Rotary Shivamogga ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಸಮಯದ ಪರಿಪಾಲನೆ, ನಿರಂತರ ಅಭ್ಯಾಸ, ಛಲ ಬಿಡದ ಪ್ರಯತ್ನ, ಓದುವ ಸಮಯದ ನಿಗಧಿ, ಕಲಿಕಾ ಕೊಠಡಿಯ ವಾತಾವರಣ, ಅಭ್ಯಾಸದ ವೇಳಾ ಪಟ್ಟಿಯ ಸಿದ್ಧತೆ & ಅದರ ಪಾಲನೆ ಎಲ್ಲವನ್ನು ಅವಲಂಬಿಸಿದ್ದು, ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಶಿವಮೊಗ್ಗ ನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ನಡೆದ ‘ಅಧ್ಯಯನ ಕೌಶಲ ಹಾಗೂ ಸಮಯ ನಿರ್ವಹಣೆ’ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ತರಬೇತುದಾರರಾಗಿ ಮಾತನಾಡಿದ ಜೆ.ಸಿ.ಐ. ವಲಯ ತರಬೇತುದಾರರಾದ ಶ್ರೀಮತಿ ಸೌಮ್ಯ ಹರಳಪ್ಪ ಇವರು ಪ್ರತಿಪಾದಿಸಿದರು.
Rotary Shivamogga ಇದೇ ಸಂದರ್ಭದಲ್ಲಿ ಮಾತನಾಡಿದ ಶರಾವತಿ ಜೆ.ಸಿ.ಐ.ನ ಅಧ್ಯಕ್ಷರಾದ ಶ್ರೀಮತಿ ಸ್ವಪ್ನ ಸಂತೋಷ್ ಇವರು ವಿದ್ಯಾರ್ಥಿಗಳ ಪ್ರೌಢ ಶಿಕ್ಷಣವು ವ್ಯಕ್ತಿತ್ವ ನಿರ್ಮಾಣದ ಹಾಗೂ ಭವಿಷ್ಯದ ಜೀವನವನ್ನು ರೂಪಿಸುವ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಸಮಯದ ಸರಿಯಾದ ನಿರ್ವಹಣೆ ಮಾಡುವುದರ ಜೊತೆಗೆ ಬೋಧಕರು ಹಾಗೂ ಪೋಷಕರ ಸಲಹೆ ಸೂಚನೆಯನ್ನು ಪಾಲಿಸಿದಾಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬಹುದು ಎಂದರು. ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟನಲ್ ಟ್ರಸ್ಟ್ (ರಿ.,) ಇದರ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಚಂದ್ರಶೇಖರಯ್ಯ ಎಂ., ಇವರು ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸಿದಾಗ ರಾತ್ರಿ ಇಡೀ ಓದಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಅತಿಥಿ ಉಪನ್ಯಾಸಕರು ಸೂಚಿಸಿದಂತೆ ಅಭ್ಯಾಸದ ವೇಳಾಪಟ್ಟಿಯನ್ನು ರೂಪಿಸಿಕೊಂಡು ಅದರಂತೆ ಪ್ರತಿದಿನ ಓದಿ ಆಗಿಂದಾಗ್ಗೆ ಬರುವ ಕಿರು ಪರೀಕ್ಷೆ, ಘಟಕ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಂಡಾಗ ವರ್ಷದ ಕೊನೆಯಲ್ಲಿ ಲೀಲಾಜಾಲವಾಗಿ ಎದುರಿಸಬಹುದೆಂದರು.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರಾಮಚಂದ್ರ ಎಸ್.ಸಿ., ಖಜಾಂಚಿ ಜಿ. ವಿಜಯ್ ಕುಮಾರ್, ಪ್ರಾಂಶುಪಾಲ ಸೂರ್ಯನಾರಾಯಣ್ ಆರ್., ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.