Department of Health ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿಂದ ಆಹಾರ,ಶಿಕ್ಷಣ,ಸಾರಿಗೆ ಹಾಗೂ ವಸತಿ ಸಮಸ್ಯೆಗಳು ದೇಶದ ಭವಿಷ್ಯಕ್ಕೆ ಗಂಭೀರ ಸಮಸ್ಯೆಯಾಗಿ ಎದುರಾಗಲಿದೆ ಎಂದು ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಹೇಳಿದರು.
ಸೊರಬ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಉತ್ತಮ ಆಡಳಿತಶಾಹಿ ವ್ಯವಸ್ಥೆಗೆ ಜನಸಂಖ್ಯೆ ನಿಯಂತ್ರಣ ಮುಖ್ಯವಾಗಿದ್ದು, ಆಳುವ ಸರ್ಕಾರಗಳು ಅರಣ್ಯ ಸಂಪತ್ತಿನ ಉಳಿವಿಗೆ ದೃಢ ನಿರ್ಧಾರಗಳು ಕೈಗೊಂಡಾಗ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಜೊತೆಗೆ ಜನಸಾಮಾನ್ಯರ ಆರೋಗ್ಯವು ಸುಧಾರಿಸಲಿದೆ ಎಂದು ತಿಳಿಸಿದರು.
ಕುಟುಂಬದಲ್ಲಿ ಎರಡು ಮಕ್ಕಳನ್ನು ಹೊಂದುವ ಆಪೇಕ್ಷೆಯೊಂದಿಗೆ ಇಲಾಖೆ ಹೊರಡಿಸಿರುವ ಜನಸಂಖ್ಯೆ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸುವ ಅಗತ್ಯವಿದೆ ಈ ನಿಟ್ಟಿನಲ್ಲಿ ಯುವ ಸಮುದಾಯ ಪ್ರಜ್ಞಾವಂತಿಕೆಯಿಂದ ಜನಸಂಖ್ಯಾ ನಿಯಂತ್ರಣದ ಶೈಕ್ಷಣಿಕ ಪ್ರಜ್ಞೆಯಿಂದ ಆರೋಗ್ಯಯುತ ದೇಶ ಕಟ್ಟುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ|| ಪ್ರಭು ಸಾಹುಕಾರ್ ತಿಳಿಸಿದರು.
Department of Health ಇದಕ್ಕೂ ಮೊದಲು ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಜನಸಂಖ್ಯಾ ನಿಯಂತ್ರಣದ ಕುರಿತು ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದರು.
ತಾಲೂಕ್ ಆರೋಗ್ಯ ಅಧಿಕಾರಿ ವಿನಯ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಮಂಜುಳಾ ಹೆಗಡಾಳ್, ಆಡಳಿತ ವೈದ್ಯಾಧಿಕಾರಿ ಪ್ರಭು ಕೆ ಸಾಹುಕಾರ್,ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಪದ್ಮಾವತಿ, ಶ್ರೀರಾಮ, ಯಶವಂತರಾಜ್, ಶಬ್ಬೀರ್ ಖಾನ್, ಆನಂದ,ಗಾಯತ್ರಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.