Dr. B.R. Ambedkar ಅನ್ನ ಕ್ಷಣಿಕ ತೃಪ್ತಿ ನೀಡಿದರೆ, ಶಿಕ್ಷಣ ಶಾಶ್ವತವಾದುದು. ಈ ನಿಟ್ಟಿನಲ್ಲಿ ಚನ್ನಯ್ಯ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ನೀಡಬೇಕು ಎಂದು ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬಸವರಾಜ್ ದೊಡ್ಮನಿ ಹೇಳಿದರು.
ಸಾಗರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಚನ್ನಯ್ಯ ಸಮಾಜ ಸಾಮಾಜಿಕ ಮತ್ತು ಆರ್ಥಿಕ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 68ನೇ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಚನ್ನಯ್ಯ ಸಮಾಜ ಸಾಮಾಜಿಕ ಮತ್ತು ಆರ್ಥಿಕ ಕ್ಷೇಮಾಭಿವೃದ್ಧಿ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚನ್ನಯ್ಯ ಸಮಾಜದವರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಸಮಾಜದವರು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಮಾಜವು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂದರೆ ಶೈಕ್ಷಣಿಕವಾಗಿ ಸಬಲರಾದಾಗ ಮಾತ್ರ ಸಾಧ್ಯ. ಡಾ.ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ. ಅತ್ಯಂತ ಹಿಂದುಳಿದ ಸಮುದಾಯವಾದ ಚನ್ನಯ್ಯ ಸಮಾಜದವರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಉಪನ್ಯಾಸಕ ಮೋಹನ್ ಕುಮಾರ್ ಉಪನ್ಯಾಸ ನೀಡಿ, ಅತ್ಯಂತ ಕಷ್ಟದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಶಿಕ್ಷಣವನ್ನು ಪಡೆದು ಸಮಾಜಕ್ಕೆ ಮಾದರಿಯಾದರು.
ಜಗತ್ತಿನಲ್ಲಿಯೇ ಅತ್ಯಂತ ಉನ್ನತವಾದ ಸಂವಿಧಾನವನ್ನು ನೀಡಿದರು. ತಮ್ಮ ಜೀವಿತದುದ್ದಕ್ಕೂ ಪರಿಶುದ್ಧತೆಯನ್ನು ಕಾಯ್ದುಕೊಳ್ಳುವ ಮೂಲಕ ಓದಿಗಾಗಿಯೇ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಾಗಿಟ್ಟಿದ್ದರು. ವಿಶ್ವದ ಜ್ಞಾನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರುದ್ರಪ್ಪ ಭೈರೇಕೊಪ್ಪ ಮಾತನಾಡಿ, ಸಂವಿಧಾನ ಮೀಸಲಾತಿ ನೀಡಿದ್ದರೂ ಸಹ ಅದು ಪ್ರಬಲ ಜಾತಿಗಳ ಪಾಲಾಗುತ್ತಿದೆ. ಸ್ಪರ್ಶ ಸಮುದಾಯಗಳು ಮೀಸಲಾತಿ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿಗೆ ನಾವೇ ಹೋರಾಟ ಮಾಡಬೇಕಿದೆ ಎಂದ ಅವರು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಜೊತೆಗೆ ಸಮುದಾಯದ ಅಭಿವೃದ್ಧಿಗಾಗಿ 80 ಜನರನ್ನೊಳಗೊಂಡ ಸಂಘಟನೆಯನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದರು.
Dr. B.R. Ambedkar ಚನ್ನಯ್ಯ ಸಮಾಜದ ಕ್ಷೇಮಾಭಿವೃದ್ಧಿ ಸಮಿತಿಯ ಸದಸ್ಯ ಶಿಕ್ಷಕ ಮೂಡಗೋಡು ಮಂಜಪ್ಪ ಅವರು ಸಂವಿಧಾನ ಪೀಠಿಕೆ ಓದಿದರು. ಜಿ.ಎಸ್. ಸಂದೀಪ್ ಪರಿವರ್ತನಾ ಗೀತೆ ಹಾಡಿದರು. ಜಿ.ಎಸ್. ಸಂದೀಪ್ ಮತ್ತು ರುದ್ರಪ್ಪ ಬೈರೆಕೊಪ್ಪ, ಕೆ.ಎಸ್. ಹರೀಶ್, ನಾಗರಾಜ್ ಕಾಸರಕುಪ್ಪೆ ಸಂಗಡಿಗರು ಬಹುಜನ ನಾಯಕ ಜಯಭೀಮ ಎಂಬ ಭೀಮ ಗೀತೆಯನ್ನು ಹಾಡಿದರು.
22 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಚನ್ನಯ್ಯ ಸಮಾಜದ ಕ್ಷೇಮಾಭಿವೃದ್ಧಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷರಾದ ರಂಗಪ್ಪ ಹೊನ್ನೇಸರ, ಎ.ಕೆ. ನಾಗರಾಜಪ್ಪ, ಸುಜಾತ ಮಂಜುನಾಥ್ ರಿಪ್ಪನ್ ಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜಪ್ಪ ಎಚ್. ಆಲಗೇರಿ ಮಂಡ್ರಿ, ರಾಜ್ಯ ಸದಸ್ಯೆ ಹೇಮ ಮಂಜಪ್ಪ ರಿಪ್ಪನ್ ಪೇಟೆ, ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷ ಬಸವಂತಪ್ಪ ಕೋಟೆ. ಜಿಲ್ಲಾ ಗೌರವಾಧ್ಯಕ್ಷ ಸುಬ್ಬಪ್ಪ ಕಾಗೋಡು, ಹಾವೇರಿ ಜಿಲ್ಲಾಧ್ಯಕ್ಷ ಚಂದ್ರಕಾಕತ್, ಕಾರ್ಯಕಾರಿ ಮಂಡಳಿಯ ಸದಸ್ಯೆ ರಾಮಮ್ಮ, ತಾಲೂಕು ಅಧ್ಯಕ್ಷರಾದ ಸೋಮಶೇಖರ್ ವೀರಾಪುರ, ಎಚ್.ಜಿ. ಶ್ರೀನಿವಾಸ, ನಾಗರಾಜ್ ಕಾಸರಕುಪ್ಪೆ, ತಿಮ್ಮಪ್ಪ ಹೊಸಬೀಡು, ಮತ್ತಿತರರಿದ್ದರು.
ಕೆ.ಎಸ್. ಹರೀಶ್ ಸ್ವಾಗತಿಸಿ, ವಂದಿಸಿದರು. ಸಾಹಿತಿ ರೇವಣಪ್ಪ ಬಿದರಗೆರೆ ನಿರೂಪಿಸಿದರು.