Bhadra Dam ಮಧ್ಯ ಕರ್ನಾಟಕದ ಪ್ರಮುಖ ಜಲಾಶಯ, ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ.
ಇದರಿಂದ ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ, ಡ್ಯಾಂನ ಒಳಹರಿವು 23,674 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಶನಿವಾರ ಈ ಪ್ರಮಾಣ 46,876 ಕ್ಯೂಸೆಕ್ ಇತ್ತು. ಉಳಿದಂತೆ ಡ್ಯಾಂನಿಂದ 191 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
Bhadra Dam ಪ್ರಸ್ತುತ ಡ್ಯಾಂ ನೀರಿನ ಮಟ್ಟ 164. 3 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 143 ಅಡಿಯಿತ್ತು.
ಕಳೆದ ಒಂದು ವಾರದಿಂದ ಭದ್ರಾ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಡೆಬಿಡದೆ ಬಿದ್ದ ಮಳೆಯಿಂದ ಡ್ಯಾಂಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿತ್ತು.
ಇದು ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.