Thursday, January 23, 2025
Thursday, January 23, 2025

Karnataka Sanga ಅಮ್ಮ ಎಂಬ ಅಕ್ಕರೆಯ ಬಗ್ಗೆ ಇಡೀ ಭಾನುವಾರ ಮೂಡಿದ ಮಮತಾಮಯಿ ಚಿತ್ತಾರ

Date:

Karnataka Sanga ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಕರ್ನಾಟಕ ಸಂಘದಲ್ಲಿ ಜ. 19ರ ನಿನ್ನೆ ಇಡೀ ದಿನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

‘ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ’ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಅಮ್ಮ ಎಂಬ ಅನುರಣಿಸುವ ಹೃದಯದ ಅಂಬರ ಚಿತ್ತಾರವನ್ನು ಇಡೀ ದಿವಸ ಉಪನ್ಯಾಸ, ಹಾಡು, ನೃತ್ಯ, ಕಿರುಚಿತ್ರಗಳ ಮೂಲಕ ಮನೋಜ್ಞವಾಗಿ ಕಟ್ಟಿಕೊಡಲಾಯಿತು.

ಪ್ರಥಮವಾಗಿ ವೀಣಾ ಬನ್ನಂಜೆಯವರು ಸತ್ಯಕಾಮರು ರಚಿಸಿದ ಮಾತೃ ಲಹರಿಯ ಕಾವ್ಯದೊಡನೆ ಮಾತೃ ಶಕ್ತಿಯ ವಿಶಿಷ್ಟತೆಯನ್ನು ವಿವರಿಸಿದರು. ಕುಂಡಲಿನಿ ಶಕ್ತಿ ಜಾಗೃತಿ ಮಾತೆಯಿಂದ ಹೇಗಾಗುತ್ತದೆ ಎಂದು ವಿವರಿಸಿದರು.

ಜಗದೀಶ್ ಶರ್ಮ ಸಂಪ ಅವರು ರಾಮಾಯಣ ಮಹಾಭಾರತ ಮಹಾಕಾವ್ಯದಲ್ಲಿ ಚಿತ್ರತವಾಗಿರುವ ಕೌಸಲ್ಯ, ಕೈಕಸಿ, ಕೈಕೇಯಿ, ಸೀತೆ, ಗಂಗೆ, ಕುಂತಿ, ಮಾದ್ರಿ, ಗಾಂಧಾರಿ, ದ್ರೌಪದಿ, ಸುಭದ್ರೆ ಕುರಿತು ಅಮೋಘವಾಗಿ ವಿವರ ನೀಡಿದರು.

ವಿದ್ವಾನ್ ಜಿ.ಎಸ್. ನಟೇಶ್ ಅವರು ವೇದ, ಶಂಕರಾಚಾರ್ಯರ ಮಾತೃ ಪಂಚಕ , ಉಪನಿಷತ್ತು, ಜಾನಪದ ಸಂಸ್ಕೃತಿಯಲ್ಲಿ ತಾಯಿಯ ಚಿತ್ರಣ ಕುರಿತು ಮಾತನಾಡಿ, ಸಂಸ್ಕೃತಿ ಚಿಂತನಗಳನ್ನು ತಾಯಿ ಹೇಗೆ ಮುಂದಿನ ತಲೆಮಾರಿಗೆ ಧಾರೆ ಎರೆಯುತ್ತಾಳೆ ಎಂದು ವಿವರಿಸಿದರು.

ಜೋಗಿ ಅವರು ಹೊಸಗನ್ನಡ ಸಾಹಿತ್ಯದಲ್ಲಿ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಇವುಗಳಲ್ಲಿ ತಾಯಿಯ ಪರಿಕಲ್ಪನೆಯನ್ನು ಹಾಗೂ ಕಥೆ, ಕವಿತೆ, ಕಾದಂಬರಿಗಳಲ್ಲಿನ ತಾಯ್ತನದ ಪ್ರಸಂಗಗಳನ್ನು ವಿವರಿಸಿದರು.

ಮಧ್ಯಾಹ್ನದ ಊಟದ ಸಮಯದಲ್ಲಿ ತಾಯಂದಿರು ಕೈತುತ್ತು ನೀಡುವುದರ ಮೂಲಕ ವಿಭಿನ್ನವಾದ ಭೋಜನದ ಆಯೋಜನೆಯನ್ನು ಮಾಡಲಾಗಿತ್ತು.

ಖ್ಯಾತ ಕಥೆಗಾರ ವಸುಧೇಂದ್ರ ಅವರು ‘ನಮ್ಮಮ್ಮ ಅಂದ್ರೆ ನನಗಿಷ್ಟ’ ಎಂಬ ಅವರ ಕೃತಿಯ ಕಥಾ ವಾಚನದ ಮೂಲಕ ಎಲ್ಲರ ಕಣ್ಣನ್ನು ತೇವ ಮಾಡಿ ಆರ್ದ್ರಗೊಳಿಸಿದರು.

ಪ್ರಸಾದ್ ಭಾರದ್ವಾಜ್ ಹಾಗೂ ಧೀಮಂತ ಭಾರದ್ವಾಜ್ ಗಮಕದಲ್ಲಿ ಮಾತೃ ಸಂವೇದನೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಸ ಋಷಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ಕೈಕೇಯಿ ಹಾಗೂ ಭರತನ ಸಂವಾದದ ಪ್ರಸಂಗವನ್ನು ಮಾತೃ ಸಂವೇದನೆಯ ಹಿನ್ನೆಲೆಯಲ್ಲಿ ವಿವರಿಸಿದರು.

ಹೊಸನಗರದ ವಿನಾಯಕ ಅವರು ಏರ್ಪಡಿಸಿದ್ದ ಮಾತೃ ಸಂವೇದನೆಯ ಚಿತ್ರಗಳ ಪ್ರದರ್ಶನ ಸುಂದರವಾಗಿತ್ತು. ಪ್ರದರ್ಶಿಸಿದ ಕಿರು ಚಿತ್ರಗಳು ಹೃದಯಂಗಮವಾಗಿದ್ದವು.

ಲಾಲಿ ಎಂಬ ದೇವಭಾಷೆ ಎಂಬ ಶಿರೋನಾಮೆಯಡಿ ಕನ್ನಡ ಗೀತೆಗಳಿಗೆ ಸಹನಾ ಚೇತನ್ ಅವರು ಭಾವಾಭಿನಯ ಮಾಡುವುದರ ಮೂಲಕ ಮಾತೃತ್ವವನ್ನು ಪ್ರತಿಬಿಂಬಿಸಿದರು. ಸಹಚೇತನ ನಾಟ್ಯಾಲಯದ ಸಂಜನಾ, ಸಿಂಧುಶ್ರೀ ಅಡಿಗ, ರವೀನಾ ಹಾಗೂ ಸೇಜಲ್ ಅಮ್ಮನ ಕುರಿತಾದ ಕೆಲವು ಜನಪ್ರಿಯ ಸಿನಿಮಾ ಹಾಡುಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿದರು.

ವಿಘ್ನೇಶ್ ಭಟ್ ಅವರು ಭಾರತೀಯ ಸಂಸ್ಕೃತಿಯಲ್ಲಿ ಮಾತೃ ಆರಾಧನೆ ವಿಷಯ ಕುರಿತು ಮಾತನಾಡಿದರು.

ಪಾರ್ಥ ಚಿರಂತನ್ ಹಾಗೂ ಅನುಶ್ರೀ ಅವರು ಅಮ್ಮನ ಕುರಿತ ಭಾವಗೀತೆಗಳನ್ನು ಹಾಡಿದರು.

ಒಟ್ಟಾರೆ ಇಡೀ ದಿನ ಅಮ್ಮನ ಸಂಸ್ಕರಣೆಯಲ್ಲಿ ಎಲ್ಲರ ಹೃದಯ ಭಾವತುಂಬಿ, ರಸಾಸ್ವಾಧನೆಯಾದದ್ದು ಈ ಕಾರ್ಯಕ್ರಮದ ಯಶಸ್ಸು. ನೆರೆದಿದ್ದ ಎಲ್ಲರೂ ತಮ್ಮ ತಾಯಂದಿರನ್ನು ನೆನೆದರು ಹಾಗೂ ಸೃಷ್ಟಿ ಕ್ರಿಯೆಯ ಮೂಲವಾದ ತಾಯಿಗೆ ಮನಸಾರೆ ವಂದಿಸಿದರು.

ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿತವಾಗಿತ್ತು. ವಿನಯ್ ಶಿವಮೊಗ್ಗ ಹಾಗೂ ಸಹನಾ ಚೇತನ್ ಅವರ ನಿರೂಪಣೆಗಳು ಹೃದ್ಯವಾಗಿದ್ದು ಕಾರ್ಯಕ್ರಮದ ಅಚ್ಚುಕಟ್ಟಿಗೆ ಮುಖ್ಯ ಕಾರಣವೆನಿಸಿತು.

ವಿದ್ವಾಂಸರ ವಿಷಯಗಳು ಸಹ ವಿಭಿನ್ನತೆಯಿಂದ ಕೂಡಿದ್ದು ತಾಯಿಯ ಸಂಪೂರ್ಣ ಚಿತ್ರಣವನ್ನು, ಅವಳ ತ್ಯಾಗ- ಅರ್ಪಣಾ ಗುಣವನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸುವಂತಾಯಿತು.

ಶಿವಮೊಗ್ಗದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಅಜೇಯ ಸಂಸ್ಕೃತಿ ಬಳಗಕ್ಕೆ, ಯಶಸ್ಸಿಗೆ ಶ್ರಮಿಸಿದ ಸರ್ವರಿಗೆ ಆಗಮಿಸಿದ್ದ ಪ್ರೇಕ್ಷಕರು ಧನ್ಯವಾದಗಳನ್ನು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mallikarjun Kharge ಸಂವಿಧಾನ & ಪ್ರಜಾಪ್ರಭುತ್ವ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು- ಮಲ್ಲಿಕಾರ್ಜುನ ಖರ್ಗೆ

Mallikarjun Kharge ಬೆಳಗಾವಿ, ಜ.21 ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ...

MESCOM ಜನವರಿ 24. ಶಿವಮೊಗ್ಗ ನಗರ ಉಪವಿಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ – 3 ಕಛೇರಿಯಲ್ಲಿ ಜ....