Wednesday, October 2, 2024
Wednesday, October 2, 2024

S.N. Chennabasappa ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರಿ ನೌಕರರ ಮನವಿ ಬಗ್ಗೆ ಚರ್ಚಿಸಲು ಸಿದ್ಧ- ಶಾಸಕ ಚೆನ್ನಿ

Date:

S.N. Chennabasappa ರಾಜ್ಯ ಸರ್ಕಾರಿ ನೌಕರರು ತಮ್ಮ ನ್ಯಾಯೋಚಿತ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಕುರಿತಂತೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಶಾಸಕರ ಭವನದಲ್ಲಿ ಭೇಟಿ ಮಾಡಿ ಸಲ್ಲಿಸಿದ ಮನವಿಯ ಕುರಿತು ಮಾತನಾಡುತ್ತಿದ್ದರು. ಕಾಲಕಾಲಿಕವಾಗಿ ಸರ್ಕಾರವು ನೌಕರರಿಗೆ ನೀಡುವ ವೇತನ ಭತ್ಯೆಗಳನ್ನು ಪರಿಷ್ಕರಿಸಿ ನೀಡಬೇಕು. ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನೌಕರರ ಪಾತ್ರ ಮಹತ್ವದ್ದಾಗಿದೆ ಎಂದರು.
ಎಲ್ಲಾ ಸಂದರ್ಭಗಳಲ್ಲಿಯೂ ಸರ್ಕಾರದ ಜೊತೆಗಿದ್ದು ಕಾರ್ಯನಿರ್ವಹಿಸುವ ನೌಕರರ ಹಿತಕಾಯುವಲ್ಲಿಯೂ ಸರ್ಕಾರವ ವಿಶೇಷ ಕಾಳಜಿ ವಹಿಸಬೇಕು ಎಂದ ಅವರು, ರಾಜ್ಯದಲ್ಲಿ ೨.೬೦ ಲಕ್ಷ ಹುದ್ದೆಗಳು ಖಾಲಿಯಿದ್ದರೂ ಸಹ ಸರ್ಕಾರವು ಜನ ಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜೊತೆ ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ ಹಾಗೂ ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದ ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್ ಅವರು ಮಾತನಾಡಿ, ರಾಜ್ಯ ೭ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸಬೇಕು. ಈಗಾಗಲೇ ಆಯೋಗವು ವರದಿ ನೀಡಿ ಅನೇಕ ತಿಂಗಳುಗಳೇ ಉರುಳಿವೆ. ಇನ್ನೂ ಕಾಲ ವಿಳಂಬವನ್ನು ನಾವು ಒಪ್ಪಿಕೊಳ್ಳಲಾಗುವುದಿಲ್ಲ ಎಂದರು.
ಸಂಪ್ರದಾಯದಂತೆ ರಾಜ್ಯ ೬ ನೇ ವೇತನ ಆಯೋಗದ ವರದಿಯು ಅನುಷ್ಟ್ಟಾನಗೊಂಡು ೫ ವರ್ಷಗಳ ಅವಧಿ ಪೂರ್ಣಗೊಂಡಿರುವುದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ದಿನಾಂಕ:೦೧-೦೭-೨೦೨೨ರಿಂದ ಪರಿಷ್ಕರಣೆಗೊಳಿಸಬೇಕಾಗಿತ್ತು ಎಂದ ಅವರು, ಸಂಘದ ಒತ್ತಡದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಕೆ.ಸುಧಾಕರ್‌ರಾವ್ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ೭ನೇ ವೇತನ ಆಯೋಗವನ್ನು ರಚಿಸಿ, ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು. ಆದರೆ, ಸರ್ಕಾರವು ಸಕಾಲದಲ್ಲಿ ವರದಿ ಪಡೆಯದೆ ಎರಡು ಬಾರಿ ಅವಧಿಯನ್ನು ವಿಸ್ತರಿಸಿರುವುದು ನೌಕರರಲ್ಲಿ ಅತೀವ ಬೇಸರವನ್ನುಂಟು ಮಾಡಿದೆ ಎಂದರು.
ವೇತನ ಆಯೋಗವು ಮಾರ್ಚ್ ಮಾಹೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವೇತನ ಆಯೋಗ ರಚನೆಯಾಗಿ ೧೯ ತಿಂಗಳುಗಳೇ ಕಳೆದಿವೆ. ವೇತನ ಆಯೋಗದ ಮುಂದೆ ಸಂಘವು ನೌಕರರ ವೇತನ-ಭತ್ಯೆಗಳ ಸಂಬಂಧ ಸಮಗ್ರ ವರದಿಯನ್ನು ಸಿದ್ದಪಡಿಸಿ ಶೇ.೪೦% ಫಿಟ್‌ಮೆಂಟ್ ಸೌಲಭ್ಯ ನೀಡಲು ಮನವಿಯನ್ನು ಸಲ್ಲಿಸಿತ್ತು. ಈ ಮಧ್ಯೆ ಸಂಘವು ೨೦೨೩ರ ಮಾರ್ಚ್ ತಿಂಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡ ಪರಿಣಾಮ ಸರ್ಕಾರವು ೨೦೨೩ರ ಏಪ್ರಿಲ್ ಮಾಹೆಯಿಂದ ಅನ್ವಯವಾಗುವಂತೆ ಶೇ. ೧೭% ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ರಾಜ್ಯ ೭ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬAಧ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಸಂಘದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದಾಗ್ಯೂ, ನೀತಿ ಸಂಹಿತೆ ಮುಗಿದ ನಂತರ ನೀಡುವ ಭರವಸೆಯನ್ನು ನೀಡಿದ್ದರು ಎಂದವರು ನುಡಿದರು.
ರಾಜ್ಯದ ವಿವಿಧ ಇಲಾಖೆಗಳಲ್ಲಿ ೨.೬೦ ಲಕ್ಷ ಖಾಲಿ ಹುದ್ದೆಗಳಿದ್ದು, ಆ ಕಾರ್ಯವನ್ನು ಹಾಲಿ ಇರುವ ಸರ್ಕಾರಿ ನೌಕರರು ಒತ್ತಡದ ನಡುವೆ ಕಾರ್ಯನಿರ್ವಹಿಸುವ ಮೂಲಕ ಸರ್ಕಾರಕ್ಕೆ ಪ್ರತಿ ವರ್ಷ ವಾರ್ಷಿಕ ಅಂದಾಜು ೮೫೦೦ ಕೋಟಿ ಉಳಿತಾಯವಾಗುತ್ತಿದೆ. ರಾಜ್ಯ ೭ನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸಿ ನಾಲ್ಕು ತಿಂಗಳು ಪೂರ್ಣಗೊಂಡರೂ ಮಾನ್ಯ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೇ ಇರುವುದರಿಂದ ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಸಹಜವಾಗಿಯೇ ವೇತನ ಪರಿಷ್ಕರಣೆ ವಿಳಂಬವಾಗುವುದೆಂಬ ಆತಂಕಕ್ಕೆ ಒಳಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರ ಹಾಗೂ ಸಂಘಟನೆಯ ವಿರುದ್ಧ ಅಸಮದಾನವನ್ನು ವ್ಯಕ್ತಪಡಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ ಎಂದರು.
ರಾಜ್ಯ ಸಂಘವು ೨೦೨೪ ಫೆಬ್ರವರಿಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿದ್ದ ಮುಖ್ಯಮಂತ್ರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದ ೨.೫೦ ಲಕ್ಷ ಸರ್ಕಾರಿ ನೌಕರರ ಸಮ್ಮುಖದಲ್ಲಿ ರಾಜ್ಯ ೭ನೇ ವೇತನ ಆಯೋಗವು ವರದಿ ನೀಡಿದ ನಂತರ ಅನುಷ್ಠಾನಗೊಳಿಸುವ ಸ್ಪಷ್ಟ ಭರವಸೆ ನೀಡಿದ್ದರು. ರಾಜ್ಯ ೭ನೇ ವೇತನ ಆಯೋಗವು ಅಂತಿಮವಾಗಿ ೨೦೨೪ರ ಮಾರ್ಚ್ನಲ್ಲಿ ಶೇ.೨೭.೫ ಫಿಟ್‌ಮೆಂಟ್ ಸೌಲಭ್ಯದೊಂದಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದರು.
ಸಂಘದ ಮತ್ತೊಂದು ಪ್ರಮುಖ ಬೇಡಿಕೆಯಾದ ನೂತನ ಪಿಂಚಣಿಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ ೨೦೨೩ರ ಮಾರ್ಚ್ನಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಇದುವರೆವಿಗೂ ಒಂದೂ ಸಭೆಯನ್ನು ನಡೆಸಿಲ್ಲ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನವನ್ನು ಸಹ ನಡೆಸಿರುವುದಿಲ್ಲ. ಅಲ್ಲದೆ ಈ ಸಂಬAಧ ಸರ್ಕಾರಕ್ಕೆ ಯಾವುದೇ ವರದಿಯನ್ನು ಇಲ್ಲಿಯವರೆವಿಗೂ ನೀಡದಿರುವುದು ನೌಕರರಲ್ಲಿ ಅತೀವ ನೋವನ್ನುಂಟು ಮಾಡಿದೆ ಎಂದರು.
ಚುನಾವಣಾ ಪ್ರಣಾಳಿಕೆಯಲ್ಲಿಯೂ ಸರ್ಕಾರ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆಯನ್ನು ನೀಡಿತ್ತು. ಕೆಲವು ನೆರೆಯ ಕೆಲವು ರಾಜ್ಯಗಳಲ್ಲಿ ಎನ್.ಪಿ.ಎಸ್. ರದ್ದುಪಡಿಸಿ ಓ.ಪಿ.ಎಸ್. ಜಾರಿಗೊಳಿಸಲು ಆದೇಶ ಹೊರಡಿಸಿವೆ. ಎನ್.ಪಿ.ಎಸ್. ಯೋಜನೆಯಲ್ಲಿ ನೇಮಕಗೊಂಡು ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ ಮಾಸಿಕ ಕೇವಲ ರೂ.೧೫೦೦ ಪಿಂಚಣಿ ಲಭ್ಯವಾಗುತ್ತಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨.೫೦ ಲಕ್ಷ ಎನ್.ಪಿ.ಎಸ್ ಯೋಜನೆ ವ್ಯಾಪ್ತಿಯ ನೌಕರರ ಸಂಧ್ಯಾಕಾಲದ ಬದುಕು ಆರ್ಥಿಕ ಭದ್ರತೆಯಿಲ್ಲದೆ ದುಸ್ತರಗೊಳ್ಳುತ್ತಿದ್ದು, ಸರ್ಕಾರ ಅಂತಹ ನೌಕರರ ಕುಟುಂಬದ ನೆರವಿಗೆ ಧಾವಿಸಬೇಕಾದ ತುರ್ತು ಅಗತ್ಯವಿದೆ ಎಂದರು.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಗೆ ಈ ಹಿಂದಿನ ರಾಜ್ಯ ಸರ್ಕಾರವು ೨೦೨೧-೨೨ರ ಆಯವ್ಯದಲ್ಲಿ ಘೋಷಿಸಿತ್ತು. ಸಚಿವ ಸಂಪುಟದ ಅನುಮೋದನೆ ಪಡೆದು ಈ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ನಿರ್ವಹಣೆ ಮಾಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಜವಾಬ್ದಾರಿಯನ್ನು ನೀಡಿ ೨೦೨೨ರ ಸೆಪ್ಟಂಬರ್‌ನಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ಈ ಯೋಜನೆಯನ್ನು ೨೦೨೩ರ ಮಾರ್ಚ್ನಲ್ಲಿ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದ್ದರು ಎಂದ ಅವರು, ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗದು ಎಂದರು.
ರಾಜ್ಯದಲ್ಲಿ ೨.೬೦ ಲಕ್ಷ ಖಾಲಿ ಹುದ್ದೆಗಳಿದ್ದು, ಹಾಲಿ ನೌಕರರು ಖಾಲಿ ಹುದ್ದೆಗಳ ಕಾರ್ಯಭಾರವನ್ನೂ ಸಹ ನಿರ್ವಹಿಸುತ್ತಿರುವುದರಿಂದ ನೌಕರರು ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಅವಶ್ಯವಿರುವ ಚಿಕಿತ್ಸೆ ಪಡೆಯುವಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಯೋಜನೆಯ ಅನುಷ್ಟಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಡಿ.ಟಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ಎಸ್.ಆರ್.ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಡಾ|| ಸಿ.ಎ.ಹಿರೇಮಠ್, ಗೌರವಾಧ್ಯಕ್ಷ ಆರ್.ಪಾಪಣ್ಣ, ಹಿರಿಯ ಉಪಾಧ್ಯಕ್ಷ ಕೆ.ಪ್ರಸನ್ನ ಸೇರಿದಂತೆ ಸಹಸ್ರಾರು ಸಂಖ್ಯೆಯ ಉಪಸ್ಥಿತರಿದ್ದರು. ಶಾಸಕರಿಗೆ ಮನವಿ ನೀಡಿದ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...