Madhu Bangarappa ಗುಣಮಟ್ಟದ ಶಿಕ್ಷಣ ಮತ್ತು ಪರೀಕ್ಷಾ ಪಾವಿತ್ರ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಅನುಕೂಲಕರವಾದ ಎಲ್ಲ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಎಸ್ ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ೨೦೨೩-೨೪ ನೇ ಸಾಲಿನಲ್ಲಿ ಎಸ್ ಎಸ್ ಎಲ್‌ಸಿಯಲ್ಲಿ ಶೇ.೧೦೦ ಫಲಿತಾಂಶ ಪಡೆದ ಶಾಲೆಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ೫೦ ಸಾವಿರ ಶಿಕ್ಷಕರ ಕೊರತೆ ಇತ್ತು. ಕಡಿಮೆ ಕಾಲಮಿತಿಯಲ್ಲಿ ೪೫ ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಪೌಷ್ಟಿಕಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ೮ನೇ ತರಗತಿವರೆಗೆ ಮಾತ್ರ ನೀಡಲಾಗುತ್ತಿದ್ದ ಮೊಟ್ಟೆಯನ್ನು ೧೦ ನೇ ತರಗತಿವರೆಗೆ ವಿಸ್ತರಿಸಲಾಗಿದೆ. ರಾಗಿ ಮಾಲ್ಟ್ ನೀಡಲಾಗುತ್ತಿದೆ. ಹಾಗೂ ವಾರದಲ್ಲಿ ಒಂದು ನೀಡುತ್ತಿದ್ದ ಮೊಟ್ಟೆಯನ್ನು ೨ ದಿನಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ವಾರದಲ್ಲಿ ೬ ದಿನವೂ ಮೊಟ್ಟೆ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.
Madhu Bangarappa ಶಿಥಿಲಾವಸ್ಥೆಯಲ್ಲಿ ಇರುವ ಶಾಲಾ ಕಟ್ಟಡ ಮತ್ತು ಕೊಠಡಿಗಳನ್ನು ಹಂತ ಹಂತವಾಗಿ ರಿಪೇರಿ ಮಾಡಲಾಗುತ್ತಿದೆ. ೧೬೦೦ ಕೊಠಡಿ ರಿಪೇರಿ ಮತ್ತು ಅವಶ್ಯವಿರುವೆಡೆ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಮಂಜೂರಾತಿ ದೊರೆಯಲಿದೆ. ರಾಜ್ಯದಲ್ಲಿ ಹೊಸದಾಗಿ ೫೦೦ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು, ಉನ್ನತೀಕರಿಸಲಾಗುವುದು ಎಂದು ಹೇಳಿದ್ದ ಪ್ರಕಾರ ಹಂತ ಹಂತವಾಗಿ ಕೆಪಿಎಸ್ ಶಾಲೆ ಉನ್ನತೀಕರಣ ಆಗುತ್ತಿದೆ. ಕೆಪಿಎಸ್ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಮಾಧ್ಯಮ, ಎಲ್‌ಕೆಜಿ, ಯುಕೆಜಿ, ಲೈಬ್ರರಿ ಸೇರಿದಂತೆ ಉತ್ತಮ ಸೌಲಭ್ಯಗಳು ದೊರೆಯಲಿದ್ದು ೫೦೦ ರಿಂದ ೧ ಸಾವಿರ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು ಎಂದರು.