Sharan Machideva Jayanti ಮಡಿವಾಳ ಮಾಚಿದೇವರ ಹುಟ್ಟಿದ ದಿನದ ಬಗ್ಗೆ ನಿಖರವಾದ ಮಾಹಿತಿ ಇಲ್ಲ, ಆದರೂ ಬಲ್ಲ ಮೂಲಗಳಿಂದ ಫೆಬ್ರವರಿ 1 ರಂದು ಇವರ ಜಯಂತಿಯನ್ನು ಆಚರಿಸಲಾಗುತ್ತದೆ. ಹನ್ನೆರಡನೇ ಶತಮಾನದ ಶರಣರ ಇತಿಹಾಸವು ವಿಶ್ವದ ಇತಿಹಾಸದಲ್ಲಿ ಒಂದು ಬೆಳ್ಳಿ ಚುಕ್ಕಿ. ಸಾಮಾನ್ಯ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ಕಿತ್ತೆಸೆದು ಆತ್ಮಗೌರವ ಬೆಳೆಸಿಕೊಳ್ಳುವ ಧೈರ್ಯ ತುಂಬಿದವರೆಂದರೆ ಶರಣರು. ಅಂದು ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೋಸ-ವಂಚನೆ, ಮೇಲು- ಕೀಳು ಎಂಬ ಭಾವನೆಯನ್ನು ತೊಡೆದುಹಾಕಿದರು. ಅಧ್ಯಾತ್ಮದಲ್ಲಿ ಗಂಡು-ಹೆಣ್ಣು ಸಮಾನರೆಂದು ತಮ್ಮ ವಚನಗಳಿಂದ ಸಾರಿದರು. ಕನ್ನಡ ನಾಡಿನಲ್ಲಿ ಧರ್ಮದ ಉಳಿವಿಗಾಗಿ ಸಾಮಾಜಿಕ ಕ್ರಾಂತಿಯ ಕೇಂದ್ರವ್ಯಕ್ತಿ ಬಸವಣ್ಣನವರಾದರೆ; ಅಲ್ಲಮ, ಸಿದ್ದರಾಮ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಮುಂತಾದವರು ಈ ಕ್ರಾಂತಿಯಲ್ಲಿ ಧುಮುಕಿದವರೆನ್ನಬಹುದು. ಇವರು ಅನುಭವ ಮಂಟಪದಲ್ಲಿ ಸೇರಿ ವಿಚಾರಮಂಥನ ನಡೆಸಿ ಹೊಸ ಮೌಲ್ಯಗಳನ್ನು ನಿರ್ಣಯಿಸುತ್ತಿದ್ದರು. ಕಲ್ಯಾಣದಲ್ಲಿ ಲಕ್ಷದ ತೊಂಭತ್ತಾರು ಸಾವಿರ ಶಿವಶರಣರಿದ್ದರು.
ಬಸವಾದಿ ಪ್ರಥಮರಲ್ಲಿಯೇ ಬಸವಣ್ಣನವರಿಗೆ ಬಲಗೈಯಂತೆ ಇದ್ದವರು ಶರಣ ಮಡಿವಾಳ ಮಾಚಯ್ಯ. ಇವರು ವೀರಭದ್ರನ ಅವತಾರವೆಂದು, ಗಣಾಚಾರಿ ವೀರಘಂಟೆ ಮಾಚಿದೇವರೆಂದು ಹಲವು ನಾಮಗಳಿಂದ ಜನಪ್ರಿಯರಾಗಿದ್ದರು. ಅಲ್ಲದೆ ರುದ್ರಮೂರ್ತಿ, ಭಾಳಲೋಚನಾವತಾರಿ, ನರಲೋಕ ಕಲಿರುದ್ರ, ಧೀರಕಾಯಕದ ಹುರಿಯಾಳು, ಕಾರುಣ್ಯ ರತ್ನಾಕರ, ಜಂಗಮಹಿಮಾಚಲ, ಅಜೇಯವೀರ, ರಜಕರತ್ನ, ಶರಣರಕ್ಷಣಮಣಿ ಮುಂತಾದ ಬಿರುದಾಂಕಿತರಾಗಿಯೂ ಶರಣರ ಪರಂಪರೆಯಲ್ಲಿ ಮಿನುಗಿದವರು.
● ಪೌರಾಣಿಕ ಹಿನ್ನೆಲೆ:- ಒಮ್ಮೆ ಶಿವನು ಒಡ್ಡೋಲಗದಲ್ಲಿದ್ದಾಗ ಗಣೇಶ್ವರನು ದಕ್ಷಬ್ರಹ್ಮನ ಯಜ್ಞವನ್ನು ಧ್ವಂಸ ಮಾಡಿ ವಿಜಯೋನ್ಮತ್ತನಾಗಿ ಸಭೆಯೊಳಗೆ ಬರುತ್ತಿದ್ದ. ಆಗ ಆತನು ಹೊದೆದ ಶಲ್ಯವು ಅಲ್ಲಿ ನೆರೆದ ಗಣಂಗಳ ಮೈಮೇಲೆ ಹಾದುಬಂದಿತು. ಅದನ್ನು ಕಂಡು ನ್ಯಾಯನಿಷ್ಠುರ ಶಿವನು ಗಣೇಶ್ವರನನ್ನು ಕುರಿತು, ‘ಹತ್ತು ಜನ ನೆರೆದು ಕುಳಿತೆಡೆ ಹೇಗೆ ನಡೆದುಕೊಳ್ಳಬೇಕೆಂಬುದು ನಿನಗೆ ತಿಳಿಯದು. ಗಣಂಗಳಿಗೆ ಅಪಚಾರವೆಸಗಿರುವಿ. ಆದ್ದರಿಂದ ನೀನು ಭೂಮಿಗೆ ಹೋಗಿ ಜನಿಸು. ಅಲ್ಲಿ ಶರಣರ ವಸ್ತ್ರಗಳನ್ನು ತೊಳೆದು ಮಡಿ ಮಾಡು. ಆಗ ನಿನಗೆ ಮುಕ್ತಿ ಎಂದ. ಅಂತೆಯೇ ವೀರಭದ್ರನೇ ಜನಿಸಿ ಮಾಚಿದೇವನಾದನೆಂದು ಹೇಳಲಾಗುತ್ತದೆ.
● ಜನಪದ ಹಿನ್ನೆಲೆ:- ಶರಣ ಮಾಚಿದೇವ ಹನ್ನರಡನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯ ಪರ್ವತಯ್ಯ-ಸುಗ್ಗಲವ್ವ ಶಿವಭಕ್ತ ದಂಪತಿಯ ಮಗನಾಗಿ ಜನಿಸಿದರು. ಮಾಚಯ್ಯನವರನ್ನು ವಿದ್ಯಾಭ್ಯಾಸಕ್ಕೆಂದು ಕುಲಗುರು ಕಲಿದೇವರ ಬಳಿ ತಂದೆ-ತಾಯಿ ಕಳಿಸಿದರು. ಶರಣ ಮಾಚಯ್ಯ ಅನುಭಾವದ ವಿದ್ಯೆ ಪಡೆದು, ಗುರುಗಳ ಆಶೀರ್ವಾದದಿಂದ ಕಲ್ಯಾಣಕ್ಕೆ ಬಂದರು. ಶರಣರ ಬಟ್ಟೆಯನ್ನು ತೊಳೆಯುವ ಕಾಯಕ ಮಾಡಿದರು. ಬಿಜ್ಜಳನ ಸೈನ್ಯದಲ್ಲಿ ಅಧಿಕಾರಿಯಾಗಿದ್ದು, ಬಸವಣ್ಣನವರ ಪ್ರಭಾವದಿಂದ ಶರಣರಾದರು.
● ಇಡೀ ಶರಣಧರ್ಮದಲ್ಲಿ ತನಗೊಂದು ಯೋಗ್ಯತೆ, ಅರ್ಹತೆ ಲಭ್ಯವಾಗಿದ್ದರೆ ಅದು ಶರಣ ಮಾಚಿದೇವನಿಂದ ಎಂದಿದ್ದಾರೆ ಬಸವಣ್ಣ. ‘ಕತ್ತಲೆಯೊಳಗೆ ಬೆಳಕು ಹೊಕ್ಕಂತಾಯಿತು ಶರಣ ಮಡಿವಾಳ ಮಾಚಿದೇವ ತಂದೆ ಕೃಪೆಯಿಂದ…’ ಎಂದು ಅಲ್ಲಮಪ್ರಭುಗಳು ಹೇಳಿರುವುದು ಮಾಚಿದೇವರ ಘನಜ್ಞಾನಕ್ಕೆ ಹಿಡಿದ ಕನ್ನಡಿ.
● ವಚನಗಳ ಸಂರಕ್ಷಕ:- ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಶರಣರ ವಚನ ಸಾಹಿತ್ಯವನ್ನು ನಾಶಪಡಿಸುವ ಪ್ರಯತ್ನ ನಡೆಯಿತಷ್ಟೆ. ಆಗ ಚನ್ನಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡು ಸಾವಿರ ಶರಣರ ತಂಡ ರಚನೆಯಾಯಿತು. ಮಾಚಿದೇವ ತಂಡದ ದಂಡನಾಯಕರಾಗಿ ವಚನ ಸಾಹಿತ್ಯವನ್ನು ಬೆನ್ನ ಮೇಲೆ, ತಲೆಯ ಮೇಲೆಯೇ ಹೊತ್ತು ಹೋರಾಡಿದರು. ಅಲ್ಲದೆ ವಚನ ಸಾಹಿತ್ಯದ ರಕ್ಷಣೆಗಾಗಿ ಮಾಚಿದೇವರು ಯುದ್ಧ ಮಾಡಿದರು. ಮುರುಗೋಡು ಯುದ್ಧದಲ್ಲಿ ಮೈಗೆ ಆದ ಗಾಯದಿಂದ ಬಳಲಿ ಇಷ್ಟಲಿಂಗದಲ್ಲಿ ತಲ್ಲೀನರಾಗಿ ಲಿಂಗೈಕ್ಯರಾದರು. ಹೀಗೆ ಶರಣರ ವಚನಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಮಾಚಿದೇವರು ಅಮರರಾದರು. ಇಂದು ಅವರ ಜಯಂತಿಯನ್ನು ನಾಡಿನ ಎಲ್ಲೆಡೆ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ.
●ಘನಜ್ಞಾನಿ ಮಾಚಿದೇವ:- ಒಮ್ಮೆ ಬಸವಣ್ಣನವರು, ಬೇಡುವ ಭಕ್ತರಿಲ್ಲದೆ ಬಡವಾದೆ ಎಂದರಂತೆ. ಈ ಸುದ್ದಿ ಮಾಚಿದೇವರಿಗೆ ತಿಳಿಯಿತು. ‘ಶಿವ! ಶಿವಾ! ಬಸವಣ್ಣನವರ ಬಾಯಲ್ಲಿ ಇಂಥ ಮಾತೆ?’ ಎಂದು ಕಿವಿ ಮುಚ್ಚಿಕೊಂಡರು. ವಿಷಯ ತಿಳಿದ ಬಸವಣ್ಣ ಮಾಚಿದೇವರ ಬಳಿ ಬಂದು ‘ಮಾಚಯ್ಯ, ನೀನು ಅರಿವಿನ ತಿರುಳು. ನಾನು ಮರೆವೆಯಿಂದ ಮಾಡಿದ ತಪ್ಪನ್ನು ನೀನು ಅರಿವಿನಿಂದ ತಿದ್ದಬೇಕು’ ಎನ್ನುತ್ತಾರೆ. ಮಾಚಿದೇವರ ಘನಜ್ಞಾನದ ಕುರಿತು ಬಸವಣ್ಣನವರು ಹೀಗೆ ಬಣ್ಣಿಸಿದ್ದಾರೆ;
ಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕದ ಮಾಚಿದೇವ, ‘ಅರಸುತನ ಮೇಲಲ್ಲ–ಅಗಸತನ ಕೀಳಲ್ಲ’ ಎಂಬುದನ್ನು ಸಾರಿದ ಅಚಲ ಕಾಯಕನಿಷ್ಠ ಶರಣ. ಮಡಿ ಬಟ್ಟೆ ಹೊತ್ತುಕೊಂಡು ‘ವೀರ ಘಂಟೆ’ ಬಾರಿಸುತ್ತ, ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂಬ ನಿಯಮವನ್ನು ಮಾಚಯ್ಯ ವಿಧಿಸಿಕೊಂಡಿದ್ದರು. ಕಾಯಕ ಮಾಡದ ಸೋಮಾರಿಗಳ – ಬಡವರನ್ನು ಶೋಷಿಸುವವರ, ದುರ್ಗುಣವುಳ್ಳವರ ಬಟ್ಟೆಗಳನ್ನು ಮುಟ್ಟದ ಮಾಚಿದೇವರು ವೀರಭದ್ರಾಂಶ ಸಂಭೂತ ಅವತಾರಪುರುಷ ಎಂಬ ಪ್ರತೀತಿಯಿದೆ.
Sharan Machideva Jayanti ● ವಚನಗಳ ರಚನೆ:- ಮಡಿವಾಳ ಮಾಚಿದೇವರು ಸಾವಿರಾರು ವಚನಗಳನ್ನು ಬರೆದಿರುವರೆಂಬ ಉಲ್ಲೇಖವಿದೆ. ಅವರು ಬರೆದಿರುವ 353 ವಚನಗಳು ಮಾತ್ರ ನಮಗೆ ಲಭ್ಯ. ಇವರ ವಚನಗಳಲ್ಲಿ ಉಪಮೆ, ರೂಪಕ ಮತ್ತು ನಾಣ್ಣುಡಿಗಳ ಬಳಕೆ ಹೇರಳವಾಗಿದೆ. ಅಲ್ಲದೆ ವಚನಗಳಲ್ಲಿ ದೃಷ್ಟಾಂತಗಳನ್ನೂ ಬಿಂಬಿಸಿದ್ದಾರೆ.
ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು.
ನಿಂದಕರ ನುಡಿಯ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು. ಅಹುದೆಂದಡೆ ಅಲ್ಲವೆಂದತಿಗಳೆವರು.
ಕುತರ್ಕ ಶಾಸ್ತ್ರದಿಂದ ಯಮಗತಿಗರ ಕೂಡೆ
ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಿಸಯ್ಯಾ ಕಲಿದೇವರದೇವ. ಇಲ್ಲಿ ಶಿವಭಕ್ತರು ಸತ್ವಪರೀಕ್ಷೆಗಳಿಂದ ಪರಿಶುದ್ಧರಾಗುತ್ತಾರೆ. ಆದರೆ ಹೀನಕೃತ್ಯಗಳನ್ನು ಮಾಡುವ ಜನರು ಹಲವು ಜನ್ಮಾಂತರಗಳಲ್ಲಿ ಬಳಲುತ್ತಾರೆ. ನನ್ನನ್ನು ಶಿವಭಕ್ತರಂತೆ ಶಿವಾಚಾರದ ಸನ್ಮಾರ್ಗ ತೋರಿಸೆಂಬ ಭಾವವು ಈ ವಚನದಿಂದ ವ್ಯಕ್ತವಾಗುತ್ತದೆ.