Chamber Of Commerce Shivamogga ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಈವರೆಗೂ ಆರೇಳು ವರ್ಷಗಳಿಂದ ಪರೋಕ್ಷ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿ ಕೈಗೊಂಡಿರುವ ವ್ಯಾಪಕ ಸುಧಾರಣೆ ಕ್ರಮಗಳಿಂದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಸಂಘದ ವತಿಯಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸರಕು ಮತ್ತು ಸೇವೆ ಕಾಯ್ದೆಗೆ ಆದ ಇತ್ತೀಚಿನ ತಿದ್ದುಪಡಿಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ಯಶಸ್ವಿವಾಗಿ ಅನುಷ್ಠಾನಗೊಂಡು ತೆರಿಗೆ ಸಂಗ್ರಹಣೆಯಲ್ಲಿ ದಾಖಲೆಯಾಗಲು ತೆರಿಗೆ ಸಲಹೆಗಾರರು, ಸನ್ನದು ಲೆಕ್ಕ ಪರಿಶೋಧಕರ ಸಹಕಾರ ಮತ್ತು ಶ್ರಮವಿದೆ. ಎಲ್ಲರ ಪ್ರಯತ್ನದಿಂದ ವ್ಯವಸ್ಥೆ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರದ ಪಾರದರ್ಶಕ ಸುಧಾರಣ ಕ್ರಮಗಳಿಂದ ತೆರಿಗೆ ಸಂಗ್ರಹಣೆ ದೇಶಾದ್ಯಂತ ಹೆಚ್ಚಾಗಿದ್ದು, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ಹಾಗೂ ಮೂಲಸೌಕರ್ಯದ ಅಭಿವೃದ್ಧಿಯಾಗಿದೆ. ಇಂತಹ ಸೆಮಿನಾರ್ ಕಾರ್ಯಕ್ರಮಗಳಿಗೆ ಮುಂದೆಯೂ ಸಹ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಜತೆಗೆ ಸಂಘ ಕೈಜೋಡಿಸುತ್ತದೆ ಎಂದು ತಿಳಿಸಿದರು.
Chamber Of Commerce Shivamogga ಕರ್ನಾಟಕ ಆದಾಯ ತೆರಿಗೆಯಲ್ಲಿ ಮಾತ್ರವಲ್ಲ, ಜಿಎಸ್‌ಟಿ ಸಂಗ್ರಹದಲ್ಲೂ ಸಹ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಪ್ರಾಮಾಣಿಕ ತೆರಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಾರಣ ಎಂದರು.
ಎಸ್‌ಟಿಡಿಬಿಎ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ಉಪನ್ಯಾಸದ ಸದುಪಯೋಗವನ್ನು ಸಂಘದ ಸದಸ್ಯರು ಪಡೆದುಕೊಳ್ಳಬೇಕು ಎಂದು ಹೇಳಿದರು. ಸರಕು ಮತ್ತು ಸೇವೆ ಕಾಯ್ದೆಗೆ ಆದ ಇತ್ತೀಚಿನ ತಿದ್ದುಪಡಿಗಳ ಬಗ್ಗೆ ಸಿಎ ಜತಿನ್ ಕ್ರಿಷ್ಟೋಪರ್ ವಿವರ ಉಪನ್ಯಾಸ ನೀಡಿದರು. ಉಪನ್ಯಾಸದ ಕೊನೆಯಲ್ಲಿ ತೆರಿಗೆ ಸಲಹೆಗಾರರ ಎಲ್ಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ತೆರಿಗೆ ಸಲಹೆ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ, ಉಪಾಧ್ಯಕ್ಷ ಅತ ಉರ್ ರೆಹಮಾನ್, ಕಾರ್ಯದರ್ಶಿ ಆರ್.ಮನೋಹರ, ಖಜಾಂಚಿ ಎಸ್.ಎಚ್..ಸುರೇಶ್, ಸಹ-ಕಾರ್ಯದರ್ಶಿ, ನಿರ್ದೇಶಕರು, ಸದಸ್ಯರು, ರಾಜ್ಯ ತೆರಿಗೆ ಸಲಹೆಗಾರ ಸಂಘದ ಮಲೆನಾಡು ವಲಯದ ಉಪಾಧ್ಯಕ್ಷ ಶಿವಕುಮಾರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ನಿರ್ದೇಶಕರು, ಸನ್ನದು ಲೆಕ್ಕ ಪರಿಶೋಧಕರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಆಗಮಿಸಿದ ತೆರಿಗೆ ಸಲಹೆಗಾರರು ಭಾಗವಹಿಸಿದ್ದರು.