Family Planning Association of India “ಸುಮಾರು 50 ವರ್ಷಗಳಿಂದ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು ನಿಜವಾಗಿಯೂ ಅಭಿನಂದನೆಗೆ ಅರ್ಹವಾಗಿದೆ” ಎಂದು ಹೇಳುತ್ತಾ ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀ ಯುತ ಮೊಹಮ್ಮದ್ ಜುಬೇರ್ ರವರು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ (ಕೇಂದ್ರ ಕಛೇರಿ) 75 ನೇ ಸಂಸ್ಥಾಪನ ದಿನಾಚರಣೆಯಾದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾ “ಆರೋಗ್ಯ ಸೇವೆಯನ್ನು ಇಂದಿಗೂ ಸೇವೆಯಾಗಿ ಕಡಿಮೆ ಖರ್ಚಿನಲ್ಲಿ ಕೊಡುತ್ತಿರುವ ಎಫ್‌ಪಿಎಐ ಸಂಸ್ಥೆಯನ್ನು ನೋಡಿ ಸಾಕಷ್ಟು ಖುಷಿಯಾಯಿತು, ಈ ಸಂಸ್ಥೆಯ ಸ್ವಚ್ಛತೆ ಹಾಗೂ ಆರೋಗ್ಯಕರವಾದ ವಾತಾವರಣವನ್ನು ನೋಡಿದರೆ ಈ ಆಸ್ಪತ್ರೆ ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಯುತ್ತದೆ” ಎಂದು ಹೇಳಿದರು.
ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರದ ಚಾಲನೆಯನ್ನು ನೀಡಿದ ಬಳ್ಳಾರಿಯ ವೃತ್ತ ನಿರೀಕ್ಷಕರಾದ ಶ್ರೀಯುತ ಅಯ್ಯನ್ ಗೌಡ ಪಾಟೀಲ್ ರವರು ಮಾತನಾಡಿ ಆರೋಗ್ಯ ಸೇವೆಯು ನೈತಿಕತೆಯನ್ನು ಒಳಗೊಂಡಿರಬೇಕಾಗುತ್ತದೆ, ಹಾಗೆಯೇ ಈ ಸಂಸ್ಥೆಯು ನೈತಿಕತೆಯಿಂದ, ಶ್ರದ್ಧೆಯಿಂದ ಯಾವುದೇ ರೀತಿಯ ಜನಪ್ರಿಯತೆಗೆ ಆಸೆ ಪಡದೆ ತನ್ನ ಕಾರ್ಯವನ್ನು ಎಲೆಮರೆಕಾಯಿಯಾಗಿ ಮಾಡುತ್ತಿದೆ.
ಈ ಸಂಸ್ಥೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪೊಲೀಸ್ ರಕ್ಷಣೆ ಹಾಗೂ ಪೊಲೀಸ್ ಸೇವೆ ಬೇಕಿದ್ದಲ್ಲಿ ನಮ್ಮ ಬಳ್ಳಾರಿಯ ಪೊಲೀಸ್ ಇಲಾಖೆಯು ಸದಾ ಸಿದ್ಧವಾಗಿರುತ್ತದೆ” ಎಂದು ಹೇಳಿದರು.
Family Planning Association of India ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬಳ್ಳಾರಿಯ ಕುಟುಂಬ ಕಲ್ಯಾಣ ಯೋಜನಾಧಿಕಾರಿಯಾದ ಡಾ.ಪೂರ್ಣಿಮಾ ಕಟ್ಟೀಮನಿಯವರು ಮಾತನಾಡಿ “ಎಫ್ ಪಿ ಎ ಐ ಸಂಸ್ಥೆಯು ಹದಿಹರೆಯದ ಶಿಕ್ಷಣ, ಲೈಂಗಿಕತೆ ಹಾಗೂ ಪ್ರಜನನ ಆರೋಗ್ಯದ ಬಗ್ಗೆ ಮಾಹಿತಿ, ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಹಾಗೂ ಲಸಿಕೆ, ಸ್ತನ ಕ್ಯಾನ್ಸರ್ ತಪಾಸಣೆ, ಗರ್ಭಿಣಿ ಮತ್ತು ಬಾಣಂತಿಯರ ತಪಾಸಣೆ, ಪುರುಷ ಹಾಗೂ ಮಹಿಳೆಯರಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಇನ್ನೂ ಹಲವಾರು ರೀತಿಯ ವೈದ್ಯಕೀಯ ಸೇವೆಗಳನ್ನು ಸ್ವತಂತ್ರದ ನಂತರದಿಂದಲೂ ನಡೆಸಿಕೊಂಡು ಬಂದಿದೆ. ಇಂದು ಈ ಸಂಸ್ಥೆಗೆ 75 ವರ್ಷ ತುಂಬಿದೆ, ಒಂದು ಸ್ವಯಂಸೇವಾ ಸಂಸ್ಥೆಯು ತನ್ನೆಲ್ಲಾ ಅಡೆತಡೆಗಳನ್ನು ದಾಟಿ 75 ನೇ ವರ್ಷಕ್ಕೆ ಕಾಲಿಟ್ಟಿದೆ ಎಂದರೆ ಅದು ನಿಜವಾಗಿಯೂ ಶ್ಲಾಘನಾರ್ಹ ಸಂಗತಿ” ಎಂದರು.
ಸ್ತ್ರೀರೋಗ ತಜ್ಞರಾದ ಡಾ.ರುಕ್ಸಾರ್ ಭಾನುರವರು ಸುಮಾರು 75 ಕ್ಕೂ ಹೆಚ್ಚಿನ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಶ್ರೀಯುತ ಟಿ.ಜಿ.ವಿಠ್ಠಲ್ ರವರು ಮಾತನಾಡಿ “ಹೆಚ್ ಪಿ ವಿ ಲಸಿಕೆಯನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ ಹಾಗೂ ಆಧುನಿಕ ತಂತ್ರಜ್ಞಾನವಾದ ಸ್ಮಾರ್ಟ್ ಸ್ಕೋಪನ್ನು ಬಳಸಿ ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ವೈದ್ಯಕೀಯ ಸೌಲಭ್ಯವು ಎಫ್ ಪಿ ಎ ಐ ನಲ್ಲಿ ಲಭ್ಯವಿರುವುದು ಸಂತಸದ ಸಂಗತಿ” ಎಂದು ಹೇಳಿದರು.
ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಸುಮಾರು 20 ಕ್ಕೂ ಹೆಚ್ಚಿನ ಗಿಡಗಳನ್ನು ಸಂಸ್ಥೆಯ ಆವರಣದ ಮುಂಭಾಗದ ರಸ್ತೆಯಲ್ಲಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ವಿಜಯಸಿಂಹರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಳ್ಳಾರಿ ಶಾಖೆಯ ಉಪಾಧ್ಯಕ್ಷರಾದ ಡಾ.ಚಂದನ, ಸಂಸ್ಥೆಯ ಆರ್ಥಿಕ ಸಲಹೆಗಾರರಾದ ಡಾ.ಭಾಗ್ಯ, ಸದಸ್ಯರಾದ ವಿಷ್ಣು, ಅಹಿರಾಜ್, ಪ್ರಶಾಂತ್ ಕೇಣಿ, ಗಿರೀಶ್.ಡಿ, ಶ್ರೀ ಚೈತನ್ಯ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀಮತಿ ಚೆನ್ನಾರೆಡ್ಡಿ ಸ್ಮಾರಕ ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಎಂ ಅಂಡ್ ಇ ಆಫೀಸರ್ ಶ್ರೀಮತಿ ಸುಜಾತ ಪುರಾಣಿಕ್ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕರಾದ ಎಸ್.ವಿಜಯಲಕ್ಷ್ಮಿ ನಿರೂಪಿಸಿ, ಕಾರ್ಯಕ್ರಮಾಧಿಕಾರಿಯಾದ ಬಸವರಾಜ್ ವಂದಿಸಿದರು.