Ayanur Manjunath ಬಿಜೆಪಿ ಅಧ್ಯಕ್ಞ ಬಿ ವೈ ವಿಜಯೇಂದ್ರ ಶಿವಮೊಗ್ಗ ಮತ್ತು ಹಾಸನಕ್ಕೂ ಪಾದಯಾತ್ರೆ ಮಾಡಲಿ ನೋಡೋಣ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸೋಮವಾರ ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬಿಜೆಪಿಯವರು ಮೈಸೂರಿಗೆ ಪಾದಯಾತ್ರೆ ಮಾಡಿದ್ದು ಅಲ್ಲ. ಆದರೆ ಅವರು ಅತಿ ಅವಶ್ಯಕವಾಗಿ ಶಿವಮೊಗ್ಗ ಹಾಗೂ ಹಾಸನಕ್ಕೆ ಪಾದಯಾತ್ರೆ ಮಾಡಬೇಕಾಗಿದೆ.
ಹಾಸನದಲ್ಲಿ ಕೇವಲ ಮಹಿಳೆಯರ ಮೇಲಷ್ಟೇ ಅಲ್ಲ, ಪುರುಷರ ಮೇಲೂ ಅತ್ಯಾಚಾರ ನಡೆದಿದೆ. ಇಬ್ಬರನ್ನೂ ರಕ್ಷಣೆ ಮಾಡಬೇಕಾಗಿದೆ. ಅಲ್ಲಿಗೆ ಪಾದಯಾತ್ರೆ ಮಾಡಲಿ ಎಂದರು.
ಶಿವಮೊಗ್ಗಕ್ಕೂ ಪಾದಯಾತ್ರೆ ಮಾಡಲಿ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಭ್ರಷ್ಟಾಚಾರಗಳು ಸಾಕಷ್ಟಿವೆ. ಚೋಟಾ ಸಹಿ ಮಾಡಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ ಇತಿಹಾಸವಿದೆ. ಇಲ್ಲಿಗೂ ಪಾದಯಾತ್ರೆ ಮಾಡಲಿ. ಅವರ ಕುಟುಂಬದ ಆಸ್ತಿಯ ಬಗ್ಗೆ ತನಿಖೆಗೆ ಆಗ್ರಹಿಸಲಿ ಎಂದರು.
Ayanur Manjunath ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ. ಇದರಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕೈವಾಡವಿದೆ. ಬಹುಮತ ಪಡೆದ ಸರ್ಕಾರವನ್ನು ಬೀಳಿಸಿದ ದುರುದ್ದೇಶವಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಾಮಾಣಿಕರಾಗಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರವನ್ನು ನೈತಿಕವಾಗಿ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಾಮಾನ್ಯ ಕಾರ್ಯಕರ್ತನೊಬ್ಬ ದೂರು ನೀಡಿದ್ದಕ್ಕೆ ರಾಜ್ಯಪಾಲರು ಈ ರೀತಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಸಿದ್ಧರಾಮಯ್ಯ ಪರ 136 ಶಾಸಕರು ಕೂಡ ಇದ್ದೇವೆ. ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಏನೂ ಆಗುವುದಿಲ್ಲ. ಯಡಿಯೂರಪ್ಪ ಸೇರಿದಂತೆ ಅವರ ಮಕ್ಕಳು ಕೂಡ ಭ್ರಷ್ಟರಾಗಿದ್ದಾರೆ ಎಂದರು.
ಎಸ್.ಸಿ., ಎಸ್.ಟಿ. ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಮಾತನಾಡಿ, ಇದು ಬಿಜೆಪಿಯವರ ಹುನ್ನಾರವಾಗಿದೆ. ಯಾರು ಏನು ಮಾಡಿದರೂ ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬೆನ್ನಹಿಂದೆ ನಾವೆಲ್ಲರೂ ಇದ್ದೇವೆ ಎಂದರು.