Dandavati Yojana ರೈತರ, ಜಮೀನುಗಳಿಗೆ ತೊಂದರೆಯಾಗದೆ ದಂಡಾವತಿ ಯೋಜನೆಗೆ ಪರ್ಯಾಯವಾಗಿ ನೀರಾವರಿ ಯೋಜನೆ ಕೈಗೊಳ್ಳಲು ಚಿಂತಿಸಲಾದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಸೊರಬ ಪಟ್ಟಣದ ಶಿರಾಳಕೊಪ್ಪ ರಸ್ತೆಯ ಕೆಇಬಿ ಕಚೇರಿ ಮುಂಭಾಗ ಪಿಡಬ್ಲ್ಯುಡಿ ಇಲಾಖೆಯಿಂದ ಕುಮಟ, ಕಡಮಡಗಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ 25 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಶ್ವತ ಕುಡಿಯುವ ನೀರಿಗಾಗಿ 650 ಕೋಟಿ ರೂ., ವೆಚ್ಚದಲ್ಲಿ 355 ಗ್ರಾಮಗಳಿಗೆ ಶರಾವತಿ ನದಿಯಿಂದ ಪೂರೈಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಪ್ರತಿ ಗ್ರಾಮಗಳಿಗೆ 92 ಯೋಜನೆಗಳ ಅಡಿಯಲ್ಲಿ 250ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು.
Dandavati Yojana ದಂಡಾವತಿ ಯೋಜನೆ ಬದಲಾಗಿದೆ. 190 ಕೋಟಿ ರೂ., ಮೀಸಲಾಗಿದದು, ಹೆಚ್ಚುವರಿ ಅನುದಾನ ತಂದು ಬ್ಯಾರೇಜ್ ನಿರ್ಮಾಣಕ್ಕೆ ಮುಂದಾಗಲಾಗುವುದು. ತಾಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ೪೪ ಗ್ರಾಮಗಳ 3 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ಕಲ್ಪಿಸಲು 53 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆದಿರುವುದಕ್ಕೆ ಸಾಕ್ಷಿಯಾಗಿದೆ. ಬಿಪಿಎಲ್ ಕಾರ್ಡ್ದಾರರಿಗೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ತಡೆಹಿಡಿಯುವುದಿಲ್ಲ. ಸರ್ಕಾರದ ಯೋಜನೆಯನ್ನು ಎಲ್ಲಾ ವರ್ಗದ ಜನರು ಪಕ್ಷ ಬೇಧ ಮರೆತು ಒಪ್ಪಿಕೊಂಡಿರುವುದರಿಂದ ಮುಂದುವರೆಸಲಾಗುವುದು ಎಂದರು.
ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಮಂಜುಳಾ ಹೆಗಡಾಳ್, ಇಒ ಡಾ. ಎನ್.ಆರ್. ಪ್ರದೀಪ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ, ಮುಖಂಡರಾದ ತಬಲಿ ಬಂಗಾರಪ್ಪ, ಡಿ.ಬಿ. ಅಣ್ಣಪ್ಪ, ಎಂ.ಡಿ. ಶೇಖರ್, ಸದಾನಂದಗೌಡ ಬಿಳಗಲಿ, ಕೆ.ಪಿ. ಗೌಡ, ಎಲ್.ಜಿ. ರಾಜಶೇಖರ್, ವಿಶಾಲಕ್ಷಮ್ಮ, ಅತಿಕ್, ಕಲ್ಲಂಬಿ ಹಿರಿಯಣ್ಣ, ನೆಹರೂ ಕೊಡಕಣಿ, ನಾಗರಾಜ್ ಚಿಕ್ಕಸವಿ, ಪುರಸಭೆ ಸದಸ್ಯರಾದ ಶ್ರೀರಂಜನಿ ಪ್ರವೀಣ್ ಕುಮಾರ್, ಪ್ರೇಮಾಟೋಕಪ್ಪ, ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಪಿಡಬ್ಲ್ಯುಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ. ಯಶೋಧರ್, ಇಂಜಿನಿಯರ್‌ಗಳಾದ ಜಿ.ಬಿ. ಕಿರಣ್‌ಕುಮಾರ್, ಎಂ.ಆರ್. ಮನೋಜ್, ಇ. ಶಿವಮೂರ್ತಿ, ಟಿ. ವಿನಾಯಕ ಸೇರಿದಂತೆ ಮತ್ತಿತರರಿದ್ದರು.