JCI Shivamogga ಉತ್ತಮ ಜೀವನಶೈಲಿ, ಆಹಾರ ಪದ್ಧತಿ, ಯೋಗ, ಪ್ರಾಣಾಯಾಮದ ಅಭ್ಯಾಸದಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಯುರ್ವೇದ ತಜ್ಞೆ ಡಾ. ಜ್ಯೋತಿ ಲಕ್ಷ್ಮೀಪಾಟೀಲ್ ಹೇಳಿದರು.
ಅಶ್ವತ್ಥ್ ನಗರದ 8ನೇ ತಿರುವಿನಲ್ಲಿರುವ ಶಿವಶಕ್ತಿ ಯೋಗ ಮಂದಿರದಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಆಯೋಜಿಸಿದ್ದ ಉಚಿತ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ, ಆಯುರ್ವೇದದಲ್ಲಿ ಮನೆಮದ್ದು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸನಾತನ ಆಯುರ್ವೇದ ಪದ್ಧತಿಯು ಕರೋನಾ ಸಂದರ್ಭದಲ್ಲಿ ಲಕ್ಷಾಂತರ ಜನರ ಜೀವ ಕಾಪಾಡಿದೆ. ಇಂದಿಗೂ ಯಾವುದೇ ತರಹದ ಅಡ್ಡ ಪರಿಣಾಮಗಳಿಲ್ಲದೇ ಆಯುರ್ವೇದದಲ್ಲಿ ಒಳ್ಳೆಯ ಔಷಧ ಪದ್ಧತಿಗಳಿವೆ. ಇತ್ತೀಚಿನ ದಿನಗಳಲ್ಲಿ ತಕ್ಷಣ ಕಾಯಿಲೆ ವಾಸಿಯಾಗಲು ಕೂಡಲೇ ಪರಿಣಾಮ ಬೀರುವ ಔಷಧಗಳ ಮೊರೆ ಹೋಗುತ್ತಾರೆ. ಇದರಿಂದ ಹೊಸ ಹೊಸ ಕಾಯಿಲೆಗಳು ಕಾಣಿಸುತ್ತವೆ. ಇಂತಹ ಶಿಬಿರದ ಸದುಪಯೋಗ ಪಡೆದುಕೊಂಡು ಜನರು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
JCI Shivamogga ಯೋಗಶಿಕ್ಷಕ ಕಾಟನ್ ಜಗದೀಶ್ ಮಾತನಾಡಿ, ಶಿಬಿರದಲ್ಲಿ ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಥೈರಾಯ್ಡ್, ಮಂಡಿ ನೋವು, ಸೊಂಟ ನೋವು, ಮೈಗ್ರೇನ್, ತಲೆನೋವು, ಮಾನಸಿಕ ಒತ್ತಡ ಹೀಗೆ ಅನೇಕ ಕಾಯಿಲೆಗಳಿಗೆ ಯೋಗ, ಪ್ರಾಣಾಯಾಮ, ಧ್ಯಾನದ ಮೂಲಕ ಪರಿಹಾರ ಕಂಡುಕೊಳ್ಳುವ ಮಾರ್ಗ ತಿಳಿಸಲಾಗುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಡಾ. ಪರಿಸರ ನಾಗರಾಜ್, ಪ್ರತಿಭಾ ಅಶೋಕ್, ಮಂಜುಳಾ ಪ್ರೇಮ್‌ಕುಮಾರ್, ರಾಮಚಂದ್ರಪ್ಪ, ಮತ್ತು 60ಕ್ಕೂ ಹೆಚ್ಚು ಯೋಗಾಸಕ್ತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.