High Court of Karnataka ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು, ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಪ್ರಕರಣದ ಆರೋಪಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು, ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿ ತೀರ್ಪು ನೀಡಿದೆ.
ಪ್ರಕರಣದ ಆರೋಪಿಯಾದ ಎ.ರೋಷನ್ (27) ಎಂಬುವರು ಈ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ಕಾಯ್ದಿರಿಸಿದ್ದ ತೀರ್ಪನ್ನು, ಇದೇ 20 ರಂದು ಪ್ರಕಟಿಸಿತ್ತು.
ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ.
‘ಪ್ರಕರಣವನ್ನು ಎನ್ಐಎಗೆ ತನಿಖೆ ಒಪ್ಪಿಸಲು ಅನುಮತಿ ಪಡೆದಿಲ್ಲ. ಪ್ರಕರಣದಲ್ಲಿ ಯುಎಪಿಎ ಅಂತಹ ಗಂಭೀರ ಪ್ರಕರಣ ದಾಖಲಿಸಲು ಯಾವುದೇ ಆಧಾರವಿಲ್ಲ’ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು.
High Court of Karnataka ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಅವರು, ‘ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಕೊಲೆ ಮಾಡಲಾಗಿದೆ. ಸಾಕಷ್ಟು ಅಂಶಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಎನ್ಐಎ ತನಿಖೆಗೊಪ್ಪಿಸಿದೆ’ ಎಂದು ಪ್ರತಿವಾದ ಮಂಡಿಸಿದ್ದರು.
ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ, ಆರೋಪಿ ಅರ್ಜಿ ವಜಾಗೊಳಿಸಿ ತೀರ್ಪು ನೀಡಿದೆ.
ಕೊಲೆ ಪ್ರಕರಣ :
2022 ರ ಫೆಬ್ರವರಿ 20 ರಂದು
ಶಿವಮೊಗ್ಗದ ಭಾರತೀ ಕಾಲೋನಿ ಬಳಿ, ಹರ್ಷ (28) ಕೊಲೆ ನಡೆದಿತ್ತು. 2022 ರ ಮಾರ್ಚ್ 21 ರಂದು ಕೇಂದ್ರ ಸರ್ಕಾರವು ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೊಪ್ಪಿಸಿ ಆದೇಶ ಹೊರಡಿಸಿತ್ತು.