SN Channabasappa ಶಿವಮೊಗ್ಗ, ಜ.೨೧ ಭಾರತದಲ್ಲಿ ವಚನಕಾರರು, ದಾಸರು, ಮಹನೀಯರು ಒಂದೊಂದು ಶ್ರೇಷ್ಠ ಪರಂಪರೆಯನ್ನು ಉಳಿಸಿದ್ದಾರೆ. ಹಾಗಾಗಿ ಈ ದೇಶ ಸಾಂಸ್ಕೃತಿಕ ರಾಷ್ಟ್ರವಾಗಿದೆ ಎಂದು ವಿಧಾನಸಭಾ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬಿಗರ ಚೌಡಯ್ಯ ಅವರು ಶರಣರ ಪಂಕ್ತಿಯಲ್ಲಿ ಶ್ರೇಷ್ಠ ಸ್ಥಾನ ಗಳಿಸಿದ್ದಾರೆ. ಆ ಮೂಲಕ ದಿಗಂತಕ್ಕಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಅಂಬಿಗರ ಚೌಡಯ್ಯ ಅವರು ಜೀವನದಲ್ಲಿ ಸದಾ ನಿಜವನ್ನು ನುಡಿದರು. ಆ ರೀತಿಯಲ್ಲೆ ಬದುಕಿ ಬಾಳಿದರು. ಆ ಮೂಲಕವೇ ಅವರು ನಿಜಶರಣರಾದರು. ಅಂಬಿಗರ ಚೌಡಯ್ಯ ಅವರಿಗೆ ಯಾವುದೇ ಜಾತಿಯು ಅಡ್ಡಿ ಬರಲಿಲ್ಲ. ಅವರಲ್ಲಿದ್ದ ಜ್ಞಾನದ ಮಹಾ ಪಾರಂಗತಕ್ಕೆ ಬಸವಣ್ಣನವರ ಅನುಭವ ಮಂಟಪದಲ್ಲಿ ಜಾಗ ದೊರಕಿತ್ತು ಎಂದರು.
ಅಂಬಿಗಡ ಚೌಡಯ್ಯ ಅವರು ಕಾಯಕದಿಂದ ಶ್ರೇಷ್ಠತೆ ಪಡೆದುಕೊಂಡಿದ್ದಾರೆ. ಕಾಯಕದ ಮೂಲಕ ಬದುಕಿನಲ್ಲಿ ಖುಷಿಯನ್ನು ಕಂಡುಕೊಂಡುವರು. ತಮ್ಮ ವಚನಗಳ ಮೂಲಕ ಜನಮಾನಸದಲ್ಲಿ ಅನೇಕ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸಿದರು. ಇಂತಹ ಮಹಾನೀಯರ ವಚನಗಳನ್ನು ಕೈಪಿಡಿ ಮಾಡಿ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಹಂಚಬೇಕು. ಆಗ ಇಂತಹ ಜಯಂತಿಯ ಆಚರಣೆಗೆ ಅರ್ಥ ದೊರಕುತ್ತದೆ ಎಂದರು.
SN Channabasappa ಸಾಹಿತಿ ಪ್ರೊ. ಸತ್ಯನಾರಾಯಣ ಮಾತನಾಡಿ, ಈಗಿನ ಯುಗ, ಜ್ಞಾನ ಯುಗ. ಅದನ್ನು ವೃದ್ಧಿಸುವ ಅಗತ್ಯವಿದೆ, ಅದಕ್ಕೆ ಅಂಬಿಗರ ಚೌಡಯ್ಯನವರ ವಚನ ಸರಿಯಾದ ಮಾರ್ಗವಾಗಿದೆ. ನಮ್ಮ ಜೀವನದ ಮೌಲ್ಯ ಹೆಚ್ಚಾಗಬೇಕು. ಸಾರ್ಥಕ ಆಗಬೇಕು ಎಂದರೆ ಅದು ಅಂಬಿಗರ ವಚನದಿಂದ ಮಾತ್ರ. ಅದು ನಮ್ಮನ್ನು ಸದಾ ಎಚ್ಚರಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಚರಿತ್ರೆಯಲ್ಲಿ 12 ನೇ ಶತಮಾನ ವಿಶೇಷವಾದದ್ದು. ಯಾಕೆಂದರೆ ಜಾತಿ, ಶೋಷಣ, ಅಸಮಾನತೆ ಎಲ್ಲವನ್ನೂ ತೊಡೆದು ಹಾಕಿದ ಕಾಲವದು. ಆಗಿನ ಕಾಲದಲ್ಲಿ ಅಂಬಿಗರ ಚೌಡಯ್ಯ ಕೂಡ ಇದ್ದರು. ಇಂತಹ ಅನಿಷ್ಟ ಪದ್ದತಿಯನ್ನು ತೊಡೆದು ಹಾಕಲು ಸಹಕಾರಿಯಾದರು. ಮೂಡನಂಭಿಕೆಯನ್ನು ತನ್ನ ವಚನಗಳ ಮೂಲಕ ತೊಡೆದು ಹಾಕಿ ಅರಿವಿನ ಜ್ಞಾನವನ್ನು ಮೂಡಿಸಿದರು. ಅಂಬಿಗರ ಚೌಡಯ್ಯ ಕರ್ತವ್ಯ ನಿಷ್ಠರಾಗಿದ್ದರು, ವೈದ್ಯರು ಆಗಿದ್ದರು. ಕುಟುಂಬಕ್ಕೆ ಬಹಳ ಪ್ರಾಶಸ್ತ್ಯ ನೀಡುತ್ತಿದ್ದರು. ಸಾಂಸಾರಿಕ ಜೀವನಕ್ಕೆ ವಚನಗಳ ಮೂಲಕ ಸಲಹೆ ನೀಡಿದ್ದರು.
ಕಾಯಕ, ಜೀವ, ಜ್ಞಾನ ಈ ಮೂರು ತ್ರಿವೇಣೆ ಸಂಗಮಗಳು. ಇವುಗಳಲ್ಲಿ ಆತ್ಮ ಜ್ಯೋತಿ ಅಡಗಿದೆ. ನಿಜವಾದ ಗುರು ಗುರುವೇ ಆಗಿರಬೇಕು, ನಾಮ ಮಾತ್ರ ಗುರು ಆಗಿರಬಾರದು. ಗುರು ಶಿಷ್ಯರ ಅಂತರಂಗ ಬಹಿರಂಗ ಶುದ್ದ ಆಗಿರಬೇಕು. ನಿಜವಾದ ಭಕ್ತಿ ಬೇಡುವುದಿಲ್ಲ.ಕೊಡುಗೈ ದೊರೆಯೇ ನಿಜ ಭಕ್ತಿ. ಭಕ್ತಿಗೆ ಮನಸ್ಸೆ ಸಾಕ್ಷಿ. ಅದು ಸರಿ ಇದ್ದರೆ ಗುರಿ ತಲುಪುತ್ತೇವೆ. ಲಿಂಗ ಕಲ್ಲಿನ ಚೂರಲ್ಲ. ಶಿವನ ಪ್ರತೀಕ. ಹೃದಯ ಶ್ರೀಮಂತಿಕೆ ಇರಬೇಕು ಎಂದೆಲ್ಲಾ ಅಂಬಿಗರ ಚೌಡಯ್ಯ ವಚನಗಳ ಮೂಲಕ ಬದುಕಿನ ಸತ್ಯವನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಮಾತನಾಡಿ, ಅಂಬಿಗರ ಚೌಡಯ್ಯ ವಿಶೇಷ ವ್ಯಕ್ತಿತ್ವ, ನೇರನುಡಿ, ದಿಟ್ಟತನದ ವ್ಯಕ್ತಿ ಆಗಿದ್ದರು. ಅವರಿಗೆ ನಿಜಶರಣ ಎಂದು ಹೆಸರು ಕೊಟ್ಟವರೇ ಬಸವಣ್ಣ. ನಾನು ಕೇವಲ ದೋಣಿ ಸಾಗಿಸುವ ಚೌಡಯ್ಯ ಅಲ್ಲ ಸಮಾಜದ ಡೊಂಕನ್ನು ತಿದ್ದುವ ಚೌಡಯ್ಯ ಎಂದು ಸದಾ ಹೇಳುತ್ತಿದ್ದರು. ಯುವಕರು ಇಂತಹ ಜಯಂತಿಯಿಂದ ದೂರ ಉಳಿದಿದ್ದಾರೆ. ಅವರನ್ನು ಕರೆ ತರಬೇಕು. ಇಂತಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ತಿಳಿಯಬೇಕು. ಇಂತಹ ಕೆಲಸ ಸಮಾಜವೂ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗಂಗಾ ಮತಸ್ಥರ ಸಮಾಜ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ತಾಲ್ಲೂಕು ಅಧ್ಯಕ್ಷ ಸತೀಶ್ ಗಾಂಧಿ ಬಸಪ್ಪ, ಜಿಲ್ಲಾ ಮೊಗವೀರರ ಸಂಘದ ಅಧ್ಯಕ್ಷ ಅಣ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್,ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
SN Channabasappa ಅಂಬಿಗರ ಚೌಡಯ್ಯ ಆವರು ಶರಣರ ಪಂಕ್ತಿಯಲ್ಲಿ ಶ್ರೇಷ್ಠ ಸ್ಥಾನ- ಶಾಸಕ “ಚೆನ್ನಿ”
Date: