Bombay High Court ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಅವರ ಕುಟುಂಬ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ದಾಭೋಲ್ಕರ್ ಕುಟುಂಬದ ಮೇಲ್ಮನವಿ ಪುರಸ್ಕರಿಸಿದ್ದು, ಆರೋಪಿಗಳಾದ ವೀರೇಂದ್ರಸಿನ್ಹ ತಾವಡೆ, ಸಚಿನ್ ಅಂದುರೆ, ಶರದ್ ಕಲಾಸ್ಕರ್, ವಕೀಲ ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇವರು ಬಲಪಂಥೀಯ ಗುಂಪುಗಳಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಎನ್ನಲಾಗಿದೆ.
Bombay High Court ಪೀಠವು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೂಡ ನೋಟಿಸ್ ಜಾರಿಗೊಳಿಸಿದೆ. ವಕೀಲ ವಿವೇಕ್ ಪಾಟೀಲ್ ಮೂಲಕ ದಾಭೋಲ್ಕರ್ ಕುಟುಂಬ ಮೇಲ್ಮನವಿ ಸಲ್ಲಿಸಿದೆ.
ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ ಸಂಬಂಧ ಮೇ 10, 2024 ರಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಸೆಕ್ಷನ್ 34ರ (ಸಾಮಾನ್ಯ ಉದ್ದೇಶ) ಅಡಿ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ದೋಷಿಗಳೆಂದು ಘೋಷಿಸಿದೆ.