Rotary East English School ರೋಟರಿ ಪೂರ್ವ ಆಂಗ್ಲ ಶಾಲೆಯ ಎಲ್.ಕೆ.ಜಿ. & ಯು.ಕೆ.ಜಿ. ಮಕ್ಕಳ ಪ್ರತಿಭೆಯನ್ನು ಅವರ ಪೋಷಕರ ಹಾಗೂ ಆಡಳಿತ ಮಂಡಳಿಯವರ ಮುಂದೆ ಪ್ರದರ್ಶಿಸುವ ವಿನೂತನ ಕಾರ್ಯಕ್ರಮವನ್ನು ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳಿಂದ ನಮ್ಮ ಸಮಾಜಕ್ಕೆ ಸಹಾಯ ಮಾಡುವ ವ್ಯಕ್ತಿಗಳ ಪಾತ್ರಗಳ ನಿರ್ವಹಣೆ, ವಿವಿಧ ಬಣ್ಣಗಳ ಗುರುತಿಸುವಿಕೆ, ಆಕಾರಗಳನ್ನು ಗುರುತಿಸುವುದು, ಪದಗಳ ಅರ್ಥವನ್ನು ಅಭಿನಯದ ಮೂಲಕ ತೋರಿಸುವುದು, ಅಭಿನಯ ಪೂರ್ವಕ ಕಥೆಗಳನ್ನು ಹೇಳುವುದು, ಅಭಿನಯ ಪೂರ್ವಕ ಗೀತೆಗಳನ್ನು ಹೇಳುವುದು, ಪದ್ಯಗಳ ಕಂಠಪಾಠ ಒಪ್ಪಿಸುವುದು, ರೈಮಿಂಗ್ ವರ್ಡ್ಸ್ ಹೇಳುವುದು, ತಮ್ಮ ಸ್ವಾ-ಪರಿಚಯವನ್ನು ಇಂಗ್ಲೀಷ್‌ನಲ್ಲಿ ಮಾಡುವುದು, ಇಂಗ್ಲೀಷ್ ಪದಗಳನ್ನು ರಚಿಸುವುದು, ಇತ್ಯಾದಿ ಚಟುವಟಿಕೆಗಳನ್ನು ಪ್ರದರ್ಶಿಸುವುದರ ಮೂಲಕ ಮಕ್ಕಳ ಕಲಿಕೆಯ ಮಟ್ಟದ ಹಾಗೂ ಗಳಿಸಿರುವ ಪ್ರತಿಭೆಯ ಅನಾವರಣವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು ೨೦ಕ್ಕೂ ಹೆಚ್ಚು ತಾಯಂದಿರು, ಆಡಳಿತ ಮಂಡಳಿ ಪದಾಧಿಕಾರಿಗಳಾದ ಉಪಾಧ್ಯಕ್ಷರು ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಸಹ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಶಾಲೆಯ ಪ್ರಾಂಶುಪಾಲರಾದ ಶ್ರೀ ಸೂರ್ಯನಾರಾಯಣ್ ಆರ್., ಇವರುಗಳು ಹಾಜರಿದ್ದು, ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಆಡಳಿತ ಮಂಡಳಿ ವತಿಯಿಂದ ಬಹುಮಾನ ವಿತರಿಸಿದರು.
Rotary East English School ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತಾ, 3 ರಿಂದ 8 ವರ್ಷದ ಅವಧಿಯ ಮಕ್ಕಳಿಗೆ ಪೌಷ್ಠಿಕವಾದ ಆಹಾರ ಮಾತ್ರ ನೀಡುವುದಲ್ಲದೆ ಪ್ರೀ.ಎಲ್.ಕೆ.ಜಿ., ಎಲ್.ಕೆ.ಜಿ., ಯು.ಕೆ.ಜಿ. ಹಾಗೂ 1 ಮತ್ತು 2ನೇ ತರಗತಿ ಮಕ್ಕಳಿಗೆ ಚಟುವಟಿಕೆ, ಸೃಜನಶೀಲತೆ ಹಾಗೂ ಆಟಗಳ ಆಧಾರಿತ ಶಿಕ್ಷಣವನ್ನು ಕೊಡುವುದರ ಮೂಲಕ, ಅವರ ಜ್ಞಾನೇಂದ್ರೀಯಗಳಿಗೆ ಸೂಕ್ತ ಪ್ರಚೋದನೆ ಒದಗಿಸಿ ಅವರ ಮೆದುಳಿನ ಬೆಳವಣಿಗೆಯನ್ನು ಉಂಟು ಮಾಡಬಹುದಾಗಿದ್ದು, ಈ ರೀತಿ ಪೋಷಕರ ಮುಂದೆ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳಲ್ಲಿ ಇಂತಹ ಚಟುವಟಿಕೆಗಳ ಹಾಗೂ ಪ್ರತಿಭೆಗಳ ಪ್ರದರ್ಶನ ಮಾಡುವುದರಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಪ್ರತಿಭಾ ಪ್ರದರ್ಶನದ ಹಿಂದೆ ಶ್ರಮ ವಹಿಸಿದ ಪೂರ್ವ ಪ್ರಾಥಮಿಕ ಶಿಕ್ಷಕಿಯರಾದ ಶ್ರೀಮತಿ ರೂಪ ರಾವ್ ಮತ್ತು ಶ್ರೀಮತಿ ಸುಜಾತ ಅವರ ಸೇವೆಯನ್ನು ಪ್ರಶಂಶಿಸಿದರು. ಈ ಕಾರ್ಯಕ್ರಮದಲ್ಲಿ ಸ್ವಾಗತ, ವಂದನಾರ್ಪಣೆ ಹಾಗೂ ನಿರೂಪಣೆಯನ್ನು ಎಲ್.ಕೆ.ಜಿ., ಯು.ಕೆ.ಜಿ. ಮಕ್ಕಳೆ ನಿರ್ವಹಿಸಿದ್ದು, ವಿಶೇಷವಾಗಿತ್ತು.