Pooja Khedkar ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಎಫ್‌ಐಆರ್ ದಾಖಲು ಮಾಡಿದೆ. ಅಷ್ಟೇ ಅಲ್ಲ, ಪೂಜಾ ಖೇಡ್ಕರ್ ಅವರ ಐಎಎಸ್ ನೇಮಕಾತಿ ರದ್ದು ಮಾಡುವ ಹಾಗೂ ಮುಂದಿನ ದಿನಗಳಲ್ಲಿ ಅವರಿಗೆ ಯುಪಿಎಸ್‌ಸಿ ಪರೀಕ್ಷೆಗೆ ಅವಕಾಶ ನೀಡದೆ ಡಿಬಾರ್ ಮಾಡುವ ಕುರಿತಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಈ ಮೂಲಕ ಪೂಜಾ ಖೇಡ್ಕರ್ ಅವರ ಐಎಎಸ್ ಹುದ್ದೆಗೇ ಕಂಟಕ ಎದುರಾಗಿದೆ.
2022ರಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಪರ ಖೇಡ್ಕರ್, ಈ ಪರೀಕ್ಷೆಯಲ್ಲಿ ಆಯ್ಕೆಯಾಗಿ ಐಎಎಸ್ ತರಬೇತಿ ಶಾಲೆಯಲ್ಲಿ ತರಬೇತಿ ಪೂರ್ಣಗೊಳಿಸಿ ಪ್ರೊಬೆಷನರಿ ಅಧಿಕಾರಿಯಾಗಿ ನಿಯುಕ್ತರಾಗಿದ್ದರು.
ಆದರೆ, ಅವರ ವಿರುದ್ಧ ಅಕ್ರಮ ದಾಖಲೆ ಸಲ್ಲಿಕೆ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಮಾಡಿದ ಯುಪಿಎಸ್‌ಸಿ, ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಅಭ್ಯರ್ಥಿತನ ರದ್ದು ಮಾಡಲು ಮುಂದಾಗಿದೆ.
ಪೂಜಾ ಖೇಡ್ಕರ್ ಅವರು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಹಲವು ಅಕ್ರಮ ಮಾರ್ಗಗಳನ್ನು ಅನುಸರಿಸಿರೋದು ದೃಢಪಟ್ಟಿದೆ. ಅವರ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಫೋಟೋ, ಸಹಿ, ಇ ಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ಮನೆ ವಿಳಾಸದ ನಕಲಿ ದಾಖಲೆ ನೀಡಿರೋದು ಸಾಬೀತಾಗಿದೆ.
ಅಷ್ಟೇ ಅಲ್ಲ, ನಿಗದಿತ ಮಿತಿಗಿಂತ ಹೆಚ್ಚು ಬಾರಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿರೋದೂ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಪೂಜಾ ಖೇಡ್ಕರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವ ಯುಪಿಎಸ್‌ಸಿ, ಅವರ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಿದೆ.
2022ರಲ್ಲಿ ಆಯ್ಕೆಯಾದ ಅವರ ಅಭ್ಯರ್ಥಿತನವನ್ನು ರದ್ದು ಮಾಡುವ ಕುರಿತಾಗಿ ಶೋಕಾಸ್ ನೋಟಿಸ್ (ಕಾರಣ ಕೇಳಿ ನೋಟಿಸ್) ಕೂಡಾ ಜಾರಿ ಮಾಡಿದೆ. ಜೊತೆಯಲ್ಲೇ ಭವಿಷ್ಯದಲ್ಲಿ ಪೂಜಾ ಖೇಡ್ಕರ್ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳೋದಕ್ಕೆ, ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗಿಯಾಗೋದಕ್ಕೆ ನಿರ್ಬಂಧ ಹೇರೋದಕ್ಕೂ ತೀರ್ಮಾನಿಸಿದೆ.
Pooja Khedkar ಇದೇ ವೇಳೆ ಯುಪಿಎಸ್‌ಸಿ ತನ್ನ ಪರೀಕ್ಷಾ ನಿಯಮಗಳನ್ನು ಯಾವುದೇ ಕಾರಣಕ್ಕೂ ಸಡಿಲ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಎಲ್ಲ ರೀತಿಯ ಪ್ರಕ್ರಿಯೆಗಳನ್ನೂ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿದ್ದು, ಎಲ್ಲಿಯೂ ಲೋಪದೋಷಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಲೋಕಸೇವಾ ಆಯೋಗವು ತನ್ನ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಲು ಹಾಗೂ ನ್ಯಾಯಸಮ್ಮತ ಹಾಗೂ ಶಿಸ್ತಿನಿಂದ ಪರೀಕ್ಷಾ ನಿಯಮಗಳನ್ನ ಜಾರಿಗೆ ತಂದಿರೋದಾಗಿ ಹೇಳಿದೆ. ಸಾರ್ವಜನಿಕ ವಲಯದಲ್ಲಿ ತನ್ನ ಮೇಲೆ ಇರುವ ನಂಬಿಕೆ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳಲು, ಎಲ್ಲಕ್ಕಿಂತಾ ಹೆಚ್ಚಾಗಿ ಅಭ್ಯರ್ಥಿಗಳ ವಿಶ್ವಾಸ ಗಳಿಸಲು ಬದ್ಧವಾಗಿದೆ ಎಂದು ಯುಪಿಎಸ್‌ಸಿ ಹೇಳಿದೆ.
ಇದಕ್ಕೂ ಮುನ್ನ ಜುಲೈ 18 ರಂದು ಮಹಾರಾಷ್ಟ್ರ ಸರ್ಕಾರದ ಪ್ರಧಾನ ಆಡಳಿತ ವಿಭಾಗವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿತಿನ್ ಗಡ್ರೆ ಅವರ ಸಾರಥ್ಯದಲ್ಲಿ ಸಮಗ್ರ ತನಿಖೆ ನಡೆಸಿ ಕೇಂದ್ರ ಸರ್ಕಾರದ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ವರದಿ ನೀಡಿತ್ತು. ಈ ವರದಿಯಲ್ಲಿ ಪೂಜಾ ಖೇಡ್ಕರ್ ವಿರುದ್ಧ ಹಲವು ರೀತಿಯ ಆರೋಪಗಳನ್ನ ಮಾಡಿತ್ತು.
ಈ ವರದಿಯನ್ನು ಕೇಂದ್ರ ಸರ್ಕಾರದ ಏಕ ಸದಸ್ಯ ಸಮಿತಿಗೆ ರವಾನೆ ಮಾಡಲಾಗಿತ್ತು. ಹೆಚ್ಚುವರಿ ಕಾರ್ಯದರ್ಶಿ ಮನೋಜ್ ದ್ವಿವೇದಿ ಅವರು ಈ ಕುರಿತಾಗಿ ತನಿಖೆ ನಡೆಸಿದರು.
ಪುಣೆ ಟ್ರೈನಿ ಐಎಎಸ್ ಅಧಿಕಾರಿಯ ಆಡಿ ಕಾರು ಜಪ್ತಿ
ಪೂಜಾ ಖೇಡ್ಕರ್‌ಗೆ ಮುಳುವಾಯ್ತು ಕೆಂಪು ದೀಪ!
ತಮ್ಮ ಐಷಾರಾಮಿ ಆಡಿ ಕಾರ್‌ಗೆ ಪೂಜಾ ಖೇಡ್ಕರ್ ಕೆಂಪು ದೀಪ ಅಳವಡಿಕೆ ಮಾಡಿಕೊಂಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಪೂಜಾ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಆಕೆಯ ವಿರುದ್ಧ ಹಲವು ಆರೋಪಗಳು ಒಂದೊಂದಾಗಿ ಬಹಿರಂಗ ಆಗತೊಡಗಿದವು. ಹಿರಿಯ ಐಎಎಸ್ ಅಧಿಕಾರಿಗಳ ಚೇಂಬರ್ ದುರ್ಬಳಕೆ, ನಕಲಿ ಕೋಟಾ ಅಡಿ ಮೀಸಲಾತಿಗೆ ಅರ್ಜಿ, ಹಲವು ಬಾರಿ ಪರೀಕ್ಷೆ ಎದುರಿಸಲು ನಕಲಿ ದಾಖಲೆ ನೀಡಿದ ಆರೋಪ ಸೇರಿದಂತೆ ಹಲವು ಆರೋಪಗಳು ಒಂದೊಂದಾಗಿ ಪೂಜಾ ಖೇಡ್ಕರ್ ವಿರುದ್ಧ ಸುತ್ತಿಕೊಂಡವು.