Madhu Bangarappa ಕಲಿಯುವ ಮಕ್ಕಳಿಗೆ ಉತ್ತಮ ವಿದ್ಯೆ, ಯೋಗ್ಯ ಸಂಸ್ಕಾರ, ರೈತರು ಉಳುವ ಭೂಮಿಗೆ ಹಕ್ಕುಪತ್ರ, ನೀರಾವರಿ ಮತ್ತು ಉತ್ತಮ ಬೆಳೆ ಬಂದರೆ ನಿತ್ಯವೂ ನವರಾತ್ರಿಯ ಸಂಭ್ರಮ ಮನೆಮಾಡುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಾಗರ ತಾಲೂಕು ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇಗುಲದಲ್ಲಿ ಗುರುವಾರ ದಸರಾ ವೈಭವ ಕಾರ್ಯಕ್ರಮಕ್ಕೆ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ನವರಾತ್ರಿಯ ಸಂಭ್ರಮ ಇಮ್ಮಡಿಯಾಗಿದೆ. ರಾಜ್ಯ ಸರ್ಕಾರ ಸಂವಿಧಾನ ಓದು ಕಾರ್ಯಕ್ರಮವನ್ನು ಜಾರಿಗೆ ತಂದಿರುವುದರಿಂದ ಮಕ್ಕಳಲ್ಲಿ ಸಂವಿಧಾನದ ಅರಿವು, ಜಾತ್ಯತೀತ ಮನೋಭಾವ ಹೆಚ್ಚಾಗುತ್ತದೆ. ಮಕ್ಕಳನ್ನು ಜಾತಿ-ಧರ್ಮದ ತಾರತಮ್ಯದಿಂದ ದೂರ ಮಾಡುತ್ತದೆ ಎಂದರು.
ಮಕ್ಕಳಲ್ಲಿ ಜಾತಿ ಪ್ರೇಮ ಮೂಡಬಾರದು. ಇದು ಎಂದಿಗೂ ದೇಶ ಪ್ರೇಮವಾಗುವುದಿಲ್ಲ. ಜಾತಿ- ಧರ್ಮದ ಸಂಕೋಲೆ ತೊರೆದು ಒಳ್ಳೆಯ ಪ್ರಜೆಯಾಗಬೇಕು ಎಂದರೆ, ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಮಾತ್ರ ಸಾಧ್ಯ. ಒಂದೇ ಜಾತಿ, ಒಂದೇ ಮತ ಎಂದು ನಾರಾಯಣ ಗುರುಗಳ ಆಶಯವನ್ನು ವೇದಿಕೆ ಮೇಲೆ ಭಾಷಣ ಮಾಡಲಾಗುತ್ತದೆ. ಆದರೆ, ರಾಜಕಾರಣಕ್ಕೆ ಹೋಗಿ ಜಾತಿ, ಧರ್ಮದ ಹೆಸರಿನಲ್ಲಿ ಕಚ್ಚಾಡಿದರೆ, ದೇಶದ ಭವಿಷ್ಯ ಕಟ್ಟಲು ಸಾಧ್ಯವಿಲ್ಲ ಎಂದರು.
ನಾಡಿನ ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಮಷ್ಟಿಯ ದೃಷ್ಟಿಕೋನವನ್ನು ಹೊಂದಿದೆ. ಧರ್ಮದರ್ಶಿ ರಾಮಪ್ಪ ಅವರು ಅನೇಕ ಸಾಮಾಜಿಕ ಕಾರ್ಯಗಳಿಗೆ ಜೀವ ತುಂಬಿದ್ದಾರೆ. ಅದೇ ರೀತಿ, ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದ, ಮುಂದಿನ ದಿನದಲ್ಲೂ ಈ ಸಹಕಾರ ಶಿಕ್ಷಣ ಕ್ಷೇತ್ರಕ್ಕೆ ಇರಲಿ ಎಂದು ಕೋರಿದರು.
ಶಿಕ್ಷಣ ಇಲಾಖೆಯಲ್ಲಿ ಅನೇಕ ಬದಲಾವಣೆ ತರಲಾಗುತ್ತಿದೆ. ಶರಾವತಿ ಸಂತ್ರಸ್ತರ ಕಣ್ಣೀರು ಒರೆಸುವ ಹೊಣೆ ಸರ್ಕಾರ ಮೇಲಿದೆ. ಇದಕ್ಕೆ ಕ್ರಮವಹಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರ ಹಸಿವು ನೀಗಿಸಲಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಇಲಾಖೆ ಕಟಿಬದ್ಧವಾಗಿದೆ ಎಂದರು.
Madhu Bangarappa ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಮಾತನಾಡಿ, ಚೌಡೇಶ್ವರಿ ದೇವಿಯ ಅನುಗ್ರಹದಿಂದ ಉತ್ತಮ ಮಳೆ- ಬೆಳೆ ಆಗಿದೆ. ಇಲ್ಲಿ ದಸರಾ ಹಬ್ಬವನ್ನು 34 ವರ್ಷದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಶ್ರೀ ಕ್ಷೇತ್ರದಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿ ದಶಕಗಳಿಂದ ಬಗೆಹರಿಯದ ಹತ್ತಾರು ಸಮಸ್ಯೆಗಳು ಜೀವಂತವಾಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಮುಕ್ತಿ ಕೊಡಿಸಬೇಕು. ಮುಳುಗಡೆ ರೈತರು ಹಾಗೂ ಬಗರ್ ಹುಕುಂ ಸಾಗುವಳಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. 75 ವರ್ಷಗಳ ದಾಖಲೆ ಕೇಳಿದರೆ ಮುಳುಗಡೆ ಸಂತ್ರಸ್ತರಿಗೆ ಕೊಡಲಾಗುವುದಿಲ್ಲ ಈ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಹೇಳಿದರು.
ಸಿಗಂದೂರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಶಾಲೆಗಳ ಸೌಂದರ್ಯೀಕರಣಕ್ಕೆ ಸಿಗಂದೂರು ಚಿತ್ತ ಸರ್ಕಾರಿ ಶಾಲೆಗಳತ್ತ ಯೋಜನೆ ಮೂಲಕ ತಾಲ್ಲೂಕಿನ 49ಕ್ಕೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕರೂರು ಹೂಬಳಿ ತುಮರಿ ಗ್ರಾಂಥಾಲಯಕ್ಕೆ 1 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸ್ಪರ್ಧಾತ್ಮಕ ಪರೀಕ್ಷಾ ಸಲಕರಣೆ ವಿತರಣೆ ಸೇರಿ ಅನೇಕ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಪ್ರಮುಖರಾದ ಆರ್.ಪ್ರಸನ್ನ ಕುಮಾರ, ಕಲಗೋಡು ರತ್ನಾಕರ, ಶ್ರೀನಿವಾಸ ಕರಿಯಣ್ಣ, ಶಾಂತವೀರ ನಾಯ್ಕ, ಹೊಳಿಯಪ್ಪ, ಸರಸ್ವತಿ ಗಣಪತಿ, ಮಂಜಪ್ಪ ಮರಸ, ಯೋಗರಾಜ್ ಯಮಗಳಲತೆ ಮತ್ತಿತರರಿದ್ದರು.