Department of Women and Child Development ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ ಬಳಿಕ ವಾಪಸ್ ಕಸಿದುಕೊಂಡ ಆರೋಪದ ಮೇಲೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರ 2ರ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಸೇವೆಯಿಂದ (ಗೌರವಧನದ ಸೇವೆ) ಅಮಾನತು ಮಾಡಲಾಗಿದೆ.
ಮಧ್ಯಾಹ್ನ ಊಟಕ್ಕೆ ಕುಳಿತಿದ್ದ ಮಕ್ಕಳ ತಟ್ಟೆಗೆ ಅಂಗನವಾಡಿ ಸಹಾಯಕಿ ಮೊದಲು ಮೊಟ್ಟೆ ಹಾಕಿದ್ದರು. ಮಕ್ಕಳು ಅದನ್ನು ತಿನ್ನಬೇಕು ಎನ್ನುವಷ್ಟರಲ್ಲಿ ವಾಪಸ್ ಕಸಿದುಕೊಂಡಿದ್ದರು. ಈ ಕುರಿತು ಕನ್ನಡ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು.
Department of Women and Child Development ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಗಮನಿಸಿದ ಸಾರ್ವಜನಿಕರು ತಪ್ಪಿತಸ್ಥ ಅಂಗನವಾಡಿ ಸಿಬ್ಬಂದಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು.
ಈ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರು ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಜೆ ಮತ್ತು ಸಹಾಯಕಿ ಶೈನಜಾ ಬೇಗಂ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
‘ಗುಂಡೂರು-2ನೇ ಅಂಗನವಾಡಿ ಕೇಂದ್ರಕ್ಕೆ ಪೂರೈಕೆಯಾಗಿರುವ ಮೊಟ್ಟೆಗಳನ್ನು ಫಲಾನುಭವಿಗಳಿಗೆ ವಿತರಿಸದೆ, ಅವರು ಸೇವಿಸುವ ಸಮಯದಲ್ಲಿ ವಾಪಸ್ ಪಡೆದು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.