Stop Plastic Use ಮಾನವ ಆಧುನಿಕ ದಿನಗಳಲ್ಲಿ ಯಾವುದಾದರು ಒಂದು ಹೊಸ ಆವಿಷ್ಕಾರಗಳನ್ನು ಮಾಡುತ್ತೇಲೆ ಬಂದಿದ್ದಾನೆ. ಅದು ಅವನ ಉಪಯೋಗಕ್ಕಾಗಿ ಅಥವಾ ಪ್ರಯೋಗಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ಆದರೆ ಇಂತಹ ಆವಿಷ್ಕಾರಗಳಲ್ಲಿ ಮಾನವರಿಗೆ ಮಾತ್ರ ಅನುಕೂಲವಾಗುವುದನ್ನು ಕಂಡು ಹಿಡಿಯುತ್ತಾನೆ, ತನ್ನ ಸುತ್ತಮುತ್ತಲಿನ ಪರಿಸರದ ಬಗ್ಗೆ ಯೋಚನೆ ಮಾಡುವುದಿಲ್ಲ. ಅದೇ ರೀತಿಯಲ್ಲಿ ಕಂಡುಹಿಡಿದ ಒಂದು ವಸ್ತುವೇ ಈ ಪ್ಲಾಸ್ಟಿಕ್ ಎನ್ನಬಹುದು.
ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯು ಮಾನವನ ಅವಿಭಾಜ್ಯ ಅಂಗದ ರೀತಿಯಲ್ಲಿ ತನ್ನ ನೆಲೆಯನ್ನು ವಿಸ್ತರಸಿಕೊಂಡಿದೆ. ದಿನ ಬಳಕೆ ವಸ್ತುವಾಗಿ, ಮೆನೆಯ ಒಳಗಿನ ಅಲಂಕಾರಿಕ ವಸ್ತುವಾಗಿ, ಪೀಠೋಪಕರಣಗಳು, ವಿದ್ಯುತ್ ಉಪಕರಣಗಳು ಮತ್ತು ವಿವಿಧ ರೀತಿಯ ನಿಯಮಿತ ಉಪಯೋಗ ಪಡೆಯಲು ಪ್ಲಾಸ್ಟಿಕ್‍ಗೆ ಅವಲಂಬಿತನಾಗಿದ್ದಾನೆ.
ಪ್ಲಾಸ್ಟಿಕ್ ಬ್ಯಾಗನ್ನು ಬಳಸುವುದು ತುಂಬಾ ಸುಲಭವಾದ ಮಾರ್ಗ. ಅದಕ್ಕಾಗಿ ಎಲ್ಲ ಜನರು ಪ್ಲಾಸ್ಟಿಕ್ ಬ್ಯಾಗ್‍ಗೆ ಮರುಳಾಗಿದ್ದಾರೆ . ಮಾರ್ಕೆಟ್ ಗೆ ಹೋಗಲಿ, ಶಾಪಿಂಗ್ ಹೋಗಲಿ ಅಥವಾ ಯಾವುದೇ ರೀತಿಯ ವಸ್ತುವನ್ನು ತರುವುದಕ್ಕೆ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬ್ಯಾಗನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಚಿಕ್ಕದಾದ ಅಂಗಡಿಯಿಂದ ದೊಡ್ಡ ಶಾಪಿಂಗ್ ಮಾಲ್‍ವರೆಗೆ ಪ್ಲಾಸ್ಟಿಕ್ ಬಳಕೆ ಯಥೇಚ್ಚವಾಗಿದೆ.
ಹೋಟೆಲ್‍ಗಳಲ್ಲಿ ಪಾರ್ಸೆಲ್ ಮಾಡಲು ಪ್ಲಾಸ್ಟಿಕ್ ಕವರ್ ಬಳಸುತ್ತಾರೆ. ಆದರೆ ಈ ಪ್ಲಾಸ್ಟಿಕ್ ಬ್ಯಾಗ್‍ಗಳ ಉಪಯೋಗವು ಮಿತಿಮೀರಿದ ಹಂತ ತಲುಪಿದ್ದು ಇದನ್ನು ತಡೆಯುವ ಉದ್ದೇಶದಿಂದ ಜು.3 ರಂದು ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಆಚರಿಸಲಾಗುತ್ತದೆ.
ಪರಿಸರ ಸಂರಕ್ಷಣೆಗಾಗಿ 2002 ರಲ್ಲಿ ಬಾಂಗ್ಲಾದೇಶವು ವಿಶ್ವದಲ್ಲೇ ಮೊದಲು ಪ್ಲಾಸ್ಟಿಕ್ ಬ್ಯಾಗ್ ನಿಷೇಧ ಮಾಡಿತು. 2008 ರಲ್ಲಿ ರುವಾಂಡ ದೇಶವು ಪ್ಲಾಸ್ಟಿಕ್ ಚೀಲಗಳು ಮತ್ತು ಪ್ಯಾಕೇಜಿಂಗ್ ಮೇಲೆ ನಿಷೇಧವನ್ನು ವಿಧಿಸುತ್ತದೆ. ನಂತರ ಹತ್ತು ವರ್ಷಗಳಲ್ಲಿ ವಿಶ್ವದ ಮೊದಲ ಪ್ಲಾಸ್ಟಿಕ್ ಮುಕ್ತ ದೇಶವಾಗಿ ಗುರುತಿಸಿಕೊಳ್ಳುತ್ತದೆ.
Stop Plastic Use ಭಾರತ ದೇಶವು 2021 ರ ಆಗಸ್ಟ್ 21 ರಂದು ಪ್ಲಾಸ್ಟಿಕ್‍ಬ್ಯಾಗ್ ನಿಷೇಧಿಸಿ ಅದೇಶಿಸುತ್ತದೆ. ಹೀಗೆ ಪ್ಲಾಸ್ಟಿಕ್‍ಬ್ಯಾಗ್ ನಿಷೇಧವಿದ್ದರೂ ಜನರು ಮಾತ್ರ ಬಳಕೆಯನ್ನು ಮಾತ್ರ ಕಡಿಮೆ ಮಾಡಿಲ್ಲ. ಇಪಿಎ ಸಂಶೋಧನೆಯ ಪ್ರಕಾರ ಜಾಗತಿಕವಾಗಿ ನಾವು ಪ್ರತಿ ವರ್ಷಕ್ಕೆ ಸುಮಾರು ಒಂದು ಟ್ರಿಲಿಯನ್ ನಷ್ಟು ಬಿಸಾಡಬಹುದಾದ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತೇವೆ. ಹಾಗೂ ವಿಶ್ವಾದ್ಯಂತ ಪ್ರತಿ ನಿಮಿಷಕ್ಕೆ ಒಂದು ಮಿಲಿಯನ್ ಚೀಲಗಳನ್ನು ಬಳಸುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಪ್ಲಾಸ್ಟಿಕ್ ಬ್ಯಾಗನ್ನು ಏಕೆ ನಿಷೇಧ ಮಾಡಬೇಕೆಂದು ನೋಡುವುದಾದರೆ, ಭೂಮಿಯ ಮೇಲಿನ ವಾತಾವರಣವನ್ನು ಮಲಿನಗೊಳಿಸುತ್ತದೆ. ಪ್ಲಾಸ್ಟಿಕ್ ಚೀಲಗಳು ಮನುಷ್ಯನ ಆರೋಗ್ಯಕ್ಕೆ ಹಾನಿಕರಕವಾಗಿದೆ. ಆಹಾರ ಪದಾರ್ಥಗಳನ್ನು ಅದರಲ್ಲಿ ತಂದು ಸೇವಿಸಿದರೆ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುವ ಸಾಧ್ಯತೆ ಇದೆ. ಈ ಪ್ಲಾಸ್ಟಿಕ್ ಚೀಲಗಳು ಚರಂಡಿ ಮತ್ತು ನೀರಿನ ಮೂಲಗಳನ್ನು ಮುಚ್ಚಿಕೊಂಡಿರುತ್ತದೆ, ಇದರಿಂದ ಕೊಳಚೆ ನೀರು ನಿಂತುಕೊಂಡು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಖಾಯಿಲೆಗಳು ಹೊರಡುವ ಸಾಧ್ಯತೆ ಇದೆ. ಮತ್ತು ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಯಾಗಲು ಕಾರಣವಾಗುತ್ತದೆ. ಬೀದಿ ಬದಿಗಳು ಪ್ಲಾಸ್ಟಿಕ್ ಚೀಲಗಳಿಂದ ಕೂಡಿರುತ್ತದೆ.
ಭೂಮಿಯ ಮೇಲಿನ ಪ್ರತಿಯೊಂದು ಜೀವ ಸಂಕುಲಕ್ಕೂ ಪ್ಲಾಸ್ಟಿಕ್ ನಿಂದ ತೊಂದರೆ ಉಂಟಾಗುತ್ತದೆ. ಪ್ಲಾಸ್ಟಿಕ್ ತಯಾರಿಸಲು ಬಳಸುವ ಕಚ್ಚಾ ವಸ್ತುಗಳನ್ನು ನವೀಕರಿಸಲಾಗದ ಸಂಪನ್ಮೂಲಗಳಾದ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂನಿಂದ ಹೊರ ತೆಗೆಯಲಾಗುತ್ತದೆ, ಇದು ಜಾಗತಿಕವಾಗಿ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾಕಷ್ಟು ಶಕ್ತಿ ಸಂಪನ್ಮೂಲಗಳು ಬೇಕಾಗುತ್ತದೆ. 9 ಪ್ಲಾಸ್ಟಿಕ್ ಚೀಲಗಳನ್ನು ತಯಾರಿಸಲು ಸುಮಾರು ಒಂದು ಕಿಲೋಮೀಟರ್ ಕಾರನ್ನು ಓಡಿಸುವಷ್ಟು ಶಕ್ತಿ ಬೇಕಾಗುತ್ತದೆ. ವಿಷಕಾರಿ ರಾಸಾಯನಿಕ ಬಿಡುಗಡೆ ಮಾಡುವುದರಿಂದ ಹಸಿರು ಮನೆ ಪರಿಣಾಮ ಉಂಟಾಗುತ್ತದೆ. ಪ್ಲಾಸ್ಟಿಕ್ ಬ್ಯಾಗ್ ಜೈವಿಕವಾಗಿ ವಿಘಟಿಸುವುದಿಲ್ಲ್ಲ, ನೂರಾರು ವರ್ಷಗಳಾದರೂ ಅವು ಕೊಳೆಯುವುದಿಲ್ಲ. ಬದಲಾಗಿ ರಾಸಾಯನಿಕ ಬಿಡುಗಡೆ ಮೂಲಕ ಮಣ್ಣಿನ ಫಲವತ್ತತೆ ಕಡಿಮೆ ಮಾಡುತ್ತದೆ.
ಪ್ಲಾಸ್ಟಿಕ್ ಬ್ಯಾಗ್ ಬಳಕೆಯಿಂದ ಪ್ರತಿಯೊಂದು ಜೀವಿಗೂ ಮಾರಣಾಂತಿಕ ಸಮಸ್ಯೆಗಳು ಉಂಟಾಗುತ್ತದೆ. ಪ್ರಮುಖವಾಗಿ ನಗರ ಪ್ರದೇಶಗಳಲ್ಲಿ ಆಹಾರವನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೊಗುತ್ತಾರೆ. ಇಂತಹ ಆಹಾರ ಸೇವಿಸಿದ ನಂತರ ಅದನ್ನು ಹೊರಗಡೆ ಎಸೆಯುತ್ತಾರೆ. ಹೀಗೆ ಎಸೆದ ಪ್ಲಾಸ್ಟಿಕ್ ವಸ್ತುವನ್ನು ಹಸು, ಕುದುರೆ, ಎಮ್ಮೆ, ಕತ್ತೆ ಮತ್ತು ಮುಂತಾದ ಮೂಖ ಪ್ರಾಣಿಗಳು ಸೇವಿಸುತ್ತವೆ. ಅವುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕರಗುವುದಿಲ್ಲ, ಅಲ್ಲಿ ರಾಸಾಯನಿಕ ಉತ್ಪತ್ತಿಯಾಗಿ ಮರಣ ಹೊಂದುತ್ತಿರುವುದು ಹೆಚ್ಚಾಗಿ ನೋಡುತ್ತಿದ್ದೆವೆ.
ಸಮುದ್ರ, ನದಿ ಮತ್ತು ಕೆರೆ ಇತ್ಯಾದಿ ಜಲ ಮೂಲಗಳಿಗೆ ನೇರವಾಗಿ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಎಸೆಯುವುದರ ಮೂಲಕ ಅಥವಾ ಮಳೆಯ ನೀರಿನ ಮೂಲಕ ಸೇರಿಕೊಂಡಿರುತ್ತದೆ. ಅದರಿಂದ ಜಲಚಲಗಳಾದ ಮೀನುಗಳು, ಆಮೆಗಳು, ನೀರುನಾಯಿಗಳು ಮತ್ತು ಸರಿಸೃಪಗಳಿಗೆ ತೊಂದರೆ ಉಂಟಾಗುತದೆ. ಪ್ಲಾಸ್ಟಿಕ್ ಬ್ಯಾಗ್‍ಗಳು ಅವುಗಳಿಗೆ ಸಿಕ್ಕಿಕೊಂಡು ನೀರಿನಲ್ಲಿ ಸಂಚರಿಸಲು ಮತ್ತು ಆಹಾರ ಸೇವನೆ ಮಾಡಲು ತೊಂದರೆಯಾಗಿ ಮರಣ ಹೊಂದುತ್ತಿವೆ. ಪಕ್ಷಿಗಳು ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುವನ್ನು ಸೇವಿಸಿ ಸಾವಿಗೀಡಾಗುತ್ತಿವೆ.
ನಿಸರ್ಗದ ಮೇಲೆ ಪ್ಲಾಸ್ಟಿಕ್ ದುಷ್ಟಪರಿಣಾಮ ಬೀರುತ್ತಿದೆ. ಅರಣ್ಯದಲ್ಲಿ ಬಿಸಾಡುವುದರಿಂದ ವನ್ಯ ಜೀವಿಗಳೂ ಸೇವಿಸಿ ಅಪಾಯಕ್ಕೆ ಗುರಿಯಾಗುತ್ತವೆ. ಹೀಗೆ ಅನೇಕ ತರಹದ ಪರಿಣಾಮ ನೋಡುತ್ತೇವೆ.
ಸಮಸ್ಯೆ ನಿವಾರಣೆ ಹೇಗೆ?
ಪ್ಲಾಸ್ಟಿಕ್ ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆಯಲು ಬಹಳ ಸುಲಭವಾದ ಮಾರ್ಗವೆಂದರೆ, ಮೊದಲು ನೀವು ಇದರ ದುಷ್ಪರಿಣಾಮದ ಬಗ್ಗೆ ಅರಿತುಕೊಂಡು ಬಳಕೆಯನ್ನು ನಿಲ್ಲಿಸಬೇಕು. ಬಟ್ಟೆ, ಸೆಣಬು ಅಥವಾ ನೈಸರ್ಗಿಕವಾಗಿ ಸಿಗುವ ಅಂಶದಿಂದ ತಯಾರಿಸಿದ ಚೀಲಗಳನ್ನು ಬಳಸುವುದು ಉತ್ತಮ ಮಾರ್ಗವಾಗಿದೆ . ಪರಿಸರದ ಬಗ್ಗೆ ಅಮೂಲ್ಯವಾದ ಕಾಳಜಿಯನ್ನು ಹೊಂದಬೇಕು. ಪ್ರವಾಸಕ್ಕೆಂದು ತೆರಳಿದ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ನಿಮಗೆ ನೀಡುವ ಪ್ಲಾಸ್ಟಿಕ್ ಚೀಲವನ್ನು ನಿರಾಕರಿಸಿ, ಸ್ವೀಕರಿಸಬೇಡಿ . ಸುತ್ತಮುತ್ತಲಿನ ಪ್ರದೇಶದಲ್ಲಿನ ಪ್ಲಾಸ್ಟಿಕ್ ಚೀಲವನ್ನು ಒಂದೆಡೆ ಸಂಗ್ರಹಿಸಿ ಮಾಲಿನ್ಯ ತಡೆಗಟ್ಟಬಹುದು. ಹಾಗೂ ಸಾರ್ವಜನಿಕರಿಗೆ ಅರಿವಿನ ಕಾರ್ಯಕ್ರಮಗಳನ್ನು ನಡೆಸಬೇಕು.
ಪ್ಲಾಸ್ಟಿಕ್ ಬ್ಯಾಗ್ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕು. ಆಗ ಸಾರ್ವಜನಿಕರು ಮನೆಯಿಂದ ಪರಿಸರ ಸ್ನೇಹಿ ಚೀಲಗಳನ್ನು ಬಳಸುತ್ತಾರೆ. ಹೆಚ್ಚು ಹೆಚ್ಚು ಮರುಬಳಕೆ ಮಾಡುವ ಚೀಲಗಳನ್ನು ಬಳಸಬೇಕು. ಪ್ಲಾಸ್ಟಿಕ್ ಬ್ಯಾಗ್ ಬಳಕೆ ನಿಯಂತ್ರಿಸಲು ಸರ್ಕಾರವು ಹಲವು ಮಾರ್ಗಗಳನ್ನು ತಂದಿದೆ. ಪರಿಣಾಮಕಾರಿಯಾಗಿ ಅವುಗಳ ಪಾಲನೆಯಾಗಬೇಕು.
ಪ್ರಕೃತಿ ಮನುಷ್ಯನಿಗೆ ತನ್ನ ಮಡಿಲಿನಲ್ಲಿ ಜೀವ ನೀಡಿದೆ. ಆದರೆ ಇಂದು ಮಾನವ ನಿಸರ್ಗವನ್ನೇ ಪ್ಲಾಸ್ಟಿಕ್ ಎಂಬ ವಸ್ತುವಿನಿಂದ ಉಸಿರು ಕಟ್ಟಿಸಿದ್ದಾನೆ. ಉಸಿರುಕಟ್ಟದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿದೆ. ಮುಂದಿನ ಪೀಳಿಗೆಗಳಿಗೆ ಉತ್ತಮ ಪರಿಸರ ಉಳಿಸುವಲ್ಲಿ ನಮ್ಮೆಲ್ಲರ ಪಾತ್ರ ಬಹು ಮುಖ್ಯವಾಗಿದೆ.
ಮನೋಜ್.ಎಂ
ಅಪ್ರೆಂಟಿಸ್, ವಾರ್ತಾ ಇಲಾಖೆ