Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ ಮಾಡುತ್ತಿರುವ ಶಿವಮೊಗ್ಗ ದಸರಾದಲ್ಲಿ ರಂಗ ದಸರಾ ಕಾರ್ಯಕ್ರಮವನ್ನು ಅತ್ಯಂತ ವಿಶೇಷವಾಗಿ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿ ಎಲ್ಲಾ ಸೇರಿ ಒಟ್ಟು ಕನಿಷ್ಠ 20 ನಾಟಕಗಳು ಪ್ರದರ್ಶನ ಆಗುತ್ತಿವೆ. ಅಕ್ಟೋಬರ್ 5ರಿಂದ 10ರ ವರೆಗೆ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಮಹಾನಗರ ಪಾಲಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ಕಿರಿಯ ಅಭಿಯಂತರರು ಹಾಗೂ ರಂಗ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿ ಮಧುನಾಯ್ಕ್ ಎನ್., ಕಲಾವಿದರು ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ, ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಅವರು ಕಾರ್ಯಕ್ರಮದ ವಿವರ ನೀಡಿದರು.
ಅಕ್ಟೋಬರ್ 5ರಂದು ಸಂಜೆ 6 ಗಂಟೆಗೆ ನೀನಾಸಂ ಅಧ್ಯಾಪಕ ಮಂಜು ಕೊಡಗು ಅವರು ಉದ್ಘಾಟಿಸಲಿದ್ದು, ನಂತರ ಅಜಯ್ ನೀನಾಸಂ ಹಾಗೂ ಚಂದ್ರಶೇಖರ ಹಿರೇಗೋಣಿಗೆರೆ ಅವರ ನಿರ್ದೇಶನದಲ್ಲಿ ರಂಗಗೀತೆ ಗಾಯನ ನಡೆಯುವುದು. ಅಕ್ಟೋಬರ್ ೬ರಂದು ಮಕ್ಕಳ ರಂಗ ಆಯೋಜಿಸಿದ್ದು, ಬೆಳಿಗ್ಗೆ 11 ಗಂಟೆಗೆ ವಿನೋಬ ನಗರ ಸರ್ಕಾರಿ ಪ್ರೌಢಶಾಲೆ ಮಕ್ಕಅಳಿಂದ ವಿಜಯ್ ನೀನಾಸಂ ನಿರ್ದೇಶನದಲ್ಲಿ ಬಿ.ವಿ. ಕಾರಂತರ ಪಂಜರ ಶಾಲೆ ನಾಟಕ, 12 ಗಂಟೆಗೆ ದುರ್ಗಿಗುಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳಿಂದ ಚೈತ್ರಾ ಕೆ. ಅವರ ನಿರ್ದೇಶನದಲ್ಲಿ ಡಾ.ಗಜಾನನ ಶರ್ಮ ವಿರಚಿತ ನಾಣಿ ಭಟ್ಟನ ಸ್ವರ್ಗದ ಕನಸು ನಾಟಕ, ಮಧ್ಯಾಹ್ನ 1 ಗಂಟೆಗೆ ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಸತೀಶ್ ಕುಮಾರ್ ಕೆ. ಅವರ ನಿರ್ದೇಶನದಲ್ಲಿ ಹೆಚ್.ಎಸ್. ವೆಂಕಟೇಶ ಮೂರ್ತಿ ವಿರಚಿತ ಬಿಲ್ಲಹಬ್ಬ ನಾಟಕ, ಮಧ್ಯಾಹ್ನ 2 ಗಂಟೆಗೆ ತಾಯಿಮನೆ ಮಕ್ಕಳಿಂದ ಮನು ಟಿ. ಅವರು ರಚಿಸಿ ನಿರ್ದೇಶಿಸಿರುವ ಹುಲಿರಾಯ ನಾಟಕ ಪ್ರದರ್ಶನಗೊಳ್ಳಲಿವೆ. ಅದೇ ದಿನ ಸಂಜೆ 7 ಗಂಟೆಗೆ ಮಹಿಳಾ ನಿರ್ದೇಶಕರ ನಾಟಕ ಕಾರ್ಯಕ್ರಮದಲ್ಲಿ ಪೂರ್ಣಿಮಾ ಎಸ್.ಸಿ. ಅವರ ನಿರ್ದೇಶನದಲ್ಲಿ ಕೆ.ವಿ. ಅಕ್ಷರ ಅವರ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನವಾಗುವುದು. ಅಕ್ಟೋಬರ್ 8ರಂದು ಸಂಜೆ 6 ಗಂಟೆಗೆಯಿಂದ ಮೂರು ಏಕವ್ಯಕ್ತಿ ನಾಟಕಗಳು ಪ್ರದರ್ಶನವಾಗುವವರು. ಕೂಡ್ಲಿ ಶ್ರೀಧರಾಚಾರ್ ಅವರ ರಚನೆ, ಅಭಿನಯ, ನಿರ್ದಶನದಲ್ಲಿ ಕನಕ ನಾಟಕ, ಲವ ಜಿ.ಆರ್. ಅವರ ನಿರ್ದೇಶನದಲ್ಲಿ ಹೊಸಹಳ್ಳಿ ದಾಳೇಗೌಡ ಅವರ ಪ್ರಸ್ತುತಿಯಲ್ಲಿ ಪ್ರಸನ್ನ ಅವರ ತದ್ರೂಪಿ ನಾಟಕ, ಹೊನ್ನಾಳಿ ಚಂದ್ರಶೇಖರ್ ಅವರ ನಿರ್ದಶನ, ಅಜಯ್ ನೀನಾಸಂ ಅವರ ಪ್ರಸ್ತುತಿತಯಲ್ಲಿ ಪಿ. ಲಂಕೇಶ್ ಅವರ ಜಯಂತ್‌ನ ಸ್ವಗತ ನಾಟಕ ಪ್ರದರ್ಶನ ಆಗಲಿವೆ ಎಂದು ಹೇಳಿದ್ರು.
Shimoga Dasara 2024 ಅಕ್ಟೋಬರ್ 8ರಂದು ಸಂಜೆ 7 ಗಂಟೆಗೆ ಚಂದನ್ ಅವರ ರಚನೆ ನಿರ್ದೇಶನದಲ್ಲಿ ಮಹಿಷಾಸುರ ಮರ್ಧಿನಿ ನಾಟಕ ಪ್ರದರ್ಶನವಾಗುವುದು. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ವೃತ್ತಿರಂಗಭೂಮಿಯ ಖ್ಯಾತ ಕಲಾವಿದೆ ಅನ್ನಪೂರ್ಣಮ್ಮ ಅವರು ಸಮಾರೋಪ ಭಾಷಣ ಮಾಡುವರು. ನಂತರ ಡಾ. ಗಣೇಶ್ ಕೆಂಚನಾಲ ಅವರ ನಿರ್ದೇಶನದಲ್ಲಿ ದುತ್ತರಗಿ ವಿಚಚಿತ ಮುದುಕನ ಮದುವೆ ನಾಟಕ ಪ್ರದರ್ಶನವಾಗುವುದು ಎಂದರು.
ಕಲಾವಿದರು ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ಅವರು ಮಾತನಾಡಿ, ಈ ಬಾರಿ ಕುಟುಂಬ ರಂಗ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದೇವೆ. ಪಾಲಿಕೆ ನೀಡಿದ ಆಹ್ವಾನದಂತೆ ತಮ್ಮ ಮನೆಗಳಲ್ಲಿಯೇ ನಾಟಕ ಮಾಡಲು ಹಲವು ಕುಟಂಬಗಳು ಉತ್ಸುಕವಾಗಿವೆ. ಅವರ ಕುಟುಂಬದವರೇ ಸೇರಿ ಮನೆಯಲ್ಲಿ ಮಾಡುವ ನಾಟಕಗಳನ್ನು ನಾವು ಹೋಗಿ ವೀಕ್ಷಿಸುತ್ತೇವೆ. ಆಯ್ದ 4 ನಾಟಕಗಳ ಪ್ರದರ್ಶನ ಅಕ್ಟೋಬರ್ 9ರಂದು ಸಂಜೆ 6.30ಕ್ಕೆ ಆಯೋಜಿಸಲಾಗಿದೆ ಎಂದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ, ಪ್ರತಿಭಾ ಕಾರಂಜಿ, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಇತ್ಯಾದಿ ಸಂದರ್ಭದಲ್ಲಿ ಮೇಕಪ್ ಮಾಡಲು ಶಿಕ್ಷಕರು ಕಷ್ಟಪಡುತ್ತಿದ್ದರು. ಈ ಹಿನ್ನಲೆಯಲ್ಲಿ ಶಿವಮೊಗ್ಗದ ಸರ್ಕಾರಿ ಶಾಲೆಗಳ ಆಯ್ದ 35 ಶಿಕ್ಷಕರಿಗೆ ನೇಪಥ್ಯ ರಂಗ ಪ್ರಸಾದನ ಶಿಬಿರ ಆಯೋಜಿಸಲಾಗಿತ್ತು. ಈ ಶಿಕ್ಷಕರಿಗೆ ಸರಳವಾದ ಪ್ರಸಾದನ ಕಿಟ್ ನೀಡುವುದಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕಲಾವಿದರು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಅವರು ಮಾತನಾಡಿ, ಈ ಬಾರಿ ರಂಗ ದಸರಾದಲ್ಲಿ ಕಲಾವಿದರು, ತಂಡಗಳು ಭಾಗವಹಿಸುವುದರ ಬದಲಾಗಿ ಎಲ್ಲಾ ಕಲಾವಿದರು ಒಟ್ಟಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ಹಾಗಾಗಿ ಯಾವ ತಂಡಗಳ ಹೆಸರೂ ಇಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರು ಒಕ್ಕೂಟದ ಕಾರ್ಯದರ್ಶಿ ಸುರೇಶ್ ಹೆಚ್.ಎಸ್., ಕಲಾವಿದರಾದ ಲವ ಜಿ.ಆರ್. ಚಂದನ್ ನೀನಾಸಂ, ಚಂದ್ರಶೇಖರ ಹಿರೇಗೋಣಿಗೆರೆ ಇದ್ದರು.
Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ
Date: