Goodluck Care Center ವಿದ್ಯೆಯ ಜತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಸಂಸ್ಕಾರ ಮನೋಭಾವ ಬೆಳೆಸಬೇಕು ಎಂದು ರೋಟರಿ ವಲಯ 10ರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್ ಹೇಳಿದರು.
ಗುಡ್‌ಲಕ್ ಆರೈಕೆ ಕೇಂದ್ರದ ಭೇಟಿ ನೀಡಿದ ಜ್ಞಾನದೀಪ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯೆಯು ನಮಗೆ ವೃತ್ತಿ ನೀಡುತ್ತದೆ. ಸಂಸ್ಕಾರ ಮನೋಭಾವ ನಮ್ಮಲ್ಲಿ ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಒದಗಿಸುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರ ತುಂಬಾ ಅಗತ್ಯ ಎಂದು ತಿಳಿಸಿದರು.
ಮಕ್ಕಳು ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಭೇಟಿ ಮಾಡಿ ಅಲ್ಲಿರುವ ನಿವಾಸಿಗಳನ್ನು ಸಂತೈಸಿ ಅವರಿಗೆ ಹಣ್ಣು ಹಾಗೂ ಅಗತ್ಯ ಸಾಮಾಗ್ರಿಗಳನ್ನು ನೀಡಿ ಅವರೊಂದಿಗೆ ಕಾಲ ಕಳೆದರು. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಸಮಾಜದ ಪರಿಸ್ಥಿತಿ ಅರಿವಾಗುತ್ತದೆ. ಮಕ್ಕಳಿಗೆ ಸಮಾಜಮುಖಿ ಸೇವೆ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡುವುದರ ಮುಖಾಂತರ ಮಾನವೀಯತೆ ಮೆರೆಯಬೇಕು ಎಂದರು.
Goodluck Care Center ಮನುಕುಲದ ಸೇವೆಯಲ್ಲಿ ಗುಡ್ ಲಕ್ ಆರೈಕೆ ಕೇಂದ್ರ ತನ್ನದೇ ಆದ ಚಾಪನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ಜ್ಞಾನದೀಪ ಶಾಲೆಯಿಂದ 200 ವಿದ್ಯಾರ್ಥಿಗಳು ಕೇಂದ್ರಕ್ಕೆ ಆಗಮಿಸಿ ಆಶ್ರಮ ವಾಸಿಗಳೊಂದಿಗೆ ಕಾಲ ಕಳೆದು ಸಂತೈಸಿದರು. ಆರೈಕೆ ಕೇಂದ್ರಕ್ಕೆ ದೇಣಿಗೆ ನೀಡಿ ಗೌರವಿಸಿದರು.
ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ಮಾತನಾಡಿ, ಮಕ್ಕಳು ಇಂತಹ ಅನಾಥಾಶ್ರಮಗಳಿಗೆ ಭೇಟಿ ನೀಡಿದಾಗ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಉಂಟಾಗುತ್ತದೆ. ನಾವು ನಮ್ಮ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತಿಳಿಯುತ್ತದೆ ಎಂದರು.
ರೋಟರಿ ರಿವರ್ ಸೈಡ್ ಮಾಜಿ ಅಧ್ಯಕ್ಷ ಕೆ.ಪಿ.ಶೆಟ್ಟಿ ಆಶ್ರಮವಾಸಿಗಳನ್ನು ಸಂತೈಸಿದರು. ವಿ.ಎನ್.ಭಟ್, ಶಿವಪ್ಪ ಗೌಡ, ಜ್ಞಾನದೀಪ ವಿದ್ಯಾಸಂಸ್ಥೆಯ 200 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.