Anandiben Patel ಸಮಾಜವಾದಿ ಪಕ್ಷದ ಶಾಸಕನ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಿಜೆಪಿ ಮಾಜಿ ಶಾಸಕ ಉದಯಭಾನ್ ಕರ್ವಾರಿಯಾ ಅವರಿಗೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಕ್ಷಮಾದಾನ ನೀಡಿದ ಹಿನ್ನೆಲೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ನೈನಿ ಕೇಂದ್ರ ಕಾರಾಗೃಹದ ಹಿರಿಯ ಸೂಪರಿಂಟೆಂಡೆಂಟ್ ರಂಗ್ ಬಹದ್ದೂರ್ ಪಟೇಲ್ ಅವರು ಪಿಟಿಐಗೆ ನೀಡಿರುವ ಮಾಹಿತಿ ಪ್ರಕಾರ, ಉದಯಭಾನ್ ಕರ್ವಾರಿಯಾ ಅವರ ಬಿಡುಗಡೆ ಆದೇಶವನ್ನು ಬುಧವಾರ ಸಂಜೆ ಸ್ವೀಕರಿಸಲಾಗಿದ್ದು, ಆದೇಶದಂತೆ ಅವರನ್ನು ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗಿದೆ.
ಕರ್ವಾರಿಯಾ ಅವರನ್ನು ಅವಧಿಪೂರ್ವ ಬಿಡುಗಡೆ ಮಾಡಬೇಕು ಎಂಬ ರಾಜ್ಯ ಸರ್ಕಾರದ ಶಿಫಾರಸ್ಸು ಒಪ್ಪಿಕೊಂಡ ರಾಜ್ಯಪಾಲರು, ಸಂವಿಧಾನದ 161 ನೇ ವಿಧಿಯಡಿ ಅವರಿಗೆ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಬಿಡುಗಡೆ ಆದೇಶ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.
ಸಂವಿಧಾನದ 161 ನೇ ವಿಧಿಯು ಅಪರಾಧಿಗಳಿಗೆ ಕ್ಷಮಾಪಣೆ ನೀಡುವುದು, ಶಿಕ್ಷೆ ಹಿಂಪಡೆಯುವುದು ಬಿಡುಗಡೆಗೆ ಆದೇಶ ನೀಡುವುದು, ಅಪರಾಧಿಯ ಶಿಕ್ಷೆಯನ್ನು ಬದಲಾಯಿಸುವುದು ಸೇರಿದಂತೆ ಹಲವು ಅಧಿಕಾರಿಗಳನ್ನು ರಾಜ್ಯಪಾಲರಿಗೆ ನೀಡುತ್ತದೆ ಎಂದು ತಿಳಿದು ಬಂದಿದೆ.
Anandiben Patel ಪ್ರಯಾಗರಾಜ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಜೈಲಿನಲ್ಲಿ ಕರ್ವಾರಿಯಾ ಅವರ ಉತ್ತಮ ನಡವಳಿಕೆಯನ್ನು ಉಲ್ಲೇಖಿಸಿ ಅವರನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1996ರ ಆಗಸ್ಟ್‌ನಲ್ಲಿ ಸಮಾಜವಾದಿ ಪಕ್ಷದ ಶಾಸಕ ಜವಾಹರ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಯಾಗ್‌ರಾಜ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಕರ್ವಾರಿಯಾ ಅವರಿಗೆ ನವೆಂಬರ್ 4,2019 ರಂದು ಜೀವಾವಧಿ ಶಿಕ್ಷೆ ವಿಧಿಸಿದ್ದರು.