Shivaganga Yoga Centre ಸಮಾಜ ಸುವ್ಯವಸ್ಥಿತ ಹಾಗೂ ಸುಸಂಸ್ಕೃತವಾಗಿ ನಡೆಯಬೇಕಾದರೆ ಗುರುವಿನ ಪಾತ್ರ ತುಂಬಾ ದೊಡ್ಡದು. ಎಲ್ಲ ಕ್ಷೇತ್ರಗಳನ್ನು ಗುರುವಿನ ಮಹತ್ವ ಅತಿ ಮುಖ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿವೃತ್ತ ಉಪನ್ಯಾಸಕ, ಯೋಗ ಶಿಕ್ಷಕ ಎಚ್.ಎಂ.ಚಂದ್ರಶೇಖರಯ್ಯ ಹೇಳಿದರು.
ಕೃಷಿ ನಗರ ಶಾಖೆಯಲ್ಲಿ ಶಿವಗಂಗಾ ಯೋಗಕೇಂದ್ರದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಎಂದರೆ ವ್ಯಕ್ತಿಯಲ್ಲ, ರಾಷ್ಟ್ರದ ಶಕ್ತಿ. ಪ್ರತಿಯೊಂದು ಹಂತದಲ್ಲೂ ಗುರುವಿನ ಮಾರ್ಗದರ್ಶನ ನಮಗೆ ಅಗತ್ಯವಾಗಿ ಬೇಕು. ಸಮಾಜದ ಓರೆಕೋರೆಗಳನ್ನು ತಿದ್ದುವಂತಹ ಶಕ್ತಿ ಗುರುವಿಗೆ ಇದೆ. ವ್ಯಕ್ತಿ ಎಂತಹ ದೊಡ್ಡ ಸ್ಥಾನದಲ್ಲಿ ಇದ್ದರೂ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇಶಿಯ ವಿದ್ಯಾ ಶಾಲೆ ನಿವೃತ್ತ ಉಪನ್ಯಾಸಕ ನೀಲಕಂಠ ರಾವ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರುವಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ. ಸಾಮಾಜಿಕ ಜಾಲತಾಣದಿಂದ ಮಕ್ಕಳ ಮನಸ್ಸು ವಿಕಲಗೊಳ್ಳುತ್ತಿದೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ತುಂಬಾ ಅಗತ್ಯ. ಎಲ್ಲಿ ಗುರುವನ್ನ ಪೂಜಿಸುತ್ತಾರೋ ಗೌರವಿಸುತ್ತಾರೋ ಅಂತಹ ಸ್ಥಳ ಪವಿತ್ರತೆಯಿಂದ ಕೂಡಿರುತ್ತದೆ ಎಂದರು.
ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ತುಂಬಾ ಪಾವಿತ್ರತೆ ಹಾಗೂ ನಿಸ್ವಾರ್ಥತೆಯಿಂದ ಕೂಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಗುರುಗಳನ್ನ ಗೌರವಿಸಬೇಕು ಎಂದು ತಿಳಿಸಿದರು.
Shivaganga Yoga Centre ಇದೇ ಸಂದರ್ಭದಲ್ಲಿ ಮೇರಿ ಇಮ್ಯಾಕುಲೇಟ್ ಶಿಕ್ಷಕಿ ನಾಗರತ್ನಮ್ಮ ಚಂದ್ರಶೇಖರಯ್ಯ ಮಾತನಾಡಿ, ಅಲ್ಲಮ ಪ್ರಭುಗಳ ವಚನ ಇಂದಿಗೂ ಪ್ರಸ್ತುತ. ಗುರುಗಳ ಬಗ್ಗೆ ಅವರು ಹಾಡಿದ ಮಾತು ಇಂದು ಸತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಕೃಷಿ ನಗರದ ಎಲ್ಲ ಯೋಗಪಟುಗಳು ಗುರುಗಳಿಗೆ ಶುಭಾಶಯಗಳು ತಿಳಿಸಿ ಗೌರವಿಸಿದರು.
ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಜಯಣ್ಣ, ಮಹೇಶ್ವರಪ್ಪ, ಅನಿಲ್, ಚಿದಾನಂದ, ಬಿಂದು ವಿಜಯ ಕುಮಾರ್ ಹಾಗೂ ಯೋಗ ಶಿಕ್ಷಕರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.