District Court Shivamogga ಗಾಂಜಾ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಇಲ್ಲಿನ ಟಿಪ್ಪುನಗರ ನಿವಾಸಿ ಇರ್ಫಾನ್ ಅಲಿಯಾಸ್ ಟ್ವಿಸ್ಟ್ ಇರ್ಫಾನ್ ನನ್ನು ಕೊಲೆ ಮಾಡಿದ ಎಂಟು ಆರೋಪಿಗಳಿಗೆ ಶಿವಮೊಗ್ಗ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶುಕ್ರವರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಧೀಶೆ ಪಲ್ಲವಿ ಎಂಟು ಆರೋಪಿಗಳಿಗೆ ೧೪ ವರ್ಷ ಜೀವಾವಧಿ ಶಿಕ್ಷೆ ಪ್ರತಿ ಆಪರಾಧಿಗಳಿಗೂ ತಲಾ ಐದು ಸಾವಿರ ದಂಢ ವಿಧಿಸಿದ್ದಾರೆ. ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸರ್ಕಾರಿ ಅಭಿಯೋಜಕಿ ಪುಷ್ಪಾ ವಾದ ಮಂಡಿಸಿದ್ದರು.
ಪ್ರಕರಣದ ವಿವರ
೨ಂ೨೧ ರ ಸೆ. ೧೮ರಂದು ಇರ್ಫಾನ್ ತನ್ನ ಸ್ನೇಹಿತ ಅಸಾದ್ ಮತ್ತು ವಾಷರ್ ಜೊತೆ ಸಂಜೆ ಬೈಕ್‌ನಲ್ಲಿ ಬರುವಾಗ ಟಿಪ್ಪು ನಗರ ಏಳನೇ ಮುಖ್ಯ ರಸ್ತೆಯ ನಾಲ್ಕನೇ ಕ್ರಾಸ್ ನಲ್ಲಿ ಇರ್ಫಾನ್‌ಗೆ ಲತೀಫ್ ಮತ್ತವನ ಸಹಚರರ ತಂಡ ಎದುರಾಗಿ ಗಾಂಜಾ ವಿಚಾರದಲ್ಲಿ ಕ್ಯಾತೆ ತೆಗೆದಿತ್ತು. ಲತೀಫ್, ಪರ್ವೇಜ್, ಸೈಯ್ಯದ್ ಜಿಲಾನ್, ಜಾಫರ್ ಸಾದಿಕ್, ಸೈಯ್ಯದ್ ರಾಜೀಕ್, ಮೊಹಮ್ಮದ್ ಶಹಬಾಜ್, ಸಾಬಿರ್ ಮತ್ತು ಮೊಹಮ್ಮದ್ ಯೂಸೂಫ್ ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ಇರ್ಫಾನ್‌ನ ಎದೆಗೆ ಚುಚ್ಚಿ ಕೊಲೆ ಅಲ್ಲಿಯೇ ಮಾಡಿತ್ತು.
ರಕ್ತದ ಮಡುವಿನಲ್ಲಿದ್ದ ಇರ್ಫಾನ್‌ನನ್ನು ಸ್ನೇಹಿತ ಅಸಾದ್ ಮತ್ತು ವಾಷರ್ ಅಂಬುಲೆನ್ಸ್‌ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಆಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಅಂದಿನ ತನಿಖಾಧಿಕಾರಿ, ಇನ್‌ಸ್ಪೆಕ್ಟರ್ ದೀಪಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳಿಗೆ ಯಾವ ಹಂತದಲ್ಲೂ ಜಾಮೀನು ಸಿಗದಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
District Court Shivamogga ಆರೋಪಿಗಳಿಗೆ ಜಾಮೀನು ನೀಡಿದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಹಾಗು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಗಳು ಹೆಚ್ಚಿದೆ. ಜಾಮೀನು ನೀಡಿದರೆ ಮೃತನ ಕುಟುಂಬದ ಕಡೆಯವರು ಹಾಗು ಇವರ ನಡುವೆ ಗಲಾಟೆಗಳಾಗಿ ಆಸ್ತಿ ಜೀವ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಲತೀಫ್,ಪರ್ವೆಜ್ ಹಾಗೂ ಸೈಯದ್ ರಾಜೀಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಲಂ ೫೦೪, ೩೦೭, ೩೪ ಐಪಿಸಿ ಆರೋಪಿತರಾಗಿದ್ದು ಜಾಮೀನಿನ ಮೇಲಿದ್ದರೂ, ನ್ಯಾಯಾಲಯಕ್ಕೆ ಹಾಜರಾಗದೆ ಗೈರಾಗಿರುತ್ತಾರೆ. ರಾಜೀಕ್ ಮತ್ತು ಮೊಹಮ್ಮದ್ ಯೂಸುಫ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಕೊಲೆಯತ್ನದಂತ ಕೇಸುಗಳಿವೆ ಎಂದು ಇನ್‌ಸ್ಪೆಕ್ಟರ್ ದೀಪಕ್ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದರು.
ಈ ಕಾರಣಕ್ಕೆ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು.
ಶುಕ್ರವಾರ ನ್ಯಾಯಾಲಯ ತೀರ್ಪು ನೀಡಿ ಎಲ್ಲಾ ಆರೋಪಿಗಳಿಗೆಜೀವಾವಧಿ ಶಿಕ್ಷೆ ವಿಧಿಸಿದೆ.