Friday, November 22, 2024
Friday, November 22, 2024

Independence Day ಶರಾವತಿ ಸಂತ್ರಸ್ತರ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಶಾಶ್ವತ ಕಾರ್ಯಪಡೆ ರಚನೆಗೆ ಕ್ರಮ- ಮಧು ಬಂಗಾರಪ್ಪ

Date:

Independence Day ನಮ್ಮ ಭಾರತ ದೇಶವನ್ನು ವಿದೇಶಿಯರಿಂದ ಮುಕ್ತಿಗೊಳಿಸುವಲ್ಲಿ ನಾಡಿನ ಲಕ್ಷಾಂತರ ಭಾರತೀಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ನಮ್ಮ ಜಿಲ್ಲೆಯ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು.

ಆ ಎಲ್ಲಾ ಸ್ವಾತಂತ್ರ್ಯ ವೀರರಿಗೆ ಅನಂತ ನಮನಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ ನಗರದ ಡಿ.ಎ.ಆರ್ ಮೈದಾನದಲ್ಲಿ ಆಯೋಜಿಸಿದ್ದ 78 ನೇ ಸ್ವತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಶ್‌ಚಂದ್ರ ಬೋಸ್, ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಈ ನೆಲದ ಅನೇಕ ಹೋರಾಟಗಾರರ ಪರಿಶ್ರಮದ ಫಲ ಇಂದಿನ ಸ್ವಾತಂತ್ರ್ಯ ದಿನಾಚರಣೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಐವರು ವೀರಸೇನಾನಿಗಳು ನೇಣಿಗೆ ಶರಣಾಗಿ ಹುತಾತ್ಮರಾಗಿದ್ದು ನಿಜಕ್ಕೂ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಜಿಲ್ಲೆ ಅನೇಕ ಹೋರಾಟಗಾರರಿಗೆ ಜನ್ಮ ನೀಡಿದೆ. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಪೂಜ್ಯ ತಂದೆಯವರಾದ ಶ್ರೀ ಎಸ್.ಬಂಗಾರಪ್ಪನವರು ಸೇರಿದಂತೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ನೀಡಿದ್ದು, ಅನೇಕ ಕ್ಷೇತ್ರಗಳಲ್ಲಿನ ಅಸಂಖ್ಯಾತ ಪ್ರತಿಭಾವಂತರು, ಪ್ರಸಿದ್ದರು, ಉದಯಿಸಿದ ಪುಣ್ಯಭೂಮಿ ಶಿವಮೊಗ್ಗ ಜಿಲ್ಲೆ ಎಂದರು.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಭಾರೀ ಮಳೆಯಿಂದಾಗಿ ಜನ-ಜಾನುವಾರುಗಳು, ಮನೆಗಳು ಹಾನಿಗೊಳಗಾಗಿವೆ. ಹಾನಿಗೊಳಗಾಗಿರುವ ಮನೆಗಳ ಮಾಲೀಕರಿಗೆ ತಕ್ಷಣದ ಪರಿಹಾರ ಕ್ರಮವಾಗಿ ಅಗತ್ಯ ನೆರವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಹಾನಿಗೊಳಗಾದ 294 ಶಾಲೆಗಳು, ಅಂಗನವಾಡಿಗಳು, ಇತರೆ ಕಟ್ಟಡಗಳು, ರಸ್ತೆ, ಸೇತುವೆಗಳ ದುರಸ್ತಿಗೂ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 41 ಕೆ.ಪಿ.ಎಸ್ ಶಾಲೆಗಳನ್ನು ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅಲ್ಲದೇ 2023-24ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ಗಳನ್ನು ಪೂರೈಸಲಾಗಿದೆ. ಈಗಾಗಲೇ 12000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 2015 ರಿಂದ 2020 ನೇ ಸಾಲಿನ ವರೆಗೆ ಅನುದಾನಿತ ಶಾಲಾ ಕಾಲೇಜುಗಳಲ್ಲಿ 5 ಸಾವಿರ ಶಿಕ್ಷರ ನೇಮಕಾತಿ ಅನುಮತಿ ನೀಡಲಾಗಿದೆ. ಖಾಲಿ ಇರುವ 10 ಸಾವಿರ ಖಾಯಂ ಶಿಕ್ಷರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ.

ಮಕ್ಕಳಲ್ಲಿನ ಪೌಷ್ಠಿಕತೆಯನ್ನು ಹೆಚ್ಚಿಸಲು ವಾರದ ಮೂರು ದಿನ ಹಾಲಿನೊಂದಿಗೆ ರಾಗಿಮಾಲ್ಟ್ ಹಾಗೂ ಒಂದರಿಂದ ಹತ್ತನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಪ್ರತಿದಿನ ಬಿಸಿಯೂಟ, ಮೊಟ್ಟೆ, ಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಲಾಗುತ್ತಿದೆ. ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಹಯೋಗದೊಂದಿಗೆ ಮುಂದಿನ 3 ವರ್ಷಗಳ ಅವಧಿಗೆ ವಾರದ 6 ದಿನಗಳು ಮೊಟ್ಟೆ ವಿತರಿಸುವ ಯೋಜನೆ ಪ್ರಾರಂಭಿಸಲಾಗಿದೆ. 10 ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಸರಿಯದಂತೆ ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಕವಾಗುವಂತೆ ಮೂರು ಹಂತದಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಮೂಡಿದೆ ಎಂದರು.

Independence Day ಶರಾವತಿ ಹಾಗೂ ಇತರೆ ಯೋಜನೆಗಳ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಜಿಲ್ಲೆ ಮತ್ತು ಸರ್ಕಾರದ ಹಂತದಲ್ಲಿ ಸಭೆಗಳನ್ನು ನಡೆಸಲಾಗಿದೆ. ಸಂತ್ರಸ್ಥರ ಪರವಾಗಿ ಸುಪ್ರಿಂಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ಈಗಾಗಲೇ ನೇಮಿಸಲಾಗಿದೆ. ವಿಧಾನ ಸಭೆಯಲ್ಲಿ ಐತಿಹಾಸಿಕ ನಿರ್ಣಯವನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂತ್ರಸ್ಥರ ಪರಿಹಾರಕ್ಕಾಗಿ ಶಾಶ್ವತ ಕಾರ್ಯಪಡೆ ರಚಿಸಲು ಕ್ರಮ ವಹಿಸಲಾಗಿದೆ.

ಹಲವು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಮನೆಕಟ್ಟಿಕೊಂಡಿರುವ ವನವಾಸಿಗಳನ್ನು ಒಕ್ಕಲೆಬ್ಬಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ ನಗರದ ಹೊರವಲಯ ಸೋಗಾನೆಯಲ್ಲಿ ಸುಮಾರು 98 ಎಕರೆ ಪ್ರದೇಶದಲ್ಲಿ ಫುಡ್‌ಪಾರ್ಕ್ (Food Park) ಆರಂಭಿಸಲು ಕ್ರಮ ವಹಿಸಲಾಗಿದೆ. ಚಂದ್ರಗುತ್ತಿಯನ್ನು ಆಧುನಿಕ ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದರು.

ಶರಾವತಿ ನದಿಯಿಂದ ಸೊರಬ, ಆನವಟ್ಟಿ ಮತ್ತು ಶಿರಾಳಕೊಪ್ಪ ಪಟ್ಟಣಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಶಾಶ್ವತ ಶುದ್ದಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.

ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ನಗರದಲ್ಲಿ ಕಿದ್ವಾಯಿ ಮಾದರಿಯ ಕ್ಯಾನ್ಸ‌ರ್ (Cancer) ಆಸ್ಪತ್ರೆ ಕಟ್ಟಡ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಶಿವಮೊಗ್ಗದಲ್ಲಿ ನವಜಾತ ಶಿಶುಗಳ ಆರೈಕೆಗಾಗಿ ಮಾನವ ಎದೆಹಾಲು ಸಂಸ್ಕರಣೆ ಹಾಗೂ ವಿತರಣಾ ಕೇಂದ್ರವನ್ನು ಈಗಾಗಲೇ ಆರಂಭಿಸಲಾಗಿದೆ. ಮೆಗಾನ್ ಆಸ್ಪತ್ರೆಯಲ್ಲಿ ಮೆದುಳು ರೋಗಗಳ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರತ್ಯೇಕ ಘಟಕ ಜನವರಿಯಿಂದ ಕಾರ್ಯ ಆರಂಭಗೊಂಡಿದೆ ಎಂದರು.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಆಯುಷ್ಮಾನ್ ಯೋಜನೆಯಡಿ ಸರ್ಕಾರ ವೆಚ್ಚ ಮಾಡುತ್ತಿದ್ದ 8 ಕೋಟಿ ರೂ.ಗಳನ್ನು 20 ಕೋಟಿ ರೂ.ಗಳಿಗೆ
ಹೆಚ್ಚಿಸಲಾಗಿದೆ.

ರಾಜ್ಯದ ಜನರ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಜಿವನ ಮಟ್ಟ ಸುಧಾರಿಸಲು, ಯುವಜನರ ಹಲವು ಕನಸುಗಳಿಗೆ ಶಕ್ತಿ ತುಂಬಲು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಮಹಿಳಾ ಫಲಾನುಭವಿಗಳು ಸೇರಿದಂತೆ ರಾಜ್ಯದ ಬಹುಪಾಲು ಜನರು ಸದರಿ ಯೋಜನೆಗಳ ಸಂಗತಿಯಾಗಿದೆ. ಲಾಭವನ್ನು ಪಡೆದುಕೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ.

ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ.ಅಕ್ಕಿ ಪಡೆಯುವ ಕುಟುಂಬಗಳ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆ.ಜಿ. ಉಚಿತ ಅಕ್ಕಿಯನ್ನು ನೀಡುವ ಕಾರ್ಯಕ್ರಮ ರಾಜ್ಯದಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 05 ಕೆ.ಜಿ. ಅಕ್ಕಿಗೆ ಬದಲಾಗಿ ಫಲಾನುಭವಿಯ ಖಾತೆಗೆ ನೇರವಾಗಿ ರೂ.170 ಗಳನ್ನು ಜಮಾ ಮಾಡುತ್ತಿದೆ.

ಸರ್ಕಾರ ರಚನೆಯ ಅಲ್ಪ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಲಾಗಿದೆ. ಈ ಅವಧಿಯಲ್ಲಿ ಕ್ರಮಿಸಿದ ದೂರ ಕಡಿಮೆಯಾಗಿದ್ದರೂ ಸಾಧಿಸಿದ ಸಾಧನೆ ದೇಶಕ್ಕೆ ಮಾದರಿಯಾಗಿದೆ.

ರಾಜ್ಯದಲ್ಲಿ ಅನುಷ್ಠಾನಗೊಂಡ ಈ ಎಲ್ಲಾ ಯೋಜನೆಗಳು ದೇಶದಲ್ಲಿಯೇ ಮಾದರಿ ಯೋಜನೆಗಳಾಗಿ ಗುರುತಿಸಲಾಗುತ್ತಿರುವುದು ವಿಶೇಷವೆನಿಸಿದೆ.

ಒಟ್ಟಾರೆಯಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ 30 ರಿಂದ 50 ಸಾವಿರದ ವರೆಗೆ ಆರ್ಥಿಕ ನೆರವು ಲಭಿಸುತ್ತಿದೆ. ಒಂದು ಗ್ರಾಮ ಪಂಚಾಯಿತಿಗೆ ವಾರ್ಷಿಕವಾಗಿ ಸುಮಾರು 09 ಕೋಟಿ ರೂ.ಗಳ ಹಣಕಾಸು ಮತ್ತಿತರ ಸೌಲಭ್ಯವು ಯಾವುದೇ ಮಧ್ಯವರ್ತಿಗಳಿಲ್ಲದೆ ತಲುಪಿಸುತ್ತಿರುವುದು ನಾಡಿನ ಜನ ಹೆಮ್ಮೆ ಪಡುವ ಸಂಗತಿಯಾಗಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ವಿಕಾಸಕ್ಕೆ ಇನ್ನೂ ಹೆಚ್ಚಿನ ಗಮನಹರಿಸಲಾಗುವುದು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ವೀರಸೇನಾನಿಗಳ ಆಶಯದಂತೆ ಸಾಮಾಜಿಕವಾಗಿ ಹಿಂದುಳಿದ ಹಾಗೂ ಕೆಳ ವರ್ಗಗಳೂ ಸೇರಿದಂತೆ ಎಲ್ಲಾ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು ಸೇರಿದಂತೆ ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವ, ದೇಶ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮೆಲ್ಲರ ಸಲಹೆ-ಸಹಕಾರ ಪಡೆದು ಮುಂದೆ ಸಾಗುವ ಆಶಯ ಹೊಂದಿದ್ದೇನೆ ಎಂದರು.
ವಿವಿಧ ತುಕಡಿಗಳು ಆಕರ್ಷಕ ಪಥಸಂಚನದಲ್ಲಿ ಸಾಗಿದರು. ಸಾಮೂಹಿಕ ವ್ಯಾಯಾಮ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಪಥಸಂಚಲನದಲ್ಲಿ ಪ್ರಥಮ ಸ್ಥಾನ ಮೊರಾರ್ಜಿ ವಸತಿ ಶಾಲೆ, ದ್ವಿತೀಯ ಸ್ಥಾನ ಭಾರತ್ ಸ್ಕೌಟ್ಸ್ ಬಾಲಕರ ಶಾಲೆ ಹಾಗೂ ತೃತೀಯ ಸ್ಥಾನವನ್ನು ಜ್ಞಾನದೀಪ ಶಾಲೆ ವಿದ್ಯಾರ್ಥಿಗಳು ಪಡೆದುಕೊಂಡರು.
ಉತ್ತಮ ಸೇವೆ ಸಲ್ಲಿಸಿದ ೫ ಜನ ಅಧಿಕಾರಿ/ಸಿಬ್ಬಂದಿಗಳು, ಅಲ್ಪಸಂಖ್ಯಾತ ಇಲಾಖೆಯ ಅಡಿ ಬರುವ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಅಂಗಾಂಗ ದಾನ ಮಾಡಿದ ದಿ.ಉಲ್ಲಾಸ್ , ದಿ.ಲಲಿತಮ್ಮ ಕುಟುಂಬ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರರಾಘವೇಂದ್ರ, ಶಾಸರಾದ ಚನ್ನಬಸಪ್ಪ, ಆರಗ ಜ್ಣಾನೇಂದ್ರ, ಶಾರದಾ ಪೂರ್ಯಾನಾಯ್ಕ, ಬಲ್ಕೀಶ್ ಬಾನು, ಧನಂಜಯ ಸರ್ಜಿ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ,
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿ.ಪಂ. ಸಿಇಓ ಎನ್.ಹೇಮಂತ್,ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕ ರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...