Kateel Ashok Pai College ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಶಿವಮೊಗ್ಗ ಹಾಗೂ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಕಾರ್ಗಿಲ್ ವಿಜಯೋತ್ಸವದ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಈ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಭಾರತೀಯ ಸೇನೆಯ ನಿವೃತ್ತ ಯೋಧರಾದ ಶಿವಮೊಗ್ಗದ ಶ್ರೀ ರಾಜಶೇಖರ್ ರವರು ಮಾತನಾಡುತ್ತಾ ದೇಶದ ಪ್ರತಿಯೊಬ್ಬ ಸೈನಿಕನಿಗೂ ದೇಶದ ರಕ್ಷಣೆ ಹಾಗೂ ದೇಶದ ಹಿತವೇ ಆದ್ಯತೆಯಾಗಿರುತ್ತದೆ ಎಂದು ತಿಳಿಸಿದರು. ಭಾರತೀಯ ಸೇನೆಗೆ ತಾನು ಆಯ್ಕೆಯಾದ ಪ್ರಕ್ರಿಯೆಯನ್ನು ವಿವರಿಸುತ್ತಾ ಶ್ರೀಯುತರು ಸೇನೆಯ ಆಯ್ಕೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳೆರಡೂ ಮುಖ್ಯ ಎಂದರು. ಮುಂದುವರೆದು ತಾನು ಕಾರ್ಯ ನಿರ್ವಹಿಸಿದ ವಿವಿಧ ಸ್ಥಳಗಳು, ಅನುಭವಗಳು ಹಾಗೂ ಸವಾಲುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ತನ್ನ ಅನುಭವಗಳನ್ನು ಹೇಳುತ್ತಾ ಗಾಯಗೊಂಡ ಹಾಗೂ ಮಡಿದ ವೀರ ಯೋಧರನ್ನು ಸ್ಮರಿಸಿದರು. ಭಾರತದ ಸೇನೆ ಯಾವುದೇ ದೇಶದ ದಾಳಿಯನ್ನು ಎದುರಿಸಬಲ್ಲಷ್ಟು ಸಮರ್ಥವಾಗಿದೆ. ಮಾತ್ರವಲ್ಲ, ದೇಶದ ಜನರನ್ನು ಯಾವುದೇ ಸಂಕಷ್ಟದಿಂದಲೂ ಪಾರು ಮಾಡಬಲ್ಲ ಸಾಮರ್ಥ್ಯವನ್ನೂ ಹೊಂದಿದೆ ಎಂದು ರಾಜಶೇಖರ್ ರವರು ಹೆಮ್ಮೆಯಿಂದ ತಿಳಿಸಿದರು.
Kateel Ashok Pai College ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ.ರಜನಿ.ಎ.ಪೈರವರು ಮಾತನಾಡುತ್ತಾ ಭಾರತೀಯ ಸೇನೆಯ ಕಾರ್ಯಗಳನ್ನು ಶ್ಲಾಘಿಸಿದರು. ಕಾರ್ಗಿಲ್ ವಿಜಯೋತ್ಸವದ ರಜತ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ದೇಶಭಕ್ತಿ ಸಮೂಹ ಗಾಯನ ಸ್ಪರ್ಧೆಯಲ್ಲಿ ಸ್ನಾತಕೋತ್ತರ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ಕೀರ್ತನ ಮತ್ತು ತಂಡ ಪ್ರಥಮ ಬಹುಮಾನ ಹಾಗೂ ಪದವಿ ವಿದ್ಯಾರ್ಥಿನಿಯರಾದ ತನ್ಮಯಿ ಮತ್ತು ತಂಡ ದ್ವಿತೀಯ ಬಹುಮಾನವನ್ನು ಪಡೆದರು. ಹಾಗೆಯೇ ಆಶುಭಾಷಣ ಸ್ಪರ್ಧೆಯಲ್ಲಿ ಎನ್ ಸಿ ವಿ ಆರ್ ಟಿ (ನರ್ಸಿಂಗ್) ವಿದ್ಯಾರ್ಥಿನಿಯರಾದ ಚಂದನ.ಎಸ್ ಪ್ರಥಮ ಬಹುಮಾನ, ಮೇಘನಾ ದ್ವಿತೀಯ ಬಹುಮಾನ ಹಾಗೂ ನಫೀಸಾ ತೃತೀಯ ಬಹುಮಾನವನ್ನು ಪಡೆದರು. “ನಮ್ಮ ಸೈನಿಕ – ನಮ್ಮ ಹೆಮ್ಮೆ” ಎಂಬ ವಿಷಯದ ಕುರಿತ ವಿಚಾರ ಮಂಡನೆಯಲ್ಲಿ ಸ್ನಾತಕೋತ್ತರ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ಪ್ರಜ್ಞಾ ಪ್ರಥಮ ಬಹುಮಾನ ಹಾಗೂ ಅಮೃತ ದ್ವಿತೀಯ ಬಹುಮಾನವನ್ನು ಗಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗದ ಪ್ರಖ್ಯಾತ ವಕೀಲರಾದ ಶ್ರೀ ಬಸವರಾಜ್ ರವರು ಹೊಸ ಕ್ರಿಮಿನಲ್ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿ ಸಂವಾದ ನಡೆಸಿದರು. ಕ್ಷೇತ್ರ ಪ್ರಚಾರಾಧಿಕಾರಿಗಳಾದ ಶ್ರೀಮತಿ ಅಕ್ಷತಾ ಭಟ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಐಕ್ಯೂಎಸಿಯ ಸಂಯೋಜಕರಾದ ಡಾ.ಅರ್ಚನಾ ಭಟ್, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಸುಕೀರ್ತಿ ಹಾಗೂ ಶ್ರೀ ರಾಬರ್ಟ್ ರಾಯಪ್ಪ, ಕಾಲೇಜಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಶ್ವಿನಿ ನಿರೂಪಿಸಿ, ಸಮಂತಾ ಸ್ವಾಗತಿಸಿ, ಕ್ಷೇತ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಶ್ರೀ ಲಕ್ಷ್ಮಿಕಾಂತ್.ಸಿ.ವಿರವರು ಎಲ್ಲರನ್ನೂ ವಂದಿಸಿದರು.