Government Ayurvedic Hospital ಕುಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯೊಂದು ತನ್ನ ಗುಣಮಟ್ಟಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನ ಆಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸಾಗರ ತಾಲೂಕಿನ ಪುರಪ್ಪೆಮನೆ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯು ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆ ಎಂಬ ಪ್ರಶಸ್ತಿಗೆ ಭಾಜನವಾದ ಹಿನ್ನಲೆಯಲ್ಲಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪತಾಂಜಲಿ ಅವರಿಗೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸಂಯುಕ್ತವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಗ್ರಾಮದ ಸಮಸ್ತ ನಾಗರೀಕರ ಪರವಾಗಿ ಡಾ|| ಪತಾಂಜಲಿ ಅವರನ್ನು ಶಾಸಕ ಬೇಳೂರು ಅಭಿನಂದಿಸಿದರು.
ಈ ವೇಳೆ ಅವರು ಮಾತನಾಡಿ, ಡಾ.ಪತಾಂಜಲಿ ಅವರ ಸೇವೆ ಸ್ವಾಗತರ್ಹ. ಉಳಿದಿರುವ ಅವರ ಮೂರು ವರ್ಷದ ಸೇವೆಯಲ್ಲಿ ಅವರು ಕನಸು ನನಸಾಗಿಸಲು ‘ಪಂಚಕರ್ಮ ಚಿಕಿತ್ಸೆ’ ನೂತನ ಘಟಕ ಆರಂಭಕ್ಕೆ ಅಗತ್ಯವಿರುವ ಅನುದಾನ ನೀಡುವ ಭರವಸೆ ನೀಡಿದರು.
ಗ್ರಾ.ಪಂ. ಮಾಜಿ ಸದಸ್ಯ, ಅಭಿನಂದನಾ ಸಮಾರಂಭದ ಅಯೋಜಕ ಎ.ಎನ್. ಮೃತ್ಯುಂಜಯ ಪ್ರಾಸ್ತಾವಿಕ ಮಾತನಾಡಿ, ಡಾ. ಪತಾಂಜಲಿ ಅವರ ತಂದೆ ಸಹ ಇದೇ ಊರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಜನಮನ್ನಣೆಗಳಿದ್ದರು. ಆ ಕಾಲಕ್ಕೆ ಒಂದು ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಬೇಕೆಂಬ ತುಡಿತ ಅವರಲ್ಲಿತ್ತು.
Government Ayurvedic Hospital ಅದು ಸಾಧ್ಯವಾಗಿರಲಿಲ್ಲ. ಆದರೆ, ಡಾ. ಪತಂಜಲಿ ವೈದ್ಯರಾಗಿ ಸೇವೆಗೆ ಸೇರಿ ಈ ಗ್ರಾಮಕ್ಕೆ ಬಂದ ಬಳಿಕ ಅಪ್ಪನ ಕನಸನ್ನು ಪೂರ್ಣಗೊಳಿಸಿದರು. ಈ ಆಯುರ್ವೇದ ಸರ್ಕಾರಿ ಆಸ್ಪತ್ರೆ ಜಿಲ್ಲೆಯಲ್ಲಿ ಹಲವು ಪ್ರಥಮಗಳ ಸೃಷ್ಠಿಗೆ ಸಾಕ್ಷಿಯಾಗಿ ನಿಂತಿದೆ. ಅಲ್ಲದೆ, ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆ ಎಂಬ ಪ್ರಶಸ್ತಿಗೂ ಇಂದು ಭಾಜನವಾಗಿದೆ.
ಈ ಎಲ್ಲಾ ಕಾರ್ಯಕ್ಕೂ ಡಾ. ಪತಾಂಜಲಿ ಅವರ ನಿರಂತರ ಪರಿಶ್ರಮವೇ ಕಾರಣವೆಂದರು.