Shirur landslide ಜುಲೈನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥವಾಗಿದ್ದ ನಾಯಿಗಳನ್ನು ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸರು ದತ್ತು ತೆಗೆದುಕೊಂಡಿದ್ದಾರೆ.
ಗುಡ್ಡ ಕುಸಿತದಲ್ಲಿ ಹೋಟೆಲ್ ಮಾಲೀಕರಾದ ಲಕ್ಷ್ಮಣ್ ನಾಯ್ಕ್, ಅವರ ಪತ್ನಿ ಶಾಂತಿ, ಪುತ್ರಿ ಆವಂತಿಕಾ ಮತ್ತು ಪುತ್ರ ಸೌರಭ್ ಸಜೀವ ಸಮಾಧಿಯಾಗಿದ್ದರು.
ದುರಂತದಿಂದ ಪವಾಡ ರೀತಿಯಲ್ಲಿ ಬದುಕುಳಿದ ಎರಡು ನಾಯಿಗಳು ಭಾರೀ ಮಳೆ ನಡುವೆ ಅವಶೇಷಗಳ ಮೇಲೆ ನಿಂತು ತನ್ನ ಪಾಲಕರಿಗಾಗಿ ಹುಡುಕಾಡುವ ದಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಎಸ್ಪಿ ನಾರಾಯಣ್ ಅವರು ಅವುಗಳನ್ನು ದತ್ತು ಪಡೆಯುವ ಮೂಲಕ ಆಸರೆಯಾಗಿದ್ದಾರೆ.
Shirur landslide ಕುರಿತು ಮಾಹಿತಿ ಹಂಚಿಕೊಂಡಿರುವ ಎಸ್ಪಿ ನಾರಾಯಣ್, “ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಮತ್ತಿತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ನಾಯಿಗಳ ಪಾಲಕರು ಸಾವನ್ನಪ್ಪಿರುವುದು ತಿಳಿಯಿತು. ನಾಯಿಗಳನ್ನು ಲಕ್ಷ್ಮಣ್ ನಾಯ್ಕ್ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.
ನಾಯಿಗಳು ಹೋಟೆಲ್ ಬಿಟ್ಟು ಎಲ್ಲಿಯೂ ಬೇರೆ ಕಡೆಗೆ ಹೋಗದಿರುವ ಬಗ್ಗೆ ಅವರ ಸಂಬಂಧಿ ಪುರುಷೋತ್ತಮ್ ನಾಯ್ಕ್ ತಿಳಿಸಿದರು. ಮನೆಯವರ ಅಂತ್ಯ ಸಂಸ್ಕಾರ ಮಾಡಿದ ನಂತರವೂ ನಾಯಿಗಳು ಅಲ್ಲಿಂದ ಬೇರೆ ಕಡೆಗೆ ತೆರಳಿರಲಿಲ್ಲ. ಮತ್ತೆ ಕಾರ್ಯಾಚರಣೆಗೆ ಬಂದಾಗಲೂ ಅವುಗಳನ್ನು ಹೋಟೆಲ್ ಬಳಿ ಮಲಗಿದ್ದವು. ಅವುಗಳ ನಿಯತ್ತು ನನ್ನ ಮನಸ್ಸಿಗೆ ತಾಟಿತ್ತು. ಹೀಗಾಗಿ ದತ್ತು ಪಡೆಯಲು ನಿರ್ಧರಿಸಿದ್ದಾಗಿ ತಿಳಿಸಿದರು.