Karnataka Sarvodya Mandala National Conference ಈಸೂರಿನ ಹೋರಾಟಗಾರರ ಸ್ವಾತಂತ್ರ್ಯದ ಕೂಗು ಇಡೀ ದೇಶಾದ್ಯಂತ ಪ್ರತಿಧ್ವನಿಸಿತ್ತು. ದೇಶದಲ್ಲಿ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಊರು ಈಸೂರು ಗ್ರಾಮ ಎಂದು ಅಖಿಲ ಭಾರತ ಸರ್ವೋದಯ ಮಂಡಲದ ಅಧ್ಯಕ್ಷ ಚಂದನ್ ಪಾಲ್ ಹೇಳಿದರು.
ಈಸೂರಿನ ಹುತಾತ್ಮರ ಸ್ಮಾರಕದ ಆವರಣದಲ್ಲಿ ಸರ್ವೋದಯ ಮಂಡಲ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಮತ್ತು ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ಸ್ವಾತಂತ್ರ್ಯವಾಗಲು ಲಕ್ಷಾಂತರ ಹೋರಾಟಗಾರರು ಹುತಾತ್ಮವಾಗಿದ್ದಾರೆ. ಅವರೆಲ್ಲರ ಹೋರಾಟದ ಬದುಕು ನಮಗೆ ಸ್ಪೂರ್ತಿ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಪಾಟೀಲ್ ಮಾತನಾಡಿ, ಗ್ರಾಮದಲ್ಲಿ ಸರ್ವೋದಯ ಮಂಡಲ ವತಿಯಿಂದ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ. ಸ್ವಾತಂತ್ರ್ಯ ಹೋರಾಟ ಮತ್ತಷ್ಟು ಬಲಿಷ್ಠವಾಗಲು ಪ್ರೇರಣೆ ನೀಡಿದ ಗ್ರಾಮ ಈಸೂರು ಎಂದು ಹೇಳಿದರು.
Karnataka Sarvodya Mandala National Conference ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ. ಸುರೇಶ್ ಮಾತನಾಡಿ, ಸಮಾನತೆ ಮತ್ತು ಸಹೃದಯತೆ ಬೆಳೆಸುವುದೇ ಪ್ರಮುಖ ಉದ್ದೇಶ. ಸರ್ವೋದಯದ ಸಂದೇಶಗಳು ಪ್ರತಿ ಮನೆಗೂ ತಲುಪಬೇಕು ಎಂದು ತಿಳಿಸಿದರು.
ಈಸೂರಿನಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮೀಪ ಧ್ವಜಾರೋಹಣೆ ನೆರವೇರಿಸಿ ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಹುತಾತ್ಮರ ಸ್ಮಾರಕದವರೆಗೂ ನಡೆದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈಸೂರಿನ ಶಿವಯೋಗಿಗೌಡ, ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ತುಕರಾಮ್, ಗ್ರಾಪಂ ಉಪಾಧ್ಯಕ್ಷ ಕುಮಾರ್, ಸರ್ವೋದಯ ಮಂಡಲ ಸಂಚಾಲಕ ಸುಂದರರಾಜ್, ಬಸವರಾಜಪ್ಪ, ಡಾ. ವಿ.ಪ್ರಶಾಂತ್, ರೇಣುಕಮ್ಮ, ಲೀಲಾವತಿ, ಸತೀಶ್‌ಚಂದ್ರ, ಉಜ್ಜಳ್ಳಿ ಸುರೇಶ್, ಪ್ರಮುಖರಾದ ಜಿ.ವಿಜಯಕುಮಾರ್, ಮನೋಹರ, ಕೆ .ಲೈವ್ ನ್ಯೂಸ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ, ಕಾಂತೇಶ್, ವೆಂಕಟೇಶ್ ಮತ್ತಿತರರು ಇದ್ದರು.