Rotary Club Shivamogga ಕಣ್ಣುಗಳು ಮನುಷ್ಯನ ದೇಹದ ಪ್ರಮುಖ ಅಂಗವಾಗಿದೆ. ಕಣ್ಣುಗಳು ಕಾಣದಿದ್ದರೆ ಪ್ರಪಂಚವೇ ಶೂನ್ಯವಾಗಿರುತ್ತದೆ. ಹಾಗೆ ಕಣ್ಣಿಗೆ ಹಲವಾರು ಸಮಸ್ಯೆಗಳು ಇರುತ್ತವೆ ಸಕಾಲದಲ್ಲಿ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕು. ಆರು ತಿಂಗಳಿಗೊಮ್ಮೆಯಾದರೂ ಸಹ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಿ ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಗ್ಲುಕೋಮ ತಜ್ಞ ವೈದ್ಯೆ ಡಾ. ಕಮಲ ಅಭಿಮತ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ರಾಜೇಂದ್ರ ನಗರ ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ಸದಸ್ಯರು ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಣ್ಣಿನ ಜಾಗೃತಿ ಹಾಗೂ ಗ್ಲೋಕೋಮಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ದಿನವಿಡೀ ಕಂಪ್ಯೂಟರ್ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳನ್ನು ಬಳಸುವುದರಿಂದ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಆರಂಭದಲ್ಲಿ ಗ್ಲುಕೋಮ ಯಾವುದೇ ತರಹದ ರೋಗಲಕ್ಷಣಗಳನ್ನು ತೋರುವುದಿಲ್ಲ. ಸದ್ದಿಲ್ಲದೆ ತನ್ನ ಪಾಡಿಗೆ ತಾನು ಬೆಳವಣಿಗೆ ಆಗುತ್ತದೆ. ವಯಸ್ಸಾದಂತೆ ಕಣ್ಣಿನೊಳಗೆ ಹೆಚ್ಚಿನ ಒತ್ತಡವು ಆಪ್ಟಿಕ್ ನರದ ಅಂಗಾಂಶಕ್ಕೆ ಹಾನಿ ಮಾಡುತ್ತದೆ. ಇದರಿಂದ ದೃಷ್ಟಿ ದುರ್ಬಲವಾಗುತ್ತದೆ, ಹಾಗೆಯೇ ಕುರುಡುತನ ಉಂಟಾಗುತ್ತದೆ. ಇದರಿಂದ ನಾವು ದೂರವಿರಬೇಕಾದರೆ ಆಗಾಗ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಇದಕ್ಕಿರುವ ಒಂದೇ ಉತ್ತಮ ಮಾರ್ಗ ಎಂದರು.
ಗ್ಲುಕೋಮ ಎಂಬುದು ಒಂದು ರೀತಿಯ ಕಣ್ಣಿನ ಕಾಯಿಲೆಯಾಗಿದ್ದು, ಈ ಸ್ಥಿತಿಯಲ್ಲಿ ಕಣ್ಣಿನ ದೃಷ್ಟಿ ನರ ನಿಧಾನವಾಗಿ ಘಾಸಿಗೊಳ್ಳುತ್ತಾ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಒಳಭಾಗದ ಒತ್ತಡ, ವಾಸ್ತವದಲ್ಲಿ ಕಣ್ಣುಗುಡ್ಡೆಯ ಪಾತ್ರವೇನಿದ್ದರೂ ಇದರಿಂದ ಬಿಂಬವನ್ನು ಕಣ್ಣು ಗುಡ್ಡೆಯ ಒಳಬದಿಯ ಹಿಂಭಾಗದಲ್ಲಿ ಬೀಳುವಂತೆ ಮಾಡುವುದು. ಹಾಗಾಗಿ ಸದ್ದಿಲ್ಲದೆ ನಮ್ಮ ಕಣ್ಣನ್ನು ಕಿತ್ತುಕೊಳ್ಳುವ ಗ್ಲುಕೋಮ ಕಾಯಿಲೆ ಬಗ್ಗೆ ನಾವು ಸದಾ ಜಾಗೃತರಾಗಿರಬೇಕು. 40 ವರ್ಷದ ನಂತರ ಪ್ರತಿಯೊಬ್ಬರೂ ಸಹ ಆಗಾಗ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ಉತ್ತಮ ಆರೋಗ್ಯವಂತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಗ್ಲುಕೋಮ ಕಾಯಿಲೆ ಹೆಚ್ಚುತ್ತಿದ್ದು ಮಧುಮೇಹ ಹಾಗೂ ಅಧಿಕ ರಕ್ತದ ಒತ್ತಡ ಇವೆಲ್ಲವೂ ಕಾರಣವಾಗುತ್ತದೆ ಎಂದು ಹೇಳಿದರು.
Rotary Club Shivamogga ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಇನ್ನರ್ ವೀಲ್ ಪೂರ್ವ ಕ್ಲಬ್ ನ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಮಾತನಾಡಿ, ಮಹಿಳೆಯರು ತಮ್ಮ ಮನೆ ಕೆಲಸದ ಜೊತೆಗೆ ಒತ್ತಡವನ್ನು ನಿರ್ಣಯಿಸುವಲ್ಲಿ ಜಾಗೃತರಾಗಬೇಕು. ಜೊತೆಗೆ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಹರಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ನಮ್ಮ ಇನ್ನರ್ ವೀಲ್ ಕ್ಲಬ್ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಸಾಕಷ್ಟು ಹಮ್ಮಿಕೊಳ್ಳುತ್ತ ಬಂದಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ನ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಕಾರ್ಯದರ್ಶಿ ಸೋಮಣ್ಣ, ವೀಣಾಹರ್ಷ, ಜಯಂತಿ ವಾಲಿ,
ಜ್ಯೋತಿ ಸೊಬ್ಬೆಗೌಡ, ವೇದಾ ನಾಗರಾಜ್, ರಾಜೇಶ್ವರಿ ಪ್ರತಾಪ್, ವಿಜಯ ರಾಯ್ಕರ್ ವಾಣಿ, ಪ್ರವೀಣ್, ಶ್ವೇತಾ ಅಶಿತ್, ಪೂರ್ಣಿಮಾ ನರೇಂದ್ರ, ನಮಿತಾ ಸೂರ್ಯ ನಾರಾಯಣ್, ಮಧುರ ಮಹೇಶ್, ಆಶಾ ಶ್ರೀಕಾಂತ್ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.