Mahatma Gandhi ಗಾಂಧಿ ಟೋಪಿಯನ್ನು ಧರಿಸುವುದು ಕೇವಲ ತೋರಿಕೆಯಾಗದೆ ಮಹಾತ್ಮರ ಆದರ್ಶಗಳ ಪಾಲಿಕೆಯಾಗಬೇಕು, ಇದು ನಾವು ಮಹಾತ್ಮರ ದಿವ್ಯಾತ್ಮಕ್ಕೆ ಸಲ್ಲಿಸಬಹುದಾದ ಶ್ರೇಷ್ಠ ಗೌರವ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು.
ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಲಯನ್ಸ್ ಕ್ಲಬ್, ಲಯನ್ಸ್ ಟ್ರಸ್ಟ್ ಹಾಗೂ ಲಯನ್ಸ್ ಶಾಲಾ ಸಂಯುಕ್ತ ಆಶ್ರಯದಲ್ಲಿ ನೆರವೇರಿದ ಮಹಾತ್ಮ ಗಾಂಧೀ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ವಿಶೇಷ ಉಪನ್ಯಾಸ ನೀಡುತ್ತಾ ಆಂಧ್ರಪ್ರದೇಶದಲ್ಲಿ ಮಹಾತ್ಮ ಗಾಂಧೀಜಿಯವರ ಭಾಷಣ ಕೇಳಿದ ಶ್ರೀಮಂತ ಮಹಿಳೆಯೋರ್ವಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಗಾಂಧೀಜಿಯವರ ತಂಡದ ಹಿಂದೆ ಹೋಗುವ ನಿರ್ಧಾರ ಮಾಡಿ ತನ್ನ ಮೈ ಮೇಲಿದ್ದ ಎಲ್ಲಾ ಒಡವೆಗಳನ್ನು ಬಿಚ್ಚಿ ಕರವಸ್ತದಲ್ಲಿ ಕಟ್ಟಿ ಅಪರಿಚಿತ ವ್ಯಕ್ತಿಯೋರ್ವನ ಕೈಗೆ ಕೊಟ್ಟು ತನ್ನ ಮಾವನಿಗೆ ತಲುಪಿಸುವಂತೆ ಹೇಳಿದಳು.
ಗಾಬರಿಗೊಂಡ ಆ ವ್ಯಕ್ತಿ “ಪರಿಚಯವೇ ಇಲ್ಲದ ನನ್ನ ಕೈಗೆ ಇಷ್ಟೊಂದು ಆಭರಣ ಕೊಟ್ಟಿರಲ್ಲ?!!, ನನ್ನ ಬಗ್ಗೆ ನಿಮಗೆ ವಿಶ್ವಾಸ ಹೇಗೆ ಬಂತು?!” ಎಂದು ಕೇಳಿದಾಗ ಆ ಮಹಿಳೆಯು “ನಿನ್ನ ತಲೆಯ ಮೇಲೆ ಗಾಂಧಿ ಟೋಪಿ ಇದೆ ಅಂದ ಮೇಲೆ ನೀನು ಪ್ರಾಮಾಣಿಕ ವ್ಯಕ್ತಿಯೇ ಆಗಿರುತ್ತೀ ಎಂಬ ವಿಶ್ವಾಸ ನನ್ನದು”ಎಂದಳು.
ಗಾಂಧಿ ಟೋಪಿ ಧರಿಸಿದವರು ಈ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು,ಆಗ ತೋರಿಕೆಯಾಗದೆ ಪಾಲಿಕೆಯಾಗುತ್ತದೆ ಎಂದು ಡಾ.ಎಚ್ ಬಿ ಮಂಜುನಾಥ್ ಹೇಳಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಸರಳ ಜೀವನ, ಪ್ರಾಮಾಣಿಕತೆ ನಿದರ್ಶನ ಘಟನೆಗಳನ್ನು ಮನೋಜ್ಞವಾಗಿ ವಿವರಿಸಿದರು. ಲಯನ್ ಆರ್ ಜೆ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ ಉಳವಯ್ಯ ಎಸ್ ಜಿ ನೆರವೇರಿಸಿದರು.
Mahatma Gandhi ಲಯನ್ ಹೆಚ್ ಸಿ ಹುಲ್ಲತ್ತಿ ಹಾಗೂ ಲಯನ್ ಎಂ ಎಸ್ ಉದಯಕುಮಾರ್ ಪ್ರಾಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ ಗಳಾದ ವೈ ಬಿ ಸತೀಶ್, ಬೆಳ್ಳೂಡಿ ಶಿವಕುಮಾರ್, ಕೆ ಮುರುಗೇಶಪ್ಪ, ಎ ರಮೇಶ್, ಎ ಎಸ್ ಮೃತ್ಯುಂಜಯ, ಎನ್ ವಿ ಬಂಡಿವಾಡ, ಎಸ್ ನಾಗರಾಜ, ಎಚ್ ಎಂ ನಾಗರಾಜ್, ಶಾಲಾ ಮುಖ್ಯೋಪಾಧ್ಯಾಯನಿ,ಶಿಕ್ಷಕಿಯರು ಮುಂತಾದವರು ಭಾಗವಹಿಸಿದ್ದರು. ಶಾಲಾ ಮಕ್ಕಳು ಗಾಂಧೀಜಿ ಹಾಗೂ ಶಾಸ್ತ್ರೀಜಿ ಬಗ್ಗೆ ಮಾತುಗಳನ್ನಾಡಿದರು.