CM Siddharamaih ಧರ್ಮ-ಜಾತಿ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು.
ಗಾಂಧಿ ಸ್ಮಾರಕ ನಿಧಿಯ 75 ನೇ ವರ್ಷದ ಸಂಸ್ಮರಣೆಗಾಗಿ ಗಾಂಧಿ ಭವನದಲ್ಲಿ ಇಂದು ಆಯೋಜಿಸಲಾಗಿದ್ದ “21ನೇ ಶತಮಾನಕ್ಕೆ ಮಹಾತ್ಮಗಾಂಧೀಜಿ” ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು. ಈ ಕಾರಣಕ್ಕೆ ಅಸಮಾನತೆ ಹೆಚ್ಚಾಯ್ತು. ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ. ಜಾತಿ ಅಸಮಾನತೆಯ ಪೋಷಕರೇ ಮಹಾತ್ಮಗಾಂಧಿಯವರನ್ನು ಕೊಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧೀಜಿ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು 20ನೇ ಶತಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ. ಗಾಂಧೀಜಿಯವರು ಶಾಂತಿ, ಸತ್ಯ, ನ್ಯಾಯ ಮತ್ತು ಬ್ರಾತೃತ್ವವನ್ನು ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದಿದ್ದಾರೆ. ಇಡೀ ವಿಶ್ವವೇ ಪರಸ್ಪರ ಪ್ರೀತಿಸುವ ಗುಣವನ್ನು ರೂಢಿಸಿಕೊಂಡರೆ ಇಡೀ ಸಮಾಜ ನೆಮ್ಮದಿಯಿಂದ ಇರಬಹುದು ಎಂದರು.
ಮನುಷ್ಯ ತನ್ನ ನೆಮ್ಮದಿಗಾಗಿ ಬೇರೆ ಗ್ರಹಗಳನ್ನು ಹುಡುಕಿಕೊಂಡು ಹೋಗುವಂತಾಗಬಾರದು ಎನ್ನುವ ಸ್ಟೀಫನ್ ಹಾಕಿಂಗ್ ಅವರ ಮಾತನ್ನು ಪ್ರಸ್ತಾಪಿಸಿ, ಮನುಷ್ಯ ಮನುಷ್ಯರ ನಡುವೆ ಸಹಿಷ್ಣುತೆ ರೂಢಿಸಿಕೊಳ್ಳದಿದ್ದರೆ ಸರ್ವನಾಶವಾಗುತ್ತದೆ. ಕೋಮು ಭಾವನೆ ಹೀಗೇ ಬೆಳೆದರೆ ಕವೆಂಪು ಅವರ ವಿಶ್ವ ಮಾನವ ಆಶಯ ಈಡೇರುವುದು ಕಷ್ಟವಾಗುತ್ತದೆ ಎಂದರು.
CM Siddharamaih ಪ್ರಕೃತಿ ನಮ್ಮ ಅಗತ್ಯಗಳನ್ನು ಈಡೇರಿಸುತ್ತದೆಯೇ ಹೊರತು, ದುರಾಸೆಗಳನ್ನು ಅದು ಪೂರೈಸುವುದಿಲ್ಲ ಎನ್ನುವುದು ಗಾಂಧಿಯವರ ನಂಬಿಕೆಯಾಗಿತ್ತು. ಕೇರಳದ ವಯನಾಡ್ ಮತ್ತು ರಾಜ್ಯದ ನಾನಾ ಕಡೆ ನಡೆಯುತ್ತಿರುವ ಪರಿಸರ ಅವಘಡಗಳಿಗೆ ಮನುಷ್ಯನ ದುರಾಸೆಗಳೇ ಕಾರಣವಾಗಿದೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಅವರ ಕಾಲಗುಣದಿಂದ ರಾಜ್ಯಕ್ಕೆ ಬರಗಾಲ ಬರುತ್ತದೆ ಎಂದು ಸಾರ್ವಜನಿಕ ವ್ಯಕ್ತಿಗಳೇ ಮೌಡ್ಯ ಬಿತ್ತುವ ಕುಟಿಲ ಪ್ರಯತ್ನ ಮಾಡಿದ್ದರು.
ಆದರೆ ಈಗ ಸಿಕ್ಕಾಪಟ್ಟೆ ಮಳೆ ಬರುತ್ತಿದೆ. ಬಹಳ ಮಂದಿ ಶಿಕ್ಷಿತರೇ ಕಂದಾಚಾರ, ಕರ್ಮ ಸಿದ್ಧಾಂತ, ಮೌಡ್ಯವನ್ನು ಆಚರಿಸುತ್ತಾರೆ. ಇದಕ್ಕೆ ಸರಿಯಾದ ವೈಜ್ಞಾನಿಕ ಶಿಕ್ಷಣದ ಕೊರತೆಯೇ ಕಾರಣ. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ಈಗಿನ ಕೆಲವು ಶಿಕ್ಷಿತರೇ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.