದ್ದರು. ಅವರಿಗೆ ಖುರ್ಚಿಯ ಮೇಲೆ ಕೂರುವ ಅವಕಾಶ ಇದ್ದಾಗಲೂ ಅವರು ನೆಲದ ಮೇಲೇ ಇತರ ಮುಖಂಡರ ಜೊತೆ ಕುಳಿತೇ ಗುರುಗಳೊಂದಿಗೆ ಮಾತುಕತೆ ನಡೆಸಿದರು.
ಧಕ್ಷಿಣ ಭಾರತದಲ್ಲಿ ಗುರುದರ್ಶನಕ್ಕೆ ಇರುವ ಪದ್ದತಿಗೂ ಉತ್ತರ ಭಾರತಕ್ಕೂ ವ್ಯತ್ಯಾಸವಿದೆ.ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥರು ಶೃಂಗೇರಿಯ ಜಗದ್ಗುರುಗಳಿಗೆ ಕಾಷಾಯ ವಸ್ತ್ರ ಹೊದಿಸಿದರು. ಉತ್ತರ ಭಾರತದಲ್ಲಿ ಗುರುಗಳಿಗೆ ನಮಸ್ಕರಿಸುವ ರೀತಿಯೂ ಬೇರೆ.ಗಣ್ಯರು ಗುರುಗಳ ಎದುರು ಪೂರ್ತಿ ವಸ್ತ್ರ ತೊಟ್ಟೇ ಖುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ.
ಅಮಿತ್ ಶಾ ತಮಗೆ ಗುರುಗಳು ಅನುಗ್ರಹ ಪೂರ್ವಕವಾಗಿ ಹೊದಿಸಿದ ಶಾಲನ್ನು ತಕ್ಷಣ ತೆಗೆದರು. ನನಗೆ ಪಿ.ವಿ.ನರಸಿಂಹ ರಾವ್ ಪ್ರಧಾನಿ ಆದಾಗ ಶೃಂಗೇರಿಗೆ ಬಂದ ಒಂದು ಸಂಧರ್ಭ ನೆನಪಿಗೆ ಬಂದಿತು. ಶೃಂಗೇರಿಯ ಶಂಕರಾಚಾರ್ಯರ ಮೂರ್ತಿ ಸ್ಥಾಪನೆಯ ಶಂಕುಸ್ಥಾಪನಾ ಸಮಾರಂಭ ಅದು. ಶ್ರೀ ಭಾರತೀತೀರ್ಥರು ಪ್ರಧಾನಿಗೆ ಶಾಲು ಅನುಗ್ರಹಿಸಿದ ತಕ್ಷಣ ಅವರು ಅದನ್ನು ತೆಗೆಯ ಹೊರಟಾಗ ಸ್ವಲ್ಪಕಾಲ ಅದು ಇಟ್ಟುಕೊಳ್ಳಿ ಎಂದು ಗುರು ಅಪ್ಪಣೆ ಆಯಿತು. ವಿನೀತ ವಿದ್ಯಾರ್ಥಿಯಂತೆ ಪ್ರಧಾನಿ ಅದನ್ನು ಪಾಲಿಸಿದ್ದರು. ನಂತರ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿಯವರಿಗೆ ಹಾಗೆ ಹೇಳಬೇಕಾಗೂ ಬರಲಿಲ್ಲ. ಆಗಲೂ ವೇದಿಕೇಯಲ್ಲಿ ಗುರುಗಳು ಮಾತ್ರ.ಸಭಿಕರ ಪ್ರಥಮ ಸಾಲಿನಲ್ಲಿ ಪ್ರಧಾನಿ ಮತ್ತು ಮುಖ್ಯ ಮಂತ್ರಿಗಳು. ನನಗೂ ಶೀರ್ನಾಳಿ ಚಂದ್ರಶೇಖರ್ ಕೃಪಿಯಿಂದ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿತ್ತು.
ಶೃಂಗೇರಿಯ ಗುರುಪರಂಪರೆಗೆ ಇರುವ ವಿಶೇಷ ಗೌರವ ಎಲ್ಲಾ ಕಾಲಕ್ಕೂ ಮುಂದುವರೆಯಲಿದೆ.
