Madhu Bangarappa ಶಿವಮೊಗ್ಗ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕಚೇರಿ ಎದರು ಪ್ರತಿಭಟನೆ ನಡೆಸುತ್ತಿದ್ದ, ಎಬಿವಿಪಿ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ನಡೆಯಿತು.
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ಸಂಘಟನೆಯ ಅಹವಾಲು ಆಲಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಮನವೊಲಿಸುವ ಕಾರ್ಯ ನಡೆಸಿದರು. ಆದರೆ ಪ್ರತಿಭಟನಾಕಾರರು ಧರಣಿ ಮುಂದುವರೆಸಿದ್ದರಿಂದ, ಪೊಲೀಸರು ಸುಮಾರು 20 ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕರೆದೊಯ್ದರು. ನಂತರ ಅವರನ್ನು ಬಿಡುಗಡೆಗೊಳಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣ ಹೊಂದಿಸಲು, ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ನ್ಯಾಯಬದ್ದ ಸೌಲಭ್ಯಗಳನ್ನು ಕಸಿದುಕೊಳ್ಳುವ ಕಾರ್ಯ ನಡೆಸುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿದ್ಯಾರ್ಥಿಗಳು ಬಸ್ ಪಾಸ್ ಸೌಲಭ್ಯ ಪಡೆಯಲು ಅಲೆದಾಡುವಂತಹ ದುಸ್ಥಿತಿ ಇದೆ. ಆರ್ಜಿ ಸಲ್ಲಿಸಿದ ನಂತರ ವಾರಗಟ್ಟಲೆ ಬಸ್ ಪಾಸ್ ಗೆ ಕಾಯುವಂತಾಗಿದೆ.
Madhu Bangarappa ಕಾಲಮಿತಿಯೊಳಗೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸುವ ಕಾರ್ಯ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಹೆಚ್ಚಿನ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಾಲಾ ಕಾಲೇಜು ಆರಂಭವಾಗಿ ತಿಂಗಳುಗಳೇ ಕಳೆದರೂ ಸರ್ಕಾರಿ ಹಾಸ್ಟೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಸೌಲಭ್ಯ ದೊರಕುತ್ತಿಲ್ಲ. ಇದರಿಂದ ಗ್ರಾಮೀಣ ಹಾಗೂ ಬಡ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಏಕರೂಪದ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು