District Legal Services Authority ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪೋಕ್ಸೋ ಕಾಯ್ದೆಯಂತಹ ಅನೇಕ ಕಠಿಣ ಕಾಯ್ದೆಗಳು ಜಾರಿಗೆ ಬಂದಿದ್ದು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ, ಪರಿವರ್ತನ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಶಿರಾಳಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಚೇರಿಯಲ್ಲಿ ಗುರುವಾರ ಜಿಲ್ಲಾ ಕ್ರೈಸ್ ವಸತಿ ಶಾಲೆ/ಕಾಲೇಜುಗಳ ಅಧಿಕಾರಿಗಳಿಗೆ ‘ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ’ ಕುರಿತು ಏರ್ಪಡಿಸಲಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ವಿರುದ್ದದ ಕೆಟ್ಟ ಘಟನೆಗಳು, ಪ್ರಕರಣಗಳನ್ನು ಶಮನ ಮಾಡಲು ಕಠಿಣವಾದ ಪೋಕ್ಸೋ ಕಾಯ್ದೆ ಜಾರಿಗೆ ಬಂದಿತು. ಈ ಕಾಯ್ದೆ ಜಾರಿಗೆ ಬಂದು 13 ವರ್ಷ ಆಯ್ತು. ಇದು ಕಟ್ಟುನಿಟ್ಟಿನ ಸ್ವರೂಪ ಹೊಂದಿದ್ದು, ಕಠಿಣ ಶಿಕ್ಷೆ ಸಹ ಹೊಂದಿದೆ. ಆದರೆ ನಿಷ್ಟೆಯಿಂದ ಇದರ ಅನುಷ್ಟಾನ ಮಾಡಲು ಮುಂದಾದಾಗ, ಈ ಕಾಯ್ದೆಯ ದುರ್ಬಳಕೆ ಸವಾಲಾಗಿ ನಿಲ್ಲುತ್ತದೆ.
ಇಂತಹ ಗಂಭೀರ ವಿಚಾರವನ್ನು ಮಂಥನ ಮಾಡಬೇಕಿದೆ. ಮಕ್ಕಳನ್ನು ಆಯುಧದ ರೀತಿ ಉಪಯೋಗಿಸುವುದು ಸರಿಯಲ್ಲ. ಈ ಕಾಯ್ದೆಯನ್ನು ಮೂಲಭೂತವಾಗಿ ಮಕ್ಕಳ ಹಕ್ಕು ರಕ್ಷಣೆಗಾಗಿ ಜಾರಿ ಮಾಡಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳು ಸೇರಿದಂತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಈ ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಕುರಿತು ಉತ್ತಮ ಚರ್ಚೆ ಆಗಿ ವಿಷಯವನ್ನು ಸರಿಯಾಗಿ ಗ್ರಹಿಸಬೇಕು. ಶಿಕ್ಷಕ, ಬೋಧಕ ವರ್ಗ ಮಕ್ಕಳ ಬಗ್ಗೆ ತಿಳಿಯುವುದು ಬಹಳಷ್ಟು ವಿಚಾರಗಳಿವೆ. ಅವುಗಳನ್ನೆಲ್ಲ ಸಮರ್ಪಕವಾಗಿ ಅರ್ಥ ಮಾಡಿಕೊಂಡು, ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದ ಅವರು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ ಪರಿಣಾಮಕಾರಿಯಾಗಬೇಕು. ಕಾರ್ಯಾಗಾರ ಅರ್ಥಪೂರ್ಣ ಆಗಬೇಕೆಂದು ಆಶಿಸಿದರು.
District Legal Services Authority ಡಿಡಿಪಿಯು ಚಂದ್ರಪ್ಪ ಎಸ್ ಗುಂಡಪಲ್ಲಿ ಮಾತನಾಡಿ, ಈಗಿನ ಕಾಲದಲ್ಲಿಯೂ ಮೂಢನಂಬಿಕೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯ ವಿವಾಹದಂತ ಅನಿಷ್ಟ ಪದ್ದತಿ ಜ್ವಲಂತವಾಗಿದೆ. ಹೆಣ್ಣು ಮಕ್ಕಳು ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ ಅವರ ವಿರುದ್ದ ದೌರ್ಜನ್ಯ ನಡೆಯುತ್ತಲೇ ಇದೆ. ಆದ್ದರಿಂದ ಎಲ್ಲ ಕಾಲೇಜುಗಳಲ್ಲಿ ದೌರ್ಜನ್ಯ ತಡೆ ಸಮಿತಿಗಳು ರಚನೆಯಾಗಬೇಕು. ಗುರುಗಳು ದೇವರ ಸಮಾನವಾಗಿದ್ದು ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಪೋಷಿಸಬೇಕು. ಇಂದಿನ ಕಾರ್ಯಾಗಾರದಲ್ಲಿ ಕಾಯ್ದೆಗಳ ಕುರಿತು ತಿಳಿದುಕೊಂಡು ಕಾಲೇಜುಗಳಲ್ಲಿ ತಮ್ಮ ಅಧೀನ ನೌಕರರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದರು.
ಡಿಡಿಪಿಐ ಮಂಜುನಾಥ್ ಎಸ್.ಆರ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಕುರಿತಾದ ಇಂತಹ ತರಬೇತಿ ಕಾರ್ಯಾಗಾರ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಶಾಲಾ-ಕಾಲೇಜುಗಳಲ್ಲಿ ಇಂತಹ ಘಟನೆಗಳು ಆಗದಂತೆ ಎಚ್ಚರಿಕೆಯಿಂದ ಇರಬೇಕು. ಕಾಯ್ದೆ ಬಗ್ಗೆ ತಿಳಿದು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದ ಅವರು ಈ ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ನೀಡಲು ಶ್ರಮಿಸಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.
ಪರಿವರ್ತನ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ನಿರ್ದೇಶಕ ಹಾಗೂ ಕರ್ನಾಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ನಿಕಟಪೂರ್ವ ಸದಸ್ಯ ಶಂಕರಪ್ಪ ಡಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶೋಭಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀನಿವಾಸ, ಭದ್ರಾವತಿ ಬಿಇಓ ನಾಗೇಂದ್ರ ಪ್ರಸಾದ್, ಇತರೆ ಅಧಿಕಾರಿಗಳು, ಕ್ರೈಸ್ ವಸತಿ ಶಾಲಾ/ಕಾಲೇಜಿನ ಸಮನ್ವಯಾಧಿಕಾರಿಗಳು, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ – 2006 ಮತ್ತು ಪೋಕ್ಸೋ ಕಾಯ್ದೆ 2012 ಕುರಿತು ಗೋಷ್ಟಿಗಳು ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.