Teacher’s Day ಪೇಸ್ ಪಿ.ಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲೆಯ ವಿವಿಧ ಶಾಲೆಗಳಿಂದ ಆಯ್ದ ಉತ್ತಮ ಶಿಕ್ಷಕರುಗಳನ್ನು ಸನ್ಮಾನಿಸುವ “ಗುರು ವಂದನಾ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಿವಮೊಗ್ಗದ ಪೋದಾರ್ ನ ಶ್ರೀ ಸುಕೇಶ್ ಸೇರಿಗಾರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಸ್ವಾಮಿ ವಿವೇಕಾನಂದರ ಪರಿಕಲ್ಪನೆಯ ಜ್ಞಾನಗಳಿಕೆಯೇ ಶಿಕ್ಷಣದ ಉದ್ದೇಶ ಎಂಬುದನ್ನು ತಿಳಿಸುತ್ತಾ ಶಿಕ್ಷಣವು ಪರಿಪೂರ್ಣತೆಯೆಡೆಗೆ ಕೊಂಡೊಯ್ಯಬೇಕು. ಈಗ ಚೀನಾವು ಬಾಂಬ್ ಹಾಕುವುದರ ಬದಲಿಗೆ ಹೊಸ ಹೊಸ ಗೇಮಿಂಗ್ ಆಪ್ ಗಳ ಮೂಲಕ ಲಕ್ಷಾಂತರ ಯುವಕರನ್ನು ಹಾಳು ಮಾಡುತ್ತಿದ್ದಾರೆ. ಅದರ ಗೀಳಿಗೆ ಬೀಳದೆ ಉತ್ತಮ ಶಿಕ್ಷಣ ಪಡೆಯಬೇಕೆಂದು ಹೇಳಿದರು. ಮೆಕಾಲೆ ಶಿಕ್ಷಣ ಪದ್ಧತಿಗಿಂತಲೂ ಭಾರತೀಯ ಶಿಕ್ಷಣ ಪದ್ಧತಿಯೇ ಹೆಚ್ಚು ಸೂಕ್ತ ಎಂದರು.
ಅನನ್ಯ ವಿದ್ಯಾಪೀಠದ ಆರ್ ಗಿರೀಶ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ತಾಯಿ ಎಂದರೆ ಸತ್ಯ, ತಂದೆ ಎಂದರೆ ನಂಬಿಕೆ, ಗುರು ಎಂದರೆ ವಾಸ್ತವ. ಹಾಗಾಗಿ ಬದುಕಿನಲ್ಲಿ ತಾಯಿ, ತಂದೆ, ಗುರುಗಳನ್ನು ಗೌರವಿಸಬೇಕೆ ಹೊರತು ಅವರನ್ನು ಮೀರಿ ನಾನೇ ಶ್ರೇಷ್ಠ ಎಂಬ ಅಹಂಕಾರ ಬೆಳೆದಲ್ಲಿ ಕಲಿಕೆ ಮತ್ತು ಏಳ್ಗೆ ಕುಂಠಿತವಾಗುತ್ತದೆ. ಆದ್ದರಿಂದ ವಿನಯತೆಯನ್ನು ಬೆಳೆಸಿಕೊಳ್ಳುವುದೇ ಶಿಕ್ಷಣ ಅದನ್ನು ಪಡೆಯಿರಿ ಎಂದರು.
ಸಾಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ಶ್ರೀಮತಿ ವಿಜಯಲಕ್ಷ್ಮಿ ಡಿ. ಕೆ ಅವರು ಸನ್ಮಾನ ಸ್ವೀಕರಿಸಿ ಮಕ್ಕಳ ಉತ್ತಮ ಕಲಿಕೆಗೆ ಶಿಕ್ಷಕ ಅಗತ್ಯ ಎಂದು ಹೇಳುತ್ತಾ ಗುರಿ ತೋರುವ ಗುರುವೇ ಶ್ರೇಷ್ಠ. ಅಲ್ಲದೇ ಮುಂದಿನ ವೃತ್ತಿಪರ ಶಿಕ್ಷಣದ ಕೋರ್ಸ್ಗಳನ್ನು ನಿಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ದುಕೊಳ್ಳಿ. ಏಕೆಂದರೆ ಬದುಕಿನುದ್ದಕ್ಕೂ ಸಾಗಬೇಕಾಗಿರುವುದು ಅದರ ಜೊತೆಗೆ ಆದ್ದರಿಂದ ಆಯ್ಕೆ ಸರಿಯಾಗಿರಲಿ ಎಂದರು.
Teacher’s Day ನಿಸರಾಣಿಯ ವಿ. ಎಸ್. ಪ್ರೌಢಶಾಲೆಯ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಟಿ. ಎಂ. ಅವರು ಸನ್ಮಾನ ಸ್ವೀಕರಿಸಿ ಮಕ್ಕಳು ಸಮಯ ಮಹತ್ವ ಅರಿತು ಅದನ್ನು ವ್ಯರ್ಥ ಮಾಡದೇ ಕಲಿಯಬೇಕೆಂದು ತಿಳಿಸಿದರು.
ಹಾಗೆಯೇ ಕಾರೇಹಳ್ಳಿಯ ಬಿ. ಜಿ. ಎಸ್ ಪ್ರೌಢಶಾಲೆ ಶ್ರೀವೀರರಾಜೇಂದ್ರ ಸ್ವಾಮಿ ಎ. ಎಂ. ಹಾಗೂ ದೊಡ್ಡೇರಿಯ ಜ್ಞಾನವಾಹಿನಿ ಪ್ರೌಢಶಾಲೆಯ ಶ್ರೀ ಅಣ್ಣಪ್ಪ ಕೆ. ಎಂ. ಇವರುಗಳನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜ್ಞಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಾನ್ಯ ಕೆ. ಎಸ್. ಈಶ್ವರಪ್ಪನವರು ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪ್ರೊ ಹೆಚ್. ಆನಂದ್ ಹಾಗೂ ಕಾರ್ಯದರ್ಶಿಗಳೂ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಿ. ಎನ್. ವಿಶ್ವನಾಥಯ್ಯನವರು ಉಪಸ್ಥಿತರಿದ್ದರು.
ಶ್ರೀಮತಿ ಜ್ಞಾನಶ್ರೀ ಸ್ವಾಗತಿಸಿ, ಶ್ರೀಅರ್ಜುನ್ ವಂದಿಸಿದರು. ಡಾ. ಮೈತ್ರೇಯಿ ಕಾರ್ಯಕ್ರಮ ನಿರೂಪಿಸಿದರು.