CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆಗೆ ಹೆದರಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಅವರನ್ನು ಇಳಿಸಲು ಷಡ್ಯಂತ್ರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಬಲ್ಕಿಶ್ ಬಾನು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಿದ್ದರಾಮಯ್ಯನವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಈಗಾಗಲೇ ವಾಲ್ಮೀಕಿ ನಿಗಮದ ಹಗರಣ ತನಿಖೆಯ ಹಂತದಲ್ಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ . ಆದರೆ ಸಿದ್ದರಾಮಯ್ಯನವರ ಆಡಳಿತಕ್ಕೆ ಹೆದರಿ, ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ.
ಮೊದಲು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರರ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಲಿ ಎಂದರು. ರೈಸ್ ಮಿಲ್ ಗುಮಾಸ್ತನಾದ ಯಡಿಯೂರಪ್ಪನವರ ಆಸ್ತಿ ಈಗ ಕೋಟ್ಯಾಂತರ ಆಗಿದೆ. ಅದು ದಲಿತರ ಹಿಂದುಳಿದವರ ಮತ್ತು ರಾಜ್ಯದ ದುರ್ಬಲ ವರ್ಗದವರ ಹಣ ಎಂದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು ಮುಖ್ಯಮಂತ್ರಿಯನ್ನು ಇಳಿಸಲು ಹೊರಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಸವಾಲು ಹಾಕಿದರು.
ಕಲಗೋಡು ರತ್ನಾಕರ್ ಮಾತನಾಡಿ, ಸಿದ್ದರಾಮಯ್ಯನವರನ್ನು ಮುಟ್ಟಲು ಹೋದರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
CM Siddharamaih ಸೂಡಾ ಅಧ್ಯಕ್ಷ ಎಚ್‌ಎಸ್ ಸುಂದರೇಶ್ ಮಾತನಾಡಿ, ಶಿವಮೊಗ್ಗದಲ್ಲೇ ಬಿಜೆಪಿಯ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಆರ್ ಟಿ ಜಿ ಎಸ್ ಮೂಲಕ ಲಂಚ ಪಡೆದ ಬಿಜೆಪಿಗೆ ಕಾಂಗ್ರೆಸ್ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುವ ಯಾವ ನೈತಿಕತೆಯೂ ಇಲ್ಲ. ಐಟಿ ಮತ್ತು ಇಡಿ ದಾಳಿ ನಡೆಸಿ ಕಾಂಗ್ರೆಸ್ ನಾಯಕರನ್ನು ಬಗ್ಗು ಬಡೆಯಲು ಯತ್ನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧವು ಕೂಡ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.