SJM College of Pharmacy ಕಳೆದ 15 ವರ್ಷಗಳಿಂದ ಕಾನೂನು ಸಮರದಲ್ಲಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್ ಕೆ ಎಸ್ ಸ್ವಾಮಿಯವರಿಗೆ ಚಿತ್ರದುರ್ಗದ ಎಸ್ ಜೆ ಎಂ ಫಾರ್ಮಸಿ ಕಾಲೇಜಿಗೆ ಮತ್ತೆ ಪ್ರಾಂಶುಪಾಲರಾಗಿ ಮರುನೇಮಕ ಮಾಡಿಕೊಳ್ಳಬೇಕು ಹಾಗೂ ಅವರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ನೀಡಿ 2007 ರಿಂದ ಇಲ್ಲಿಯವರೆಗೂ 50% ವೇತನವನ್ನು ನೀಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
ಇದರಿಂದ ವೇತನವಿಲ್ಲದೇ 15 ವರ್ಷಗಳಿಂದ ಜೀವನ ನಡೆಸುತ್ತಿದ್ದಂತಹ ಡಾ. ಸ್ವಾಮಿಯವರ ಕಾನೂನು ಸಮರಕ್ಕೆ ತೆರೆ ಬಿದ್ದಂತಾಗಿದೆ.
ಕಳೆದ 15 ವರ್ಷಗಳಿಂದ ಎಸ್ ಜೆ ಎಂ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ. ಎಚ್ ಕೆ ಎಸ್ ಸ್ವಾಮಿಯವರು ಎಂ.ಫಾರ್ಮ.ಪಿ.ಹೆಚ್.ಡಿ. ಪದವೀಧರರಾಗಿದ್ದರ. ಅವರನ್ನು ಎಸ್. ಜೆ ಎಂ. ಆಡಳಿತ ಮಂಡಳಿಯ ಆಡಳಿತಾಧಿಕಾರಿಗಳಾದ ಶ್ರೀ. ಎಮ್. ಚಿತ್ರಶೇಖರ್ ರವರು ಪ್ರಾಂಶುಪಾಲರನ್ನಾಗಿ 2007 ನೇಮಕ ಮಾಡಿ, ಬಡ್ತಿ ನೀಡಿದ್ದರು, ಆದರೆ ಅವರಿಗೆ ಕರ್ತವ್ಯ ನಿರ್ವಹಿಸಲು ಮತ್ತು ವೇತನ ಪಡೆಯಲು ಅವಕಾಶ ನೀಡದಿದ್ದರಿಂದ ತಮಗಾದ ಅನ್ಯಾಯವನ್ನು ಸರಿಪಡಿಸಲು ಹೈಕೋರ್ಟಿನ ಮೊರೆಹೋಗಿದ್ದರು. 15 ವರ್ಷ ನಡೆದ ಕಾನೂನು ಸಮರದಲ್ಲಿ ಈಗ ಮತ್ತೆ ಡಾ. ಸ್ವಾಮಿಯವರಿಗೆ ಪ್ರಾಂಶುಪಾಲರಾಗಿ ಮರುನೇಮಕ ಮಾಡಿ, ಅವರಿಗೆ 2007 ರಿಂದ ಇಲ್ಲಿಯವರೆಗೂ 50% ವೇತನವನ್ನು ನೀಡಿ, ಸೇವಾ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.
ಡಾ ಸ್ವಾಮಿಯವರು 2007ರಲ್ಲಿ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾಗಿ ಮುಂಬಡ್ತಿ ಪಡೆದಿದ್ದರು. ಇವರ ಮುಂಬಡ್ತಿಯನ್ನ ಎಐಸಿಟಿಇ AICTE ಗೆ ಮತ್ತು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ PCI ಸಲ್ಲಿಸಿ ಕಾಲೇಜಿಗೆ ಎಂ. ಫಾರ್ಮ. ಮತ್ತು ಫಾರ್ಮ. ಡಿ. ಕೋರ್ಸ್ ಗಳನ್ನು ತರಲಾಗಿತ್ತು. ಆದರೂ ಸಹ ಅದೇ ಕಾಲೇಜಿನಲ್ಲಿ ಹಳೆಯ ಪ್ರಾಂಶುಪಾಲರಾಗಿದ್ದ ಡಾ.ಎನ್ ಜಗದೀಶ್ ರವರು ಇವರಿಗೆ ಕರ್ತವ್ಯ ನಿರ್ವಹಿಸಲು ಮತ್ತು ವೇತನ ಪಡೆಯಲು ಅವಕಾಶ ನೀಡದೆ, ತಾವೇ ಪ್ರಾಂಶುಪಾಲರಾಗಿ ಮುಂದುವರೆದಿದ್ದರು. ಒಟ್ಟಿಗೆ ಎರಡು ವರ್ಷ ಕಾಲೇಜು ಇಬ್ಬರೂ ಪ್ರಾಂಶುಪಾಲರುಗಳನ್ನ ಹೊಂದಿತ್ತು. ಇದನ್ನ ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ಉಪನ್ಯಾಸಕರುಗಳು ಎಸ್ಎಂ ವಿದ್ಯಾಪೀಠದ ಸ್ವಾಮೀಜಿಯವರ ಗಮನಕ್ಕೆ ತಂದಿದ್ದರು. ಆದರೆ ಆಡಳಿತ ಮಂಡಳಿ ಇದನ್ನ ನರಿಪಡಿಸದೇ ಇವರಿಗೆ ಆನ್ಯಾಯ ಎಸಗಿತ್ತು. ಆಗತಾನೆ ಪಿ.ಎಚ್ ಡಿ. ಮಾಡಿ ಬಂದಿದ್ದ ಡಾ. ಬಿ.ಆರ್. ಭಾರತಿ ಎಂಬುವರನ್ನು ಹೊಸದಾಗಿ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿತ್ತು. ಇವರು ಸಹ ಫಾರ್ಮಸಿ ವಿಷಯದಲ್ಲಿ ಪಿ. ಎಚ್ ಡಿ. ಮಾಡಿರಲಿಲ್ಲವೆಂದು ಹಾಗೂ ಸೇವೆಯಲ್ಲಿ ಕಿರಿಯರು ಎಂದು ಹಾಗೂ ತಮ್ಮ ನೇಮಕ ಇನ್ನೂ ರದ್ದಾಗಿಲ್ಲ ಎಂದು ಡಾ. ಸ್ವಾಮಿಯವರು ಇವರ ನೇಮಕದ ವಿರುದ್ಧ AICTE , ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ RGUHS ಮತ್ತು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಕ್ಕೆ ದೂರು ನೀಡಿದ್ದರು.
SJM College of Pharmacy ಆಡಳಿತ ಮಂಡಳಿ ಇದನ್ನ ಸಹಿಸಲಾರದೆ ಇವರನ್ನು 2009ರಂದು ಸಂಸ್ಥೆಯ ವಿರುದ್ಧ ವಿರೋಧಿ ಚಟುವಟಿಕೆಗಳನ್ನ ಮಾಡಿದ್ದಾರೆ ಎಂದು ಕೆಲಸದಿಂದ ಅಮಾನತುಗೊಳಿಸಿತ್ತು.
ಅಮಾನತುಗೊಳಿಸಿ ವಿಚಾರಣೆಯನ್ನು ಕೈಗೊಳ್ಳದೆ ಬಾಕಿ ಇರಿಸಿತ್ತು. ಈ ಅಮಾನತ್ತಿನ ವಿರುದ್ಧ ಡಾ. ಸ್ವಾಮಿಯವರು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದಲ್ಲಿ 2009ರಲ್ಲಿ ದಾವೆ ಹೋಡಿದ್ದರು. ಗಾವೆ ಹೂಡಿದ ತಕ್ಷಣ ವಿದ್ಯಾಪೀಠವು ಯಾವುದೇ ವಿಚಾರಣೆಯನ್ನು ಕೈಗೊಳ್ಳದೆ ಪ್ರಾಧ್ಯಾಪಕರ ಹುದ್ದೆಗೆ ವಾಪಸ್ ಬನ್ನಿ ಎಂದು ಅಮಾನತ್ತನ್ನು ರದ್ದುಗೊಳಿಸಿತ್ತು. ಆದರೆ ಡಾ. ಸ್ವಾಮಿಯವರು ತನ್ನನ್ನು ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದ್ದು, ಪ್ರಾಂಶುಪಾಲ ಹುದ್ದೆಗೆ ಮಾತ್ರ ವಾಪಸ್ಸು ಬರುತ್ತೇನೆ, ಕೆಳಗಿನ ಪ್ರಾಧ್ಯಾಪಕರು ಹುದ್ದೆಗೆ ಬರುವುದಿಲ್ಲ ಎಂದು ಪತ್ರ ನೀಡಿ, ಕಾಲೇಜಿನಿಂದ ಸಂಬಳ ಪಡೆಯದೆ ಹೊರಗುಳಿದಿದ್ದರು.
ಅದೇ ವರ್ಷ ವಿಧಾನಸೌಧದಲ್ಲಿ ಹೂಡಿದ್ದ ದಾವೆಗೆ ಐಎಎಸ್ ಅಧಿಕಾರಿ ಶ್ರೀ ವಿಠ್ಠಲ್ ಮೂರ್ತಿಯವರು ಇವರನ್ನು ಪ್ರಾಂಶುಪಾಲರಾಗಿ ಮರುನೇಮಕ ಮಾಡಿಕೊಳ್ಳಿ ಎಂಬ ಆದೇಶ ನೀಡಿದ್ದರು, ಆದರೆ ಎಸ್. ಜೆ. ಎಂ ವಿದ್ಯಾಪೀಠವು ಈ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಮತ್ತೆ ಈ ಆದೇಶವನ್ನು ಕಾನೂನು ಪ್ರಕಾರವಾಗಿ ಮಾಡಿಲ್ಲ, ಮತ್ತೊಮ್ಮೆ ಇದನ್ನು ವಿಮರ್ಶೆ ಮಾಡಿ ಆದೇಶ ನೀಡಿ ಎಂದು ಕಡತವನ್ನ ಮತ್ತೆ ವಿಧಾನಸೌಧಕ್ಕೆ ವಾಪಾಸ್ ಕಳಿಸಿತ್ತು. ಅಲ್ಲಿ ಐಎಎಸ್ ಅಧಿಕಾರಿ ಶ್ರೀ ವಿಠ್ಠಲ್ ಮೂರ್ತಿಯವರು ನಿವೃತ್ತಿ ಹೊಂದಿದ್ದರು, ಅಲ್ಲಿ ಬದಲಾಗಿದ್ದ ಐಎಎಸ್ ಅಧಿಕಾರಿ ಶ್ರೀ ಗೋಪಾಲಕೃಷ್ಣ ಎನ್ನುವರು ಇವರು ಪ್ರಾಂಶುಪಾಲರಾಗಿ ನೇಮಕವಾಗಿದ್ದರೂ ಸಹ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ, ಕರ್ತವ್ಯ ನಿರ್ವಹಿಸಿಲ್ಲ ಎಂಬ ಆದೇಶ ನೀಡಿ, ಇವರಿಗೆ ನ್ಯಾಯಾಲಯವನ್ನು ತಪ್ಪುದಾರಿಗೆಳದಿದ್ದಾರೆ ಮತ್ತು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದು 50,000 ರೂ ದಂಡವನ್ನು ವಿಧಿಸಿದ್ದರು.
ಇದರ ವಿರುದ್ಧವಾಗಿ ಮತ್ತೆ ಡಾ. ಸ್ವಾಮಿಯವರು ಹೈಕೋರ್ಟ್ ನಲ್ಲಿ ಮೇಲ್ಮನ ಸಲ್ಲಿಸಿದ್ದರು. ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ ಎಂಬ ಆದೇಶದ ವಿರುದ್ಧ ತಾವು ಸಹಿ ಹಾಕಿಕೊಟ್ಟ ಎಲ್ಲಾ ದಾಖಲೆಗಳು ಮತ್ತು ಎಐಸಿಟಿಇ ಮತ್ತು ಫಾರ್ಮಸಿ ಕೌನ್ಸಿಲ ಆಫ್ ಇಂಡಿಯಾ ಎಂ. ಫಾರ್ಮಾ ಮತ್ತು ಫಾರ್ಮ. ಡಿ ಕೋರ್ಸ್ ಗಳನ್ನ ಇವರ ಹೆಸರಿನಲ್ಲಿ ಮಂಜೂರಾತಿ ಮಾಡಿದ್ದನ್ನು ದಾಖಲೆಗಳ ಸಮೇತ 2013ರಲ್ಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
2013 ರಿಂದ 2022 ರವರೆಗೂ 11 ವರ್ಷ ಈ ದಾವೆ ಹೈಕೋರ್ಟ್ ನಲ್ಲಿ ಹಿಂದೆ ಮುಂದೆ ಸಂಚರಿಸುತ್ತಾ, ಕರೋನ ನೆಪದಲ್ಲಿ ಎರಡು ವರ್ಷ ಹಾಗೂ ಡಾ. ಬಿ.ಆರ್. ಭಾರತೀಯವರು ಕೆಲಸದಿಂದ ನಿರ್ಗಮಿಸಿದರು ಎಂದು ಆ ಜಾಗಕ್ಕೆ ಡಾ. ಟಿ.ಎಸ್.ನಾಗರಾಜ್ ರವರ ನೇಮಕವಾಗಿದ್ದನ್ನ ಮತ್ತೆ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ಧರು. ಡಾ. ಟಿ. ಎಸ್. ನಾಗರಾಜ್ ರವರು ಸಹ ತನಗಿಂತ ಸೇವೆಯಲ್ಲಿ ಕಿರಿಯರಾಗಿದ್ದು, ಫಾರ್ಮಸಿಯಲ್ಲಿ ಪಿ.ಹೆಚ್.ಡಿ. ಮಾಡಿಲ್ಲ ಎಂಬ ಮರುದಾವೆಯನ್ನು ಹೂಡಿದರು. ಆಗ ಮತ್ತೆ ಎರಡು ವರ್ಷ ದಾವೆ ಮುಂದಕ್ಕೆ ಹೋಯಿತು.
14 ವರ್ಷದಿಂದ ನೆಡೆಯುತ್ತಿರುವ ಈ ದಾವೆಯನ್ನು ಬೇಗ ವಿಲೇವಾರಿ ಮಾಡಿ ಎಂದು ಉಚ್ಚ ನ್ಯಾಯಾಲಯದ ರಿಜಿಸ್ಟರ್ ಅವರಿಗೆ ಡಾ. ಸ್ವಾಮಿಯವರು ಮನವಿ ಮಾಡಿಕೊಂಡರು. ಆಗ ಈ ದಾವೆಯನ್ನ ಗೌರವಾನ್ವಿತ ನ್ಯಾಯಾಧೀಶರಾದ ಆರ್. ನಟರಾಜ್ ಎಂಬ ನ್ಯಾಯಾಧೀಶರು ತೆಗೆದುಕೊಂಡು, ಕೇವಲ ಒಂದು ತಿಂಗಳಲ್ಲೇ ವಿಚಾರಣೆ ಮಾಡಿ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಎಸ್.ಜೆ.ಎಂ. ವಿದ್ಯಾಪೀಠಕ್ಕೆ ರಾಜಿ ಮಾಡಿಕೊಳ್ಳಲು ಎರಡು ಬಾರಿ ಅವಕಾಶ ನೀಡಿದ್ದರು. ಆದರೆ ಈ ದಾವೇಯನ್ನು ರಾಜಿ ಮಾಡಿಕೊಂಡು ಬಗೆಹರಿಸಲು ಒಪ್ಪದೇ ಎಸ್.ಜೆ.ಎಂ. ವಿದ್ಯಾಪೀಠ ಗೌರವಾನ್ವಿತ ನ್ಯಾಯಾಧೀಶರಿಗೆ ಆದೇಶ ಮಾಡಲು ವಿನಂತಿಸಿಕೊಂಡಿದ್ದರು.
ಇದನ್ನ ಪರಿಗಣಿಸಿ ಗೌರವಾನ್ವಿತ ನ್ಯಾಯಾಧೀಶರು 24-9-2024 ಆದೇಶ ಮಾಡಿ, ಡಾ. ಸ್ವಾಮಿಯವರ ನೇಮಕವನ್ನು ಎತ್ತಿ ಹಿಡಿದು, ಅವರನ್ನ ಪ್ರಾಂಶುಪಾಲರನ್ನಾಗಿ ಮರು ನೇಮಕ ಮಾಡಿ, ಅವರಿಗೆ 50% ರಷ್ಟು ಹಳೆಯ ಬಾಕಿ ಸಂಬಳವನ್ನು ನೀಡಿ, ಸೇವಾ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂಬ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದ ಡಾ. ಸ್ವಾಮಿಯವರಿಗೆ ಆಗಿದ್ದ 15 ವರ್ಷದ ಅನ್ಯಾಯಕ್ಕೆ ನ್ಯಾಯ ದೊರಕಿದೆ ಎಂದು ಅವರು ಪತ್ರಿಕಾ ಪ್ರಕಟಣೆ ಮುಖಾಂತರ ಸಂತಸ ವ್ಯಕ್ತಪಡಿಸಿದ್ದಾರೆ.
ಇವರಿಗೆ ಇನ್ನೂ ಕೇವಲ ಮೂರು ತಿಂಗಳಷ್ಟು ಮಾತ್ರ ಪ್ರಾಂಶುಪಾಲರಾಗಿ ಸೇವೆ ಮಾಡಲು ಅವಕಾಶವಿದ್ದು, 2025 ಜನವರಿ 22ರಂದು ಇವರು ನಿವೃತ್ತಿ ಹೊಂದುವರು. ಹಾಗಾಗಿ ನ್ಯಾಯಾಲಯವು ಕನಿಷ್ಠಪಕ್ಷ ಸೇವಾ ಅವಧಿ ಒಳಗೆ ತೀರ್ಮಾನ ನೀಡಿದ್ದರಿಂದ ಮೂರು ತಿಂಗಳಾದರೂ ಇವರು ಪ್ರಾಂಶುಪಾಲರಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟಿದೆ ಎಂದರು.
15 ವರ್ಷದಿಂದ ನಡೆದ ಈ ಕಾನೂನು ಸಮರದಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ, ಇಲ್ಲದಿದ್ದರೆ ಜನರಲ್ಲಿ ಕೋರ್ಟು ಕಚೇರಿಗಳ ಮೇಲೆ ನಂಬಿಕೆ ಹೋಗುತ್ತಿತ್ತು, ಆ ನಂಬಿಕೆಯನ್ನ ಉಚ್ಚ ನ್ಯಾಯಾಲಯ ಮತ್ತೆ ಉಳಿಸಿಕೊಟ್ಟಿದೆ. ಇದೊಂದು ಗಾಂಧಿ ಮಾರ್ಗದಲ್ಲಿ ನಡೆಸಿದ ಅಪರೂಪವಾದ ಹೋರಾಟವಾಗಿದೆ.
15 ವರ್ಷ ಕಾಲೇಜಿನ ಹೊರಗಡೆ ಇದ್ದು ಯಾವುದೇ ವೇತನವನ್ನು ಪಡೆಯದೆ, ಹೋರಾಟವನ್ನು ಮುಂದುವರಿಸಿದ್ದ ಇವರು ಸತ್ಯಕ್ಕೆ ಜಯ ತಂದುಕೊಟ್ಟಿದ್ದಾರೆ. ಈ ಕಳೆದ 15 ವರ್ಷಗಳಿಂದ ಡಾ. ಸ್ವಾಮಿಯವರು ಪರಿಸರ ಮತ್ತು ಗಾಂಧಿ ತತ್ವಗಳ ಬಗ್ಗೆ ಕಾರ್ಯಕ್ರಮಗಳನ್ನು ನೀಡುತ್ತಾ ಬದುಕು ಸಾಗಿಸುತ್ತಿದ್ದರು.