Shivaganga Yoga Centre ಹಬ್ಬಗಳ ಆಚರಣೆ ನಮ್ಮ ಹಿಂದು ಸಂಸ್ಕೃತಿಯ ಪ್ರತೀಕ ಎಂದು ನಿವೃತ್ತ ಪ್ರಾಚಾರ್ಯ, ಯೋಗ ಶಿಕ್ಷಕ ಎಚ್.ಕೆ.ಹರೀಶ್ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಹಬ್ಬಗಳ ಆಚರಣೆಯಿಂದ ಕೌಟುಂಬಿಕ ಹಾಗೂ ಸಾಮಾಜಿಕ ಸಾಮರಸ್ಯ, ಅನ್ಯೋನ್ಯತೆ, ಸ್ನೇಹ ಹಾಗೂ ಭಾಂದವ್ಯ ಬೆಸೆಯುತ್ತದೆ ಎಂದರು.
ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶಿಷ್ಟತೆ ಇದ್ದು, ಅದರ ಮಹತ್ವ ಹಾಗೂ ಆಚರಣೆಯನ್ನು ನಮ್ಮ ಮಕ್ಕಳಿಗೆ ತಿಳಿಸಿ ಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮುಂದಿನ ತಲೆಮಾರುಗಳಿಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರಾಘವ ಶಾಖೆಯ ಮುಖ್ಯಶಿಕ್ಷಕ ಜಿ.ಎಸ್.ಓಂಕಾರ್ ಮಾತನಾಡಿ, ಮಕರ ಸಂಕ್ರಾಂತಿ ಮಹತ್ವವನ್ನು ತಿಳಿಸುತ್ತಾ ಸೂರ್ಯನು ತನ್ನ ಪಥವನ್ನು ಉತ್ತರ ದಿಕ್ಕಿಗೆ ಬದಲಿಸುತ್ತಾ ಮಕರ ರಾಶಿಗೆ ಪ್ರವೇಶಿಸುವುದರಿಂದ ಇದನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ ಹಾಗೂ ಇದನ್ನು ಸುಗ್ಗಿಯ ಹಬ್ಬ ಎಂದು ಸಹ ಕರೆಯುತ್ತಾರೆ ಎಂದರು.
Shivaganga Yoga Centre ಇದೇ ಸಂದರ್ಭದಲ್ಲಿ ರಾಘವ ಶಾಖೆಯ ಹಿರಿಯ ಯೋಗಪಟು ಟಿ.ಸುಬ್ರಮಣಿ ಅವರು 75 ಸಂವತ್ಸರ ಪೂರೈಸಿದ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಎಲ್ಲಾ ಯೋಗ ಪಟುಗಳು ಪರಸ್ಪರ ಎಳ್ಳು ಬೆಲ್ಲವನ್ನು ಹಂಚಿ ಶುಭಾಶಯ ಕೋರಿದರು. ಯೋಗ ಶಿಕ್ಷಕರಾದ ವಿಜಯ ಕೃಷ್ಣ, ಶಂಕರ್, ಜಿ.ವಿಜಯಕುಮಾರ್, ಶಶಿಧರ್, ಸುಜಾತಾ ಮಧುಕೇಶ್ವರ್, ಗಾಯತ್ರಿ ಅಶೋಕ್, ಆನಂದ್, ಶೋಭಾ, ಮಹೇಶ್, ಶ್ರೀನಿವಾಸ್, ಶಂಕರ್, ಯಶವಂತ್, ಉಷಾ, ಸುಮಾ, ಶೈಲಜಾ ಸೇರಿದಂತೆ 40 ಯೋಗ ಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.