Klive Special News ಜೀವನೋತ್ಸಾಹಕ್ಕೆ ಅವಶ್ಯವಾದ ಹಾಸ್ಯವು ಅನ್ಯರ ಲೇವಡಿಗೆ ಮೀಸಲಾಗದೆ ಆತ್ಮ ವಿಮರ್ಶೆಗೂ ಸಾಧನವಾದಾಗ ಅದು ಸದಭಿ ರುಚಿಯ ಹಾಸ್ಯವೆನ್ನಲಾಗುತ್ತದೆ. ಇಂತಹ ಹಾಸ್ಯದ ಕೊಡುಕೊಳ್ಳುವಿಕೆಯಿಂದ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ಮಾನಸಿಕ ಆರೋಗ್ಯ ಉತ್ತಮವಾದಾಗ ದೈಹಿಕ ಸ್ವಾಸ್ಥ್ಯವೂ ಸುಸ್ಥಿತಿಯಲ್ಲಿರುತ್ತದೆ. ಹೀಗಾಗಿ ಹಾಸ್ಯ ಮತ್ತು ಆರೋಗ್ಯ ಇವು ಒಂದು ನಾಣ್ಯದ ಎರಡು ಮುಖಗಳು ಎನ್ನಬಹುದು.
ಹಾಸ್ಯವು ಕೇವಲ ನಗಿಸುವುದಕ್ಕಷ್ಟೇ ಎಂದು ತೀರ್ಮಾನಿಸಿದಾಗ ಇನ್ನೊಬ್ಬರ ಭಾವನೆ ವಿಶ್ವಾಸ ನಂಬಿಕೆ ಗೌರವ ಸ್ನೇಹ ಸಂಬಂಧಗಳಿಗೆ ಧಕ್ಕೆ ಬರಲೂಬಹುದು, ಹೀಗಾಗದಂತೆ ತುಸು ಎಚ್ಚರಿಕೆಯಿಂದ ಹಾಸ್ಯವನ್ನು ಹೇಳುವುದನ್ನು ಕೇಳುವುದನ್ನು ಹಾಸ್ಯ ಪ್ರಜ್ಞೆ ಅನ್ನಬಹುದಾಗಿದೆ. ಸದಭಿರುಚಿಯ ಹಾಸ್ಯವನ್ನು ಕೇಳಿದಾಗ ಓದಿದಾಗ ನೋಡಿದಾಗ ಮುಖದಲ್ಲಿ ನಗು ಹೊಮ್ಮುತ್ತದೆ, ಇಂತಹ ನಗುವು ಮುಖದ ಎಲ್ಲ ಸ್ನಾಯುಗಳಿಗೂ ಉತ್ತಮ ವ್ಯಾಯಾಮವಾಗುತ್ತದೆ.
ಹಾಸ್ಯದಿಂದ ಮನಸ್ಸು ಮುದಗೊಂಡಾಗ ದೇಹದಲ್ಲಿ ಉಂಟಾಗುವ ಅಥವಾ ಉತ್ಪತ್ತಿಯಾಗುವ ಎಂಡಾರ್ಫಿನ್ ಗ್ರಂಥಿಯು ನಮ್ಮ ದೇಹದ ಹಾಗೂ ಮನಸ್ಸಿನ ಅನೇಕ ಕಾಯಿಲೆಗಳನ್ನು ದೂರ ಮಾಡಬಲ್ಲದು. ಇದನ್ನೇ ‘LAUGHTER IS BEST BEST MEDICINE’ ಅಂದರೆ ‘ನಗುವು ದಿವ್ಯೌಷಧಿ’ ಎಂದು ಹೇಳಲಾಗುತ್ತದೆ.
Klive Special News ಹಾಸ್ಯವು ದಡ್ಡತನದ ಪರಮಾವಧಿಯಿಂದಲೂ ಸೃಷ್ಟಿಯಾಗುತ್ತದೆ ಬುದ್ಧಿವಂತಿಕೆಯ ಪರಮಾವಧಿಯಲ್ಲೂ ಸೃಷ್ಟಿಯಾಗುತ್ತದೆ, ಬುದ್ಧಿವಂತಿಕೆಯಿಂದ ಬರುವ ಹಾಸ್ಯಗಳು ಅನೇಕ ಬಾರಿ ನಮ್ಮ ಬದುಕಿನ ಸವಾಲುಗಳಿಗೆ ಪರಿಹಾರದಂತೆಯೂ ಉಪಯುಕ್ತವಾಗುತ್ತದೆ. ದುರ್ದೈವ ವಶಾತ್ ಇಂದಿನ ಬಹುತೇಕ ಪ್ರಸಿದ್ಧ ಹಾಸ್ಯ ಪ್ರಸ್ತುತಿಗಾರರು ಹರಟೆಗಾರರು ಕಳಪೆ ಗುಣಮಟ್ಟದ ಹಾಸ್ಯದಿಂದಲೇ ಜನರಂಜನೆ ನೀಡುತ್ತಿರುವುದು ಆತಂಕದ ವಿಷಯವಾಗಿದೆ.
ನಿತ್ಯ ಜೀವನದ ನಮ್ಮ ನಡುವಳಿಕೆಗಳನ್ನೇ ನಾವು ವಿಮರ್ಶಿಸಿಕೊಂಡಾಗ ನಮ್ಮ ಬಗ್ಗೆ ನಮಗೆ ನಗು ಬರುತ್ತದೆ ಇದು ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ.
- ಡಾ. ಎಚ್. ಬಿ. ಮಂಜುನಾಥ ಹಿರಿಯ ಪತ್ರಕರ್ತರು