Yuva Nidhi Scheme ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳ ಕಡ್ಡಾಯ ನೋಂದಣಿಯನ್ನು ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ಸೂಚಿಸಿದರು.
ಗುರುವಾರ ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಯುವನಿಧಿ ವಿಶೇಷ ನೋಂದಣಿ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವನಿಧಿ ಯೋಜನೆಯಡಿ ಈವರೆಗೆ 6273 ಫಲಾನುಭವಿಗಳು ನೋಂದಣಿಯಾಗಿದ್ದು, ಇದರಲ್ಲಿ ಪದವೀಧರರಿಗೆ ಹಾಗೂ ಡಿಪ್ಲೋಮಾ ಪದವೀಧರರಿಗೆ ಸೇರಿದಂತೆ 5300 ಫಲಾನುಭವಿಗಳ ಖಾತೆಗೆ ರೂ. 3000 ಹಾಗೂ ರೂ. 1500 ರಂತೆ ಒಟ್ಟು ರೂ. 9.45 ಕೋಟಿ ಜಮಾ ಮಾಡಲಾಗಿದೆ. ಎಲ್ಲ ಕಾಲೇಜುಗಳಲ್ಲಿ ಪ್ರಾಂಶುಪಾಲರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಫೆಬ್ರವರಿ ಒಳಗೆ ಅರ್ಹ ಫಲಾನುಭವಿಗಳ ನೋಂದಣಿ ಮಾಡಬೇಕೆಂದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಯುವನಿಧಿ ನೋಂದಣಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳಬೇಕಿದೆ. ಎನ್‌ಎಡಿಯಿಂದ ವಿದ್ಯಾರ್ಥಿಗಳಿಗೆ ನೋಂದಣಿ ಸಮಸ್ಯೆ ಆಗುತ್ತಿದ್ದು, ಇದನ್ನು ಇಲಾಖಾ ಮಟ್ಟದಲ್ಲಿ ಸರಿಪಡಿಸಲಾಗುತ್ತಿದೆ. ಸರ್ಕಾರವು ಕೂಡ ಈ ಕಡೆ ಗಮನ ಹರಿಸುತ್ತಿದೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ 2023-24 ರಲ್ಲಿ ಒಟ್ಟು 15000 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಪದವೀಧರರಾದ 13,000 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವೀಧರ 2260 ವಿದ್ಯಾರ್ಥಿಗಳು ಇದ್ದಾರೆ. 2023-24 ನೇ ಸಾಲಿನಲ್ಲಿ ಶಿವಮೊಗ್ಗ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬಿಎ, ಬಿಕಾಂ, ಬಿ.ಇಡಿ ಸೇರಿದಂತೆ ಒಟ್ಟು 11,143 ವಿದ್ಯಾರ್ಥಿಗಳು ಈಗಾಗಲೇ ತೇರ್ಗಡೆಯಾಗಿದ್ದಾರೆ. ಇದಲ್ಲದೇ ಕುವೆಂಪು ವಿಶ್ವವಿದ್ಯಾಲಯದ ಅಡಿಯಲ್ಲಿ 84 ಕಾಲೇಜುಗಳಲ್ಲಿ ವಿಶೇಷ ಯುವನಿಧಿ ನೋಂದಣಿ ಅಭಿಯಾನ ಆರಂಭವಾಗಿದೆ. ಆದರೆ ನೋಂದಣಿ ಕುರಿತು ನಿಖರ ಮಾಹಿತಿ ಇಲ್ಲ. ಈ ಕುರಿತು ಇಲಾಖೆಯು ಪ್ರಾಧಿಕಾರಕ್ಕೆ ಸರಿಯಾದ ಅಂಕಿ ಅಂಶಗಳನ್ನು ನೀಡುವ ಮೂಲಕ ವರದಿ ನೀಡಬೇಕು ಎಂದರು.
ತೋಟಗಾರಿಕೆ, ಕೃಷಿ,ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಈ ನೋಂದಣಿ ಕುರಿತು ಆಗುತ್ತಿರುವ ಗೊಂದಲಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ತಾಂತ್ರಿಕ ದೋಷಗಳ ಕುರಿತಂತೆ ಜ.28 ರ ಬುಧವಾರದಂದು ಈ ಮೂರು ಕಾಲೇಜುಗಳಿಗೆ ವಿಶೇಷ ತರಬೇತಿಯನ್ನು ನೀಡಲು ತೀರ್ಮಾನ ಕೈಗೊಂಡರು. ಕಾಲೇಜುಗಳಿಗೆ ಪ್ರಾಧಿಕಾರದಿಂದ ಅಧಿಕಾರಿಗಳನ್ನು ಕಳಿಸಿ ಅಲ್ಲಿ ನೋಂದಣಿ ಮಾಡುವುದಾಗಿ ಹೇಳಿದರು. ತಾಂತ್ರಿಕ ದೋಷದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಗಳು ಹಾಜರಿದ್ದರು.
Yuva Nidhi Scheme ಯುವನಿಧಿಗೆ ಕಡ್ಡಾಯ ನೋಂದಣಿ ಮಾಡಲು ಕ್ರಮ ಕೈಗೊಳ್ಳಿ- ಸಿ.ಎಸ್.ಚಂದ್ರಭೂಪಾಲ್
Date: