Kateel Ashok Pai College 2024ರ ನವೆಂಬರ್ 21ರಂದು ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸನಗರದ ಕುವೆಂಪು ವಿದ್ಯಾಲಯದ ಸಂಸ್ಥಾಪಕರೂ,ನಗರದ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಆದ ಡಾಕ್ಟರ್ ಸೊನಲೆ ಶ್ರೀನಿವಾಸ್ ರವರು ಕನ್ನಡ ಭಾಷೆಯು ಅತ್ಯಂತ ಸಮೃದ್ಧ ಹಾಗೂ ಹಿರಿಯ ಲಿಪಿಯನ್ನು ಹೊಂದಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಕನ್ನಡ ಭಾಷೆ ಕೇವಲ ಭಾಷೆಯಲ್ಲ ಅದು ಈ ನೆಲದ ಸಂಸ್ಕೃತಿ ಎಂದು ತಿಳಿಸಿದರು .ಜ್ಞಾನಕ್ಕಾಗಿ ಬೇರೆಬೇರೆ ಭಾಷೆಗಳನ್ನು ಕಲಿಯುವುದು ಇಂದು ಅಗತ್ಯ ಮತ್ತು ಅನಿವಾರ್ಯ, ಆದರೆ ಕನ್ನಡವನ್ನು ಪ್ರೀತಿಸುವುದು ನಮ್ಮ ಹೃದಯ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಲು ಅತಿ ಅಗತ್ಯ ಎಂದು ತಿಳಿಸಿದರು.
ನಮ್ಮ ಮಾತೃಭಾಷೆಯಲ್ಲಿ ನಾವು ಮಾತನಾಡಿದಾಗ ಕೇವಲ ವಿಷಯವನ್ನು ತಿಳಿಸುವುದಿಲ್ಲ .ಅದರೊಂದಿಗೆ ನಿಜವಾದ ಭಾವವನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕನ್ನಡ ಬಹಳಷ್ಟು ಜ್ಞಾನಿಗಳು ಶ್ರೀಮಂತ ಗೊಳಿಸಿದ ಭಾಷೆ. ಕನ್ನಡಕ್ಕಾಗಿ ಪಂಪನಾದಿಯಾಗಿ ಕುವೆಂಪುರವರವರೆಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಪರಿಯನ್ನು, ಜವಾಬ್ದಾರಿಯನ್ನು ಸೊಗಸಾಗಿ ತಿಳಿಸಿರುವುದನ್ನು ಕಾಣಬಹುದಾಗಿದೆ. ಇಂದು ಯುವಜನರಾಗಿ ವಿದ್ಯಾರ್ಥಿಗಳು ಕನ್ನಡದಲ್ಲಿ ಓದುವುದನ್ನು, ಬರೆಯುವುದನ್ನು ,ಮಾತನಾಡುವುದನ್ನು ಪಾಲಿಸುವ ಅಗತ್ಯವನ್ನು ಅವರು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದರು.
Kateel Ashok Pai College ಈ ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜೇಂದ್ರ ಚೆನ್ನಿ ಇವರನ್ನು ಇತ್ತೀಚೆಗೆ ಕನ್ನಡ ಭಾಷಾ ಭಾರತಿಯ ಗೌರವ ಶ್ರೀ ಪ್ರಶಸ್ತಿ ಪ್ರಕಟವಾಗಿರುವುದಕ್ಕಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವು ಬೆಳಗ್ಗೆ ಕನ್ನಡ ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಕನ್ನಡ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಚೆನ್ನಿ ,ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಉಪನ್ಯಾಸಕರಾದ ಶ್ರೀಮತಿ ಕವಿತಾ ಸುಧೀಂದ್ರ ,ಡಾ. ಮಧು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ವಹಿಸಿದ್ದರು. ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಿವಿಧ ಕನ್ನಡ ಗೀತೆಗಳು ಹಾಗೂ ನೃತ್ಯಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಸಂಧ್ಯಾ ನಡೆಸಿಕೊಟ್ಟರು. ಪ್ರಜ್ಞಾ ದೀಪ್ತಿ ಮತ್ತು ತಂಡದವರು ಪ್ರಾರ್ಥಿಸಿದರು.
ಕುಮಾರಿ ಸುಖಿತ ಸ್ವಾಗತಿಸಿ, ಶ್ರೀ ಅಜಯ್ ವಂದನೆಯನ್ನು ಸಲ್ಲಿಸಿದರು .ಮುಖ್ಯ ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿನಿ ಸ್ಪೂರ್ತಿ ನಡೆಸಿಕೊಟ್ಟರು