Department of Kannada and Culture ತಮ್ಮ ಕಾಯಕ ನಿಷ್ಠೆ ಮತ್ತು ಶರಣ ಸಾಹಿತ್ಯದ ಮೂಲಕ ಜಗತ್ತಿನ ಮನುಕುಲದ ಕಣ್ತೆರಿಸಿದ ಮಹನೀಯ ಶಿವಯೋಗಿ ಸಿದ್ದರಾಮೇಶ್ವರರು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದರು.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬೋವಿ ವಿದ್ಯಾವರ್ಧಕ ಸಂಘ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶಿವ ಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಧಕ ಸಿದ್ಧರಾಮೇಶ್ವರರು ಯಾವುದೇ ಒಂದು ಜಾತಿ- ಸಮುದಾಯಕ್ಕೆ ಸೀಮಿತವಾದವರಲ್ಲ. ಶರಣ ಸಿದ್ದರಾಮರನ್ನು ಭೋವಿ ಮತ್ತು ವೀರಶೈವ ಸಮಾಜದ ಬಂಧುಗಳು ಅವರನ್ನು ಭಕ್ತಿ ಭಾವದಿಂದ ಕಾಣುತ್ತಾರೆ ಮಾತ್ರವಲ್ಲ ಇಂದಿನ ಎಲ್ಲಾ ರಾಜಕಾರಣಿಗಳು ಸಿದ್ದರಾಮೇಶ್ವರರ ಆದರ್ಶ ಮತ್ತು ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದರು.
ಪ್ರಕೃತಿಯ ಮೇಲೆ ಪ್ರತಿ ಬಾರಿ ದಾಳಿಯಾದಾಗಲೂ ಸೂಕ್ತ ದಂಡ ತರಬೇಕಾಗುತ್ತದೆ ಎಂದು ಶಿವಯೋಗಿ ಸಿದ್ದರಾಮೇಶ್ವರರು ಅಂದೆ ಎಚ್ಚರಿಸಿದ್ದರು. ಅವರು ತಮ್ಮ ಕಾಲಿಕ ನಿಷ್ಠೆ ಜೊತೆಗೆ ಜನಸಾಮಾನ್ಯರ ಬದುಕಿಗೆ ಅನುಕೂಲವಾಗುವಂತೆ ಕೆರೆ-ಕಟ್ಟೆ-ಕಾಲುವೆಗಳನ್ನು ನಿರ್ಮಿಸುವ ಮೂಲಕ ಶಿವನನ್ನು ಕಾಣುವ ಪ್ರಯತ್ನ ಮಾಡಿ ಸಫಲರಾದರು ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಬೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್ ರವಿಕುಮಾರ್ ಅವರು ಮಾತನಾಡಿ, ವಿವಿಧ ಕಾರಣಗಳಿಂದಾಗಿ ಅಸಂಘಟಿತರಾಗಿರುವ ಭೋವಿ ಸಮಾಜದ ಬಂಧುಗಳು ಸಿದ್ದರಾಮೇಶ್ವರ ಜಯಂತಿಯ ನೆಪದಲ್ಲಿ ಆದರೂ ಕೂಡ ಸಮನ್ವಯತೆ ಕಾಯ್ದುಕೊಳ್ಳಬೇಕು, ಒಗ್ಗಟ್ಟಾಗಿರಬೇಕು ಮಾತ್ರವಲ್ಲ ಸಿದ್ದರಾಮೇಶ್ವರರ ಮಾರ್ಗದರ್ಶನದಂತೆ ನಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
Department of Kannada and Culture ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಅವರು ವಿಶೇಷ ಉಪನ್ಯಾಸ ನೀಡಿ, ಶ್ರಮಿಕ ಸಮುದಾಯದಿಂದಲೇ ಬಂದ ಸಿದ್ದರಾಮರು ತಮ್ಮ ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸಿದರು ಎಂದವರು ನುಡಿದರು.
ಮಂತ್ರ ಪೂಜೆಗಳನ್ನು ಹೊರತುಪಡಿಸಿ ಕಾಯಕದ ಮೂಲಕ ಶಿವನ ದರ್ಶನ ಮಾಡಿದ ಸಿದ್ದರಾಮೇಶ್ವರರು ಸoತ ಸಜ್ಜನರ ಸಂಘದಿಂದ ಜ್ಞಾನಾರ್ಜನೆ ಹೊಂದಿದರು. ಸತತವಾಗಿ ಕೆರೆಕಟ್ಟೆ ಕಾಲುವೆಗಳ ನಿರ್ಮಾಣದಿಂದ ಶಿವನನ್ನು ಆರಾಧಿಸಿದರು, ದರ್ಶಿಸಿದರು ಎಂದವರು ನುಡಿದರು.
ನಿಷ್ಕಾಮ ಮನಸ್ಥಿತಿಯ ಸಿದ್ಧರಾಮರ ಬದುಕು ಮತ್ತು ಜೀವನ ಹಾಗೂ ಕಾರ್ಯ ಶೈಲಿ ಮಾದರಿಯಾಗಿದ್ದು ಅದನ್ನು ಅನುಸರಿಸುವಂತೆ ಕಿವಿಮಾತು ಹೇಳಿದರು.
ಇಂದಿನ ಯುವಜನತೆ ಸಂಘಟಿತರಾಗಬೇಕು, ಸಿದ್ದರಾಮೇಶ್ವರರ ಜೀವನ ಪಾಲಿಸಬೇಕು. ಪೋಷಕರು ಸಕಾಲದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಕುಟುಂಬದ ಉಜ್ವಲ ಭವಿಷ್ಯಕ್ಕೆ ಪ್ರೇರಣೆಯಾಗುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಮಾತನಾಡಿ, ಉತ್ತಮ ಪರಂಪರೆಯ ಪ್ರತೀಕವಾಗಿದ್ದ ಶ್ರೇಷ್ಠ ವಚನಕಾರ ಹಾಗೂ ಶಿವನ ಭಕ್ತ ಶಿವಯೋಗಿ ಸಿದ್ದರಾಮೇಶ್ವರರು ಎಂದು ಬಣ್ಣಿಸಿದ ಅವರು ರೈತರ ನೆಮ್ಮದಿ ಬದುಕಿಗೆ ಸಹಕರಿಸಿ ಎಲ್ಲರ ಮನದಲ್ಲಿ ಅಚ್ಚಳಿದೆ ಉಳಿದಿದ್ದಾರೆ ಮಾತ್ರವಲ್ಲ ತಮ್ಮ ಮೌಲ್ಯಯುತ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ರುಜು ಮಾರ್ಗವನ್ನು ಪರಿಚಯಿಸಿದವರಾಗಿದ್ದಾರೆ. ಸಮಾನತೆಯ ಶ್ರೇಷ್ಠ ಪರಂಪರೆಯ ನಾಯಕರಾಗಿ ಬಿಂಬಿತರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯಕ್, ವಿಧಾನ ಪರಿಷತ್ ಸದಸ್ಯ ಶ್ರೀಮತಿ ಬಲ್ಕಿಶ್ ಬಾನು, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀಮತಿ ಪಲ್ಲವಿ ಜಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಹೇಮಂತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ ಎಸ್ ಚಂದ್ರಭೂಪಾಲ, ತಾಲೂಕು ಭೋವಿ ವಿದ್ಯಾಭ್ಯಾಸ ಸಂಘದ ಅಧ್ಯಕ್ಷ ಬಿ ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭೋವಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.