Chitradurga News ಚಿತ್ರ ಡಾನ್ ಬೋಸ್ಕೊ ಸಂಸ್ಥೆಯಲ್ಲಿ ಚಿತ್ರದುರ್ಗ ತಾಲ್ಲೂಕಿನ ಆಯ್ದ ಪ್ರೌಢಶಾಲೆಯ ಮಕ್ಕಳ ಹಕ್ಕುಗಳ ಪ್ರತಿನಿಧಿಗಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ನಾಗಭೂಷಣ್ ರವರು ಮಾತನಾಡಿ “ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದಮೇಲೆ ಅಂದಿನಿಂದ ಇಂದಿನವರೆಗೂ ಸಂವಿದಾನಾತ್ಮಕವಾಗಿ ಮೂಲಭೂತ ಹಕ್ಕುಗಳನ್ನು ಕೊಟ್ಟಿದ್ದು, ವಿಶೇಷವಾಗಿ ಮಕ್ಕಳಿಗೆ ಹಕ್ಕುಗಳನ್ನು ಕೊಟ್ಟಿದ್ದು, ಮಕ್ಕಳು ಬಾಲ್ಯಾವಸ್ಥೆಯಲ್ಲಿ ಸ್ವಚ್ಛಂದವಾದ ಬಾಲ್ಯವನ್ನು ಅನುಭವಿಸಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳು ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಶಾಲೆಯಿಂದ ಹೊರಗುಳಿಯುವುದು, ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳಿಂದ ಮಕ್ಕಳನ್ನು ರಕ್ಷಣೆ ಮಾಡಬೇಕಾಗಿದೆ. ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಜಾಗೃತರಾಗಬೇಕಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರಗಳ ಪಾತ್ರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಸಂಘಸಂಸ್ಥೆಗಳು ತನ್ನದೇ ಆದ ಕರ್ತವ್ಯಗಳನ್ನು ಮಾಡುತ್ತಿದ್ದು, ಸರ್ಕಾರದ ವ್ಯವಸ್ಥೆಗಳ ಜೊತೆಯಲ್ಲಿ ಸಮನ್ವಯದಿಂದ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಚಿತ್ರ ಡಾನ್ ಬೋಸ್ಕೊ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ” ಎಂದು ಹೇಳಿದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳಾದ ಶ್ರೀಯುತ ಸಂಪತ್ ಕುಮಾರ್ ರವರು ಮಾತನಾಡಿ “ಸಾಮಾನ್ಯವಾಗಿ ಮಕ್ಕಳಿಗೆ ಮೂಲಭೂತವಾಗಿ ಸಿಗಬೇಕಾಗಿರುವ ಹಕ್ಕುಗಳನ್ನು ಮಕ್ಕಳು ಅನುಭವಿಸಬೇಕು. ಶಾಲಾ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಶೋಷಣೆಗಳು, ಲೈಂಗಿಕ ದೌರ್ಜನ್ಯಗಳನ್ನು ತಡೆಹಿಡಿಯುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಲ್ಲಿ ದೂರು ಮತ್ತು ಸಲಹಾ ಪೆಟ್ಟಿಗೆಗಳನ್ನು ಇಡಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ತಿಳಿಸಿದರು.
Chitradurga News “ಮಕ್ಕಳಲ್ಲಿ ಜಾಗೃತಿ ಮೂಡಿಸುವ ಇಂತಹ ತರಬೇತಿಗಳನ್ನು ಮಕ್ಕಳು ಪಡೆದಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ” ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ತಿಮ್ಮಾರೆಡ್ಡಿಯವರು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಬಾಲ್ಯ ಮತ್ತು ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಕಾಯ್ದೆ ಬಗ್ಗೆ ಕುರಿತು ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಸತೀಶ್ ಕುಮಾರ್ ರವರು ಮಕ್ಕಳಿಗೆ ಮಾಹಿತಿ ನೀಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪಾತ್ರ ಮತ್ತು ಕರ್ತವ್ಯಗಳು ಹಾಗೂ ಇಲಾಖೆಯಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪರೀವಿಕ್ಷಣಾಧಿಕಾರಿಗಳಾದ ಶ್ರೀಮತಿ ಮಂಜುಳರವರು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೊ ಸಂಸ್ಥೆಯ ಆಡಳಿತಾಧಿಕಾರಿಗಳಾದ ಫಾದರ್ ವಿ.ಎಮ್ ಮ್ಯಾಥ್ಯೂ, ನಿರ್ದೇಶಕರಾದ ಡಿ.ಸಿ.ಅಂತೋಣಿರಾಜ್, ಸಂಸ್ಥೆಯ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.