Rotary Shivamogga ರೋಟರಿ ಶಿವಮೊಗ್ಗ ಪೂರ್ವ ಆಂಗ್ಲ ಪ್ರೌಢ ಶಾಲೆಯಲ್ಲಿ ಧ್ವಜವನ್ನು ಅರಳಿಸುವುದರ ಜೊತೆಗೆ ತಾಯಿ ಭುವನೇಶ್ವರಿಗೆ ದೀಪ ಹಚ್ಚಿ ಪೂಜೆ ಮಾಡಿದ ನಂತರ ಕನ್ನಡ ರಾಜ್ಯೋತ್ಸವದ ಸಭಾ ಕಾರ್ಯಕ್ರಮವನ್ನು ನಿರ್ವಹಣೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಛಾರಿಟಬಲ್ ಟ್ರಸ್ಟ್ (ರಿ.,)ನ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ., ಇವರು ವಹಿಸಿದ್ದು, ಹಿಂದಿ ಭಾಷೆಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು (೮) ಪಡೆದ ಭಾಷೆಯೆಂದರೆ ಕನ್ನಡ ಎನ್ನುತ್ತ, ಕವಿಪುಂಗವ, ರಸಋಷಿ ಕುವೆಂಪುರವರಿಂದ ಪ್ರಾರಂಭವಾದ ಈ ಪ್ರಶಸ್ತಿ ಪ್ರಸಿದ್ಧ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ವರೆಗೆ ತಲುಪಿರುವುದು ಅತ್ಯಂತ ಸ್ತುತ್ಯಾರ್ಹ ಸಂಗತಿ ಎಂದರು.
ಜರ್ಮನ್ ಭಾಷೆಯು ಇಂದು ಪರಿಪುಷ್ಟವಾಗಿ ಬೆಳೆದು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿಜ್ಞಾನಗಳನ್ನು ತಮ್ಮ ಭಾಷೆಯಲ್ಲಿ ಬೋಧಿಸುವಷ್ಟು ಸಮರ್ಥವಾಗಿರುವಾಗ ಕನ್ನಡ ಭಾಷೆಯು ಇನ್ನು ಪರಿಪುಷ್ಟವಾಗಿ ಹಾಗೂ ಶ್ರೀಮಂತವಾಗಿ ಬೆಳೆಸಿದಲ್ಲಿ, ವೈಜ್ಞಾನಿಕ ವಿಷಯಗಳನ್ನೂ ಪರಿಣಾಮಕಾರಿಯಾಗಿ ಬೋಧಿಸಲು ಸಮರ್ಥವಾಗುತ್ತದೆ.
ಹಾಗೆ ಮಾಡಲು ಕನ್ನಡದವರು ತಮ್ಮ ಮಡಿವಂತಿಕೆಯನ್ನು ಬಿಟ್ಟು ಕನ್ನಡದ ಜಾಯಮಾನಕ್ಕೆ ಒಗ್ಗುವ ಪದಗಳನ್ನು ಆಂಗ್ಲ ಹಾಗೂ ಇತರ ಭಾಷೆಗಳಿಂದ ಆಮದು ಮಾಡಿಕೊಂಡು ಅವುಗಳನ್ನು ತನ್ನದಾಗಿಸಕೊಳ್ಳಬೇಕು ಎಂದರು.ಧ್ವಜ ಅರಳಿಸಿ ತಾಯಿ ಭುವನೇಶ್ವರಿಯ ಪೂಜೆ ನೆರವೇರಿಸಿದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್ ಅವರು ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಇತರರಿಗೆ ಅಭಿವ್ಯಕ್ತಿ ಗೊಳಿಸಲು ಮಾತೃಭಾಷೆ ಅತ್ಯಂತ ಸೂಕ್ತವಾದ ಮಾಧ್ಯಮ ಎಂದು ಅಭಿಪ್ರಾಯ ಪಟ್ಟರು.
Rotary Shivamogga ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ. ಅವರು ಮಾತನಾಡುತ್ತಾ, ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ, ವಿಶಾಲ ಮೈಸೂರನ್ನಾಗಿ ಪರಿವರ್ತಿಸುವಲ್ಲಿ ಆಲೂರು ವೆಂಕಟರಾಯರು, ಹುಯಿಲಗೊಳ ನಾರಾಯಣರಾಯರು ಮತ್ತೀತ್ತರ ಕನ್ನಡದ ಕಟ್ಟಾಳುಗಳು ಪಟ್ಟ ಪರಿಶ್ರಮವನ್ನು ನೆನಪಿಸುತ್ತಾ ನಾವು ಎಲ್ಲೆ ಇರಲಿ, ಹೇಗೆ ಇರಲಿ ಕನ್ನಡ ನಮ್ಮ ಉಸಿರಾಗಿರಬೇಕು ಎಂದು ಕರೆ ಕೊಟ್ಟರು.
ಸಹ ಶಿಕ್ಷಕಿ ಶ್ರೀಮತಿ ಕಾವ್ಯ ಇವರ ಪ್ರಾಸ್ತಾವಿಕ ನುಡಿಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್, ಟ್ರಸ್ಟ್ನ ಉಪಾಧ್ಯಕ್ಷರಾದ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಇವರು ಸಭೆಯನ್ನು ಉದ್ದೇಶಿಸಿ ಈ ಹಬ್ಬದ ಮಹತ್ವವನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟ್ನ ಖಜಾಂಚಿ ರೊ. ವಿಜಯ್ ಕುಮಾರ್, ಟ್ರಸ್ಟ್ನ ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., , ವಿಶೇಷ ಆಹ್ವಾನಿತರಾದ ರೊ. ಮಂಜುನಾಥ್ ಎನ್.ಬಿ., ಪ್ರಾಂಶುಪಾಲರಾದ ಶ್ರೀಯುತ ಸೂರ್ಯನಾರಾಯಣನ್ ಆರ್., ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ರೀಮತಿ ಪ್ರತಿಮಾ ಇವರ ಸ್ವಾಗತದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಶ್ರೀಮತಿ ಹರ್ಷಿತಾ ಇವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.
ಸಹ ಶಿಕ್ಷಕಿ ಸುಪ್ರಿತಾ ಮೋಹನ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.