Yuva Nidhi Scheme ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಹಾಗೂ ಡಿಪ್ಲೋಮಾ ತೇರ್ಗಡೆಯಾದವರು ರಾಜ್ಯ ಸರ್ಕಾರದ ಐದು ಖಾತರಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನ 2025 ಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಪ್ರತಿ ತಿಂಗಳು ನಿರುದ್ಯೋಗ ಭತ್ಯೆವನ್ನು ಪಡೆಯುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಮನವಿ ಮಾಡಿದ್ದಾರೆ.
ಈ ಯೋಜನೆಯಡಿ ನೋಂದಣಿ ಆಗುವ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಪ್ರತಿ ಮಾಹೆಯಾನ ರೂ. 3000 ಹಾಗೂ ಡಿಪ್ಲೋಮಾ ತೇರ್ಗಡೆಯಾದವರು ಪ್ರತಿ ಮಾಹೆಯಾನ ರೂ.1500 ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆಯ ಮೂಲಕ ಅವರವರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರದಿಂದ ಪಾವತಿಸಲಾಗುತ್ತದೆ.
ಪದವಿ, ಸ್ನಾತಕೋತ್ತರ ಪದವೀಧರರು ಹಾಗೂ ಡಿಪ್ಲೋಮಾ ತೇರ್ಗಡೆ ಹೊಂದಿದ 180 ದಿನಗಳ ಉನ್ನತ ವ್ಯಾಸಂಗಕ್ಕೆ ದಾಖಲಾಗದವರು ಯುವನಿಧಿ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕ ಸರ್ಕಾರದಿಂದ ಅನುಷ್ಠಾನಗೊಂಡ ಯುವನಿಧಿ ಯೋಜನೆಗೆ ಒಂದು ವರ್ಷ ತುಂಬಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 4972 ಫಲಾನುಭವಿಗಳಿದ್ದಾರೆ. ರೂ.6,31,17000 ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ.
ಆರ್ಥಿಕ ಸಂಕಷ್ಟದ ನಡುವೆ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸ್ವಾವಲಂಬಿ ಜೀವನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನಗಳಿಗೆ ಹಾಜರಾಗಲು ವೆಚ್ಚವನ್ನು ಭರಿಸಲು ನಿರುದ್ಯೋಗ ಭತ್ಯೆ ಸಹಕಾರಿಯಾಗಲಿದೆ. ಆದ್ದರಿಂದ ಈ ಯುವನಿಧಿ ಯೋಜನೆಯಿಂದ ಹೊರಗುಳಿದಿರುವ ಅರ್ಹ ಯುವಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ವಿಶೇಷ ನೋಂದಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
Yuva Nidhi Scheme 2023-24ನೇ ಸಾಲಿನಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ನೋಂದಣಿಗಾಗಿ ಕಾಲೇಜುಗಳಲ್ಲಿ ಯುವನಿಧಿ ವಿಶೇಷ ನೋಂದಣಿ ಸಹಾಯ ಕೇಂದ್ರಗಳನ್ನು ತೆರೆದು ಅರ್ಹ ಅಭ್ಯರ್ಥಿಗಳಿಂದ ಗರಿಷ್ಟ ಮಟ್ಟದ ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕಾಲೇಜ್‌ಗಳಲ್ಲಿ ಪ್ರಾಂಶುಪಾಲರು, ಪ್ಲೇಸ್‌ಮೆಂಟ್ ಸೆಲ್ ಅಧಿಕಾರಿಗಳು ಹಾಗೂ ಐ.ಟಿ ಕೋ- ಆರ್ಡಿನೇಟರ್‌ಗಳಿಗೆ ನೋಂದಣಿ ಅಭಿಯಾನದ ಉಸ್ತುವಾರಿ ನೀಡಲಾಗಿದೆ.
ಸದರಿ ನೋಂದಣಿ ಸಹಾಯ ಕೇಂದ್ರಗಳನ್ನು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ ತೆರೆಯಬೇಕೆಂದು ಶಿಕ್ಷಣ ಇಲಾಖೆಯ ವ್ಯಾಪ್ತಿಯ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಜೊತೆಗೆ ಡಿಪ್ಲೋಮ ಕಾಲೇಜು ಪ್ರಾಂಶುಪಾಲರುಗಳಿಗೆ ರಾಜ್ಯ ಸರ್ಕಾರ ವಿಶೇಷ ಸೂಚನೆ ನೀಡಿ ಆದೇಶಿಸಿದೆ.
ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ದಾಖಲಾತಿಗಳೊಂದಿಗೆ http://sevasindhuges.karnataka.gove.in ಆನ್‌ಲೈನ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು ಮತ್ತು ಕರ್ನಾಟಕ ಒನ್, ಬೆಂಗಳೂರು ಒನ್, ಶಿವಮೊಗ್ಗ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕಾಲೇಜು ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.