McGann District Hospital ಮೆಗ್ಗಾನ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ತೆರಳಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಎಟಿಎಂ ಕಾರ್ಡ್ ಕಳ್ಳತನ ಮಾಡಿ, ಹಣ ಡ್ರಾ ಮಾಡಿಕೊಳ್ಳಲಾಗಿದೆ. ಈ ಸಂಬಂಧ ತಡವಾಗಿ ಪ್ರಕರಣ ದಾಖಲಾಗಿದೆ.
ಸೊರಬ ತಾಲೂಕು ಬಿಳವಾಣಿಯ ಗೌರಮ್ಮ ಎಂಬುವವರ ಎಟಿಎಂ ಕಳ್ಳತನ ಮಾಡಿ 50 ಸಾವಿರ ರೂ. ಹಣ ಡ್ರಾ ಮಾಡಿಕೊಳ್ಳಲಾಗಿದೆ.
ಅನಾರೋಗ್ಯದ ಹಿನ್ನೆಲೆ ಗೌರಮ್ಮ ತಮ್ಮ ಪತಿಯೊಂದಿಗೆ ಜುಲೈ 25ರಂದು ಮೆಗ್ಗಾನ್ ಆಸ್ಪತ್ರೆ ಚಿಕಿತ್ಸೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಗೆ ಲ್ಯಾಬ್‌ನಲ್ಲಿ ರಕ್ತದ ಪರೀಕ್ಷೆ ಮಾಡಿಸಿಕೊಂಡಿದ್ದರು.
McGann District Hospital ಮಧ್ಯಾಹ್ನ 1.30ರ ಹೊತ್ತಿಗೆ ಗೌರಮ್ಮ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಹಣ ಕಡಿತವಾದ ಮೆಸೇಜ್ ಬಂದಿತ್ತು. ಸ್ವಲ್ಪ ಹೊತ್ತಿಗೆ ಒಟ್ಟು 50 ಸಾವಿರ ರೂ. ಕಡಿತವಾಗಿರುವ ಮೆಸೇಜ್ ಬಂದಿತ್ತು ಎಂದು ಆರೋಪಿಸಲಾಗಿದೆ.
ಕಳ್ಳರಿಗೆ ಪಾಸ್‌ವರ್ಡ್ ಸಿಕ್ಕಿದ್ದು ಹೇಗೆ?:
ಲ್ಯಾಬ್ ಬಳಿ ಸರತಿಯಲ್ಲಿ ನಿಂತಿದ್ದಾಗ ಗೌರಮ್ಮ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಕಾರ್ಡ್ ಕಳವು ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಎಟಿಎಂ ಕಾರ್ಡ್ ಮೇಲೆಯೇ ಪಾಸ್‌ವರ್ಡ್ ಬರೆದಿದ್ದರಿಂದ ಕಳ್ಳರು ಸುಲಭವಾಗಿ ಹಣ ಡ್ರಾ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
